
ಮೈಸೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ರಾಜ್ಯೋತ್ಸವ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಗುರುವಾರ ಬಹುಮಾನ ವಿತರಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ
ಮೈಸೂರು; ‘ಕನ್ನಡ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಂದಿಗ್ದ ಸ್ಥಿತಿಯಲ್ಲಿರುವ ಕನ್ನಡದ ಬಳಕೆ ಹೆಚ್ಚಿಸಲು ಕನ್ನಡಿಗರು ಕಠಿಣ ಪರಿಶ್ರಮ ಪಡಬೇಕು’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.
ನಗರ ಹೊರವಲಯದ ಶೇಷಾದ್ರಿಪುರಂ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಳ್ಳಿ ಅನುಭವ, ಮಾತೃಭಾಷೆ ಶಿಕ್ಷಣ ಪಡೆದವರು ಉತ್ತಮಸ್ಥಾನ ತಲುಪುತ್ತಾರೆ ಎಂಬುದಕ್ಕೆ ಹಲವರ ನಿದರ್ಶನಗಳಿವೆ. ಆದರೆ, ಇತ್ತೀಚಿನ ವಿದ್ಯಮಾನದಲ್ಲಿ ಕನ್ನಡ ಹಲವು ಆತಂಕಗಳನ್ನು ಎದುರಿಸುತ್ತಿದೆ’ ಎಂದರು.
‘ಪೋಷಕರಲ್ಲಿ ಇಂಗ್ಲಿಷ್ ಒಲವು ಹೆಚ್ಚಿದೆ. ಸಾಲ ಮಾಡಿ, ಎಲ್ಲವನ್ನೂ ಕಳೆದುಕೊಂಡು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಸರ್ಕಾರವೂ ಎಲ್ಲವನ್ನೂ ಇಂಗ್ಲಿಷ್‌ಮಯಗೊಳಿಸುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಇನ್ನು ಕೆಲವು ದಶಕಗಳಲ್ಲಿ ಕನ್ನಡದ ಸ್ಥಿತಿ ಏನಾಗಬಹುದು ಎಂದು ಆತಂಕ ಶುರುವಾಗಿದೆ. ಕನ್ನಡ ಶಾಲೆಗಳು ಇಲ್ಲವಾಗುತ್ತಿವೆ. ಕನ್ನಡ ನಶಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಆರಂಭಿಸಿದರೂ, ಒಬ್ಬನೇ ವಿದ್ಯಾರ್ಥಿ ದಾಖಲಾಗಿದ್ದರಿಂದ ಸ್ಥಗಿತಗೊಂಡಿತು' ಎಂದು ವಿಷಾದಿಸಿದರು.
‘ಕನ್ನಡ ಉಳಿಸುವ ನಿಟ್ಟಿನಲ್ಲಿ ಸರ್ಕಾರ, ಪೋಷಕರು ಒಟ್ಟಾಗಿ ಯೋಚಿಸಬೇಕು' ಎಂದು ಸಲಹೆ ನೀಡಿದರು.
‘ರಾಜಧಾನಿಯಲ್ಲಿ ಹೊರ ರಾಜ್ಯದವರ ಹಿಂದಿ ಬಳಕೆಯು ಗಾಬರಿ ಮೂಡಿಸುವಂತಿದೆ. ದೈನಂದಿನ ವ್ಯವಹಾರಗಳಲ್ಲಿ ಹಿಂದಿಯೇ ಅಧಿಕೃತ ಭಾಷೆಯಂತಾಗಿದೆ. ಬೆಂಗಳೂರು, ಧಾರವಾಡದಲ್ಲಿ ಹಿಂದಿಯವರು ಹೆಚ್ಚಿದ್ದಾರೆ. ಇದೇ ವೇಳೆ ಕನ್ನಡಿಗರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಯೂ ಮೂಡುತ್ತದೆ’ ಎಂದರು.
‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಡಿಸಿಪಿ ಸುಂದರ್‌ರಾಜ್, ವಿಶ್ವನಾಥ್, ಪಾರ್ಥೇಗೌಡ, ಎಂ.ಆರ್.ಲೋಕೇಶ್, ತೆಂಕಮ್ಮ ಎಂ.ತೆರೇಸ, ಆಶಾ ವಿ., ಉದಯಶಂಕರ್, ಡಾ.ಸುಜಿತ್ ಚಂದ್ರಹಾಸ್, ರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ಚೈತ್ರಾ ಬಿ. ಅವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪದವಿ ಕಾಲೇಜಿನ ಸೌಮ್ಯಾ ಈರಪ್ಪ ಕೆ., ಪದವಿಪೂರ್ವ ಕಾಲೇಜಿನ ಅರ್ಚನಾ ಸ್ವಾಮಿ ಎನ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.