ADVERTISEMENT

ಮೈಸೂರು | ಸಾಧನೆಗೆ ಕನ್ನಡ ಮಾಧ್ಯಮ ಅಡ್ಡಿಯಲ್ಲ: ಎ.ಎಚ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 2:21 IST
Last Updated 7 ಆಗಸ್ಟ್ 2025, 2:21 IST
ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಎಚ್‌.ವಿಶ್ವನಾಥ್‌, ನ್ಯಾ.ಸ.ರ.ಮಾಣಿಕ್ಯ, ರಾ.ನಂ.ಚಂದ್ರಶೇಖರ, ಸ.ರ.ಸುದರ್ಶನ, ಬಾ.ಹ.ಉಪೇಂದ್ರ, ಮ.ಚಂದ್ರಶೇಖರ್, ಬಿ.ವಿ.ರವಿಕುಮಾರ್, ಹೊಸೂರು ನಾಗರಾಜ್, ಶೀಲಾ, ಎಚ್.ಜಿ.ಕೃಷ್ಣಪ್ಪ ಭಾಗವಹಿಸಿದ್ದರು
ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಎಚ್‌.ವಿಶ್ವನಾಥ್‌, ನ್ಯಾ.ಸ.ರ.ಮಾಣಿಕ್ಯ, ರಾ.ನಂ.ಚಂದ್ರಶೇಖರ, ಸ.ರ.ಸುದರ್ಶನ, ಬಾ.ಹ.ಉಪೇಂದ್ರ, ಮ.ಚಂದ್ರಶೇಖರ್, ಬಿ.ವಿ.ರವಿಕುಮಾರ್, ಹೊಸೂರು ನಾಗರಾಜ್, ಶೀಲಾ, ಎಚ್.ಜಿ.ಕೃಷ್ಣಪ್ಪ ಭಾಗವಹಿಸಿದ್ದರು   

ಮೈಸೂರು: ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಷ್ಟೇ ಸಮರ್ಥರು’ ಎಂದು ವಿಧಾನ ಪರಿಷತ್‌ ಸದಸ್ಯ ಎ.ಎಚ್‌.ವಿಶ್ವನಾಥ್‌ ಹೇಳಿದರು.

ಇಲ್ಲಿನ ನೃಪತುಂಗ ಕನ್ನಡ ಶಾಲೆ ಹಾಗೂ ಬೆಂಗಳೂರಿನ ಕನ್ನಡ ಗೆಳೆಯರ ಬಳಗದಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಮೊದಲ 10 ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬಹುಮಾನ ವಿತರಿಸಿ ಮಾತನಾಡಿದರು.

‘ಇಂದು ಸನ್ಮಾನಿತರಾದ 12 ವಿದ್ಯಾರ್ಥಿಗಳ ಫಲಿತಾಂಶವು ಕನ್ನಡ ಮಾಧ್ಯಮದಲ್ಲಿಯೂ ಉನ್ನತ ಸಾಧನೆ ಸಾಧ್ಯ ಎಂಬುದನ್ನು ಸಾಬೀತು ಮಾಡಿದೆ. ಮೊದಲ ಸ್ಥಾನ ಪಡೆದ ವಿದ್ಯಾರ್ಥಿ ಜಿ.ಎನ್.ಪ್ರಜ್ವಲ್ ಶೇ 98.7 ಅಂಕಗಳನ್ನು ಪಡೆದಿದ್ದಾನೆ. 10ನೇ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಶೇ 96.7 ಅಂಕ ಪಡೆದಿದ್ದಾರೆ’ ಎಂದು ಶ್ಲಾಘಿಸಿದರು.

ADVERTISEMENT

‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೊಡ್ಡ ಆಶಯಗಳನ್ನಿಟ್ಟುಕೊಂಡು ಓದಬೇಕು. ಕೇವಲ ಸರ್ಕಾರಿ ಕೆಲಸಗಳಿಗಾಗಿ ಮಾತ್ರ ಓದದೇ, ಕನ್ನಡವನ್ನು ಕಟ್ಟುವ, ಬೆಳೆಸುವ ಮತ್ತು ಬೆಳೆಯುವ ಕೆಲಸ ಮಾಡಬೇಕಿದೆ’ ಎಂದರು.

‘ನಾನು ಶಿಕ್ಷಣ ಸಚಿವ ಆಗಿದ್ದಾಗ ಬಿಸಿಯೂಟ ಮುಂತಾದ ಸೌಲಭ್ಯಗಳನ್ನು ಒದಗಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದೆ. ಇಂಥ ಅನೇಕ ಸೌಲಭ್ಯಗಳ ಹೊರತಾಗಿಯೂ ಇಂದು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಬೇಸರ ತಂದಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯಾ. ಸ.ರ.ಮಾಣಿಕ್ಯ ಮಾತನಾಡಿ, ‘ತಾವು ‌ಪಿಯುಸಿವರೆಗೂ ಅದರಲ್ಲೂ ವಿಜ್ಞಾನ ವಿಷಯವನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿದೆ. ನ್ಯಾಯಾಲಯದಲ್ಲಿ ಕೆಲಸ ಮಾಡುವಾಗ ಕೆಲವು ತೀರ್ಪುಗಳನ್ನು ಇಂಗ್ಲಿಷ್‌ನಲ್ಲಿ ಬರೆಯಬೇಕಾಗಿ ಬಂದರೂ ನಾನು ಹಿಂಜರಿಕೆ ತೊರಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ್ದು ಹಲವು ತೀರ್ಪುಗಳನ್ನು ಕನ್ನಡದಲ್ಲಿ ಬರೆಯಲು ಪ್ರೇರೇಪಣೆ ಮತ್ತು ಶಕ್ತಿಯನ್ನು ನೀಡಿತು’ ಎಂದರು.

ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ ಮಾತನಾಡಿ, ‘ಚಿದಾನಂದಮೂರ್ತಿ ಅವರ ನೆನಪಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸ್ಮರಿಸಿದರು.

ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಜಿ.ಎನ್.ಪ್ರಜ್ವಲ್ (ದೊಡ್ಡ ಮುಲಗೂಡು), ಎಂ.ಮಹೇಶ್ (ದೇವಲಾಪುರ), ಎನ್.ಎಂ.ವಿನುತಾ (ಹನುಮನಹಳ್ಳಿ), ಪ್ರೇಮಾಂಜಲಿ (ಡಿ.ಸಾಲುಂಡಿ), ಸಿ.ಬಿ.ನಿತ್ಯಾ (ಹರವೆ), ಕೀರ್ತನಾ.ಜೆ (ಚಟ್ಟನಹಳ್ಳಿ), ರಮ್ಯಶ್ರೀ (ವರಕೋಡು), ಸುಪ್ರಿತಾ (ಡಿ.ಸಾಲುಂಡಿ), ಎಸ್.ನಿತಿನ್ (ಉದ್ಬೂರು), ಎಸ್.ಸುನೀತಾ (ಮೈಸೂರು), ಡಿ.ಎಂ.ಸಿಂಚನಾ (ಮುಳ್ಳೂರು) ಮತ್ತು ಕೆ.ಶಿವಾನಿ (ಕನಕಗಿರಿ, ಮೈಸೂರು) ಅವರನ್ನು ಸನ್ಮಾನಿಸಲಾಯಿತು.

ನೃಪತುಂಗ ಕನ್ನಡ ಶಾಲೆಯ ಉಪಾಧ್ಯಕ್ಷ ಸ.ರ.ಸುದರ್ಶನ, ಕನ್ನಡ ಗೆಳೆಯರ ಬಳಗದ ಬಾ.ಹ.ಉಪೇಂದ್ರ, ಮ.ಚಂದ್ರಶೇಖರ್, ಬಿ.ವಿ.ರವಿಕುಮಾರ್, ಹೊಸೂರು ನಾಗರಾಜ್, ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೀಲಾ, ಶಾಲೆಯ ಕಾರ್ಯದರ್ಶಿ ಎಚ್.ಜಿ.ಕೃಷ್ಣಪ್ಪ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.