ADVERTISEMENT

ಕನ್ನಡಕ್ಕಾಗಿ ಕಿರು ಬೆರಳನ್ನೂ ಎತ್ತದ ಕನ್ನಡಿಗರು: ಸಿಪಿಕೆ ಬೇಸರ

ಕನ್ನಡಿಗರಿಗೆ ಕನ್ನಡವೇ ಗತಿ ಎಂದು ಪ್ರತಿಪಾದಿಸಿದ ಗಣ್ಯರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:21 IST
Last Updated 2 ಮಾರ್ಚ್ 2020, 10:21 IST
ನಂಜನಗೂಡಿನಲ್ಲಿ ಭಾನುವಾರ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ದೇವನೂರು ಶಂಕರ್ ಮಾತನಾಡಿದರು
ನಂಜನಗೂಡಿನಲ್ಲಿ ಭಾನುವಾರ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ದೇವನೂರು ಶಂಕರ್ ಮಾತನಾಡಿದರು   

ನಂಜನಗೂಡು: ಕನ್ನಡಕ್ಕಾಗಿ ಕನ್ನಡಿಗರು ಕಿರುಬೆರಳನ್ನೂ ಎತ್ತುತ್ತಿಲ್ಲ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕುವೆಂಪು ಅವರು ಕನ್ನಡಕ್ಕಾಗಿ ಕೈ ಎತ್ತು ಎಂದು ಹೇಳಿದ್ದಾರೆ. ಆದರೆ, ಈಗ ಕನ್ನಡಿಗರು ಕನ್ನಡಕ್ಕಾಗಿ ಒಂದು ಕಿರುಬೆರಳನ್ನೂ ಎತ್ತುತ್ತಿಲ್ಲ. ತೀರಾ ನಿರಭಿಮಾನಿಗಳಾಗಿ ಹೋಗುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ಕನ್ನಡಿಗರಿಗೆ ಕನ್ನಡವೇ ಗತಿ ಎಂಬುದನ್ನು ಯಾರೂ ಮರೆಯಬಾರದು. ಹಿಂದಿ ಮತ್ತು ಇಂಗ್ಲಿಷ್‌ನ ಹಿಂದೆ ಅವರು ಓಡಿ ಹೋಗಬಾರದು. ಹಿಂದಿಯವರ ಕಿತಾಪತಿಗಳನ್ನು ಮೆಟ್ಟಿ ನಿಲ್ಲಬೇಕು. ಕನ್ನಡಕ್ಕಾಗಿ ದನಿ ಎತ್ತಬೇಕು ಎಂದು ಕರೆ ನೀಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್‌ ಹಂಚೆ ಮಾತನಾಡಿ, ‘ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶೂನ್ಯತೆ ಇದೆ. ನವೋದಯ, ನವ್ಯ, ದಲಿತ, ಬಂಡಾಯದ ನಂತರ ಸಾಹಿತ್ಯವನ್ನು ಮರುಸೃಷ್ಟಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಹೊಸ ವಸ್ತುಗಳ ಕಡೆಗೆ ಹೊರಳಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಜಾಗತೀಕರಣ ನಮ್ಮ ಬದುಕನ್ನು ಹೊಕ್ಕಿದೆ. ಇದರಿಂದ ಸಮಾಜದಲ್ಲಿ ಗೊಂದಲ ಇದೆ. ಖಾಸಗೀಕರಣ ಶಿಕ್ಷಣ ವ್ಯವಸ್ಥೆಯನ್ನು ಹರಿದು ಮುಕ್ಕಿದೆ. ಆಧುನಿಕ ಬಂಡವಾಳಶಾಹಿಗಳು ಶಿಕ್ಷಣವನ್ನು ರಾಜಕೀಯಕರಣಗೊಳಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ದೇವನೂರ ಶಂಕರ್ ಮಾತನಾಡಿ, ‘ದ.ರಾ.ಬೇಂದ್ರೆ ಇಲ್ಲಿಗೆ ಬಂದು ಜಾಗೃತ ಭೂಮಿ ಇದು ಎಂದು ಹೇಳಿದ್ದರು. ಕಲೆ, ಸಾಹಿತ್ಯ ಇಲ್ಲಿ ಹೇರಳವಾಗಿದೆ ಎಂದಿದ್ದರು’ ಎಂದು ನೆನಪಿಸಿಕೊಂಡರು.

‘ಕನ್ನಡ ನಾಡಿನಲ್ಲಿ ನೆಲೆಸಿರುವ ಎಲ್ಲರೂ ಕನ್ನಡಿಗರೇ. ಅವರು ಪ್ರೀತಿಯಿಂದ ಕನ್ನಡ ಕಲಿಯಬೇಕು’ ಎಂದು ಸಂಸದ ಧ್ರುವನಾರಾಯಣ ತಿಳಿಸಿದರು.

‘ದಲಿತ ಸಾಹಿತ್ಯವನ್ನು ದಲಿತರಿಗೆ ಮಾತ್ರ ಸೀಮಿತಗೊಳಿಸಿ ಕಡೆಗಾಣಿಸಬಾರದು’ ಎಂದು ಚಿಂತಕ ಕೃಷ್ಣಮೂರ್ತಿ ಚಮರಂ ಪ್ರತಿಪಾದಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 44 ಮಂದಿಯನ್ನು ಅಭಿನಂದಿಸಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಂಪತ್‌ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.