ADVERTISEMENT

ರೈಲ್ವೆ ಉದ್ಯೋಗ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 13:39 IST
Last Updated 23 ಡಿಸೆಂಬರ್ 2024, 13:39 IST
<div class="paragraphs"><p> ವಿ. ಸೋಮಣ್ಣ</p></div>

ವಿ. ಸೋಮಣ್ಣ

   

ಮೈಸೂರು: ‘ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನ್ನಡಿಗರು ಆಸಕ್ತಿ ತೋರುತ್ತಿಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೋಮವಾರ ರೈತ ಸಂಘಟನೆಗಳ ಒಕ್ಕೂಟ ಹಾಗೂ ರೈತ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ರೈಲ್ವೆ ಇಲಾಖೆಯಲ್ಲಿ 12 ಲಕ್ಷ ನೌಕರರಿದ್ದಾರೆ. ದಕ್ಷಿಣ ಭಾರತದಲ್ಲಿ ಶೇ 99ರಷ್ಟು ಉತ್ತರ ಭಾರತದ ಸಿಬ್ಬಂದಿಯೇ ಇದ್ದಾರೆ. ಕನ್ನಡಿಗರಿಗೂ ಅವಕಾಶ ದೊರಕಿಸಲೆಂದು ಈಚೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿದ್ದೇನೆ. ಆದರೆ, ಹೆಚ್ಚು ಮಂದಿ ಆಸಕ್ತಿ ತೋರುತ್ತಿಲ್ಲ. ನಿಮ್ಮ ಇಲಾಖೆಯದ್ದು ದಿನದ 24 ಗಂಟೆ ಕೆಲಸ, ನಮಗೆ ಬೇಡ ಎನ್ನುವವರೇ ಹೆಚ್ಚು’ ಎಂದು ವಿಷಾದಿಸಿದರು.

‘ಮೋದಿ ಸರ್ಕಾರದಲ್ಲಿ ರೈಲ್ವೆ ಸಚಿವನಾಗುವ ಅವಕಾಶ ನನಗೆ ಬಯಸದೇ ಬಂದ ಭಾಗ್ಯ. ನನ್ನ ಕಾಲದಲ್ಲಿ ಇಲಾಖೆಗೆ ಒಂದಿಷ್ಟು ಕನ್ನಡಿಗರು ಸೇರಿದರೆ ಅದೇ ಹೆಮ್ಮೆ. ಹೀಗಾಗಿ ರೈತರ ಮಕ್ಕಳು ರೈಲ್ವೆ ಉದ್ಯೋಗ ಪಡೆಯಲು ಆಸಕ್ತಿ ತೋರಬೇಕು’ ಎಂದು ಕೋರಿದರು.

ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಕೈಗೊಳ್ಳಲಾದ 21 ನಿರ್ಣಯಗಳ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜೊತೆಗೂಡಿ ಕೃಷಿ ಸಚಿವರ ಬಳಿಗೆ ನಿಯೋಗ ಕರೆದೊಯ್ದು ಚರ್ಚಿಸುವುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.