ADVERTISEMENT

ದರ್ಶನ್‌ ಮನವಿಗೆ ಸ್ಪಂದನೆ: ಮೃಗಾಲಯಕ್ಕೆ 3 ದಿನದಲ್ಲಿ ₹40 ಲಕ್ಷ ದೇಣಿಗೆ ಸಂಗ್ರಹ

ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್‌ ಮನವಿಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 22:10 IST
Last Updated 7 ಜೂನ್ 2021, 22:10 IST
ಮೃಗಾಲಯದ ಪ್ರಾಣಿಯೊಂದಿಗೆ ನಟ ದರ್ಶನ್–ಸಾಂದರ್ಭಿಕ ಚಿತ್ರ
ಮೃಗಾಲಯದ ಪ್ರಾಣಿಯೊಂದಿಗೆ ನಟ ದರ್ಶನ್–ಸಾಂದರ್ಭಿಕ ಚಿತ್ರ   

ಮೈಸೂರು: ಪ್ರಾಣಿಗಳನ್ನು ದತ್ತು ಪಡೆದು, ಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಮೃಗಾಲಯಗಳ ನೆರವಿಗೆ ನಿಲ್ಲುವಂತೆ ನಟ ದರ್ಶನ್‌ ಮನವಿ ಮಾಡಿದ ಬೆನ್ನಲ್ಲೇ, ಮೃಗಾಲಯ ಪ್ರಾಧಿಕಾರಕ್ಕೆ 3 ದಿನಗಳಲ್ಲಿ ₹40 ಲಕ್ಷಕ್ಕೂ ಅಧಿಕ ದೇಣಿಗೆ ಹರಿದು ಬಂದಿದೆ.

ಮೈಸೂರು, ಬನ್ನೇರುಘಟ್ಟ, ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ ಹಾಗೂ ಶಿವಮೊಗ್ಗ ಸೇರಿದಂತೆ 9 ಮೃಗಾಲಯಗಳಿವೆ. ದರ್ಶನ್ ಮನವಿ ನಂತರ ಈ ಒಂಬತ್ತೂ ಮೃಗಾಲಯಗಳಲ್ಲಿ ದೇಣಿಗೆ ಸಂಗ್ರಹ ಹೆಚ್ಚಿದೆ. ಇದರಲ್ಲಿ ಮೈಸೂರಿನ ಮೃಗಾಲಯಕ್ಕೆ ಅಧಿಕ ದೇಣಿಗೆ ಬಂದಿದೆ.

‘ದರ್ಶನ್‌ ಕರೆ ನೀಡಿದ್ದರಿಂದ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಅವರ ಅಭಿಮಾನಿಗಳು ಮೃಗಾಲಯ ಪ್ರಾಧಿಕಾರದ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು, ಡಿಜಿಟಲ್‌ ವೇದಿಕೆ ಮೂಲಕವೇ ದತ್ತು ಪಡೆಯುತ್ತಿದ್ದಾರೆ. ನಾವು ಕೂಡ ಡಿಜಿಟಲ್‌ ಪ್ರಮಾಣಪತ್ರ ವಿತರಿಸುತ್ತಿದ್ದೇವೆ’ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಪ್ರತಿಕ್ರಿಯಿಸಿದರು.

ADVERTISEMENT

ದರ್ಶನ್‌ ಅವರಿಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಕೃತಜ್ಞತೆ ಸಲ್ಲಿಸಿದ್ದಾರೆ.

ದತ್ತು ಪಡೆದವರಿಗೆ ಮೈಸೂರು ಮೃಗಾಲಯದಿಂದ ನೀಡಿರುವ ಪ್ರಮಾಣಪತ್

‘ವರ್ಷಕ್ಕೆ ₹ 70 ಕೋಟಿ ಖರ್ಚು’

‘ರಾಜ್ಯದ 9 ಮೃಗಾಲಯಗಳಲ್ಲಿ ಅಂದಾಜು 800 ಸಿಬ್ಬಂದಿ ಇದ್ದಾರೆ. ಸುಮಾರು 5 ಸಾವಿರ ಪ್ರಾಣಿಗಳಿವೆ. ಸಿಬ್ಬಂದಿಯ ವೇತನ, ಪ್ರಾಣಿಗಳ ಆಹಾರ ಹಾಗೂ ನಿರ್ವಹಣೆ ವೆಚ್ಚ ಸೇರಿ ವರ್ಷಕ್ಕೆ ಸುಮಾರು ₹ 70 ಕೋಟಿ ಖರ್ಚಾಗುತ್ತದೆ’ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳಿದರು. ‘ಜನರು ನೀಡುವ ಟಿಕೆಟ್‌ ದರದಿಂದಲೇ ಎಲ್ಲಾ ಮೃಗಾಲಯಗಳ ನಿರ್ವಹಣೆ ನಡೆಯುತ್ತಿದೆ. ಲಾಕ್‌ಡೌನ್‌ ಕಾರಣ ಈಗ ತೊಂದರೆ ಉಂಟಾಗಿದೆ. ಸದ್ಯ ನೆರವು ಹರಿದು ಬರುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.