ADVERTISEMENT

ಕೆ.ಆರ್.ನಗರ | ಕಪ್ಪಡಿ ಜಾತ್ರೋತ್ಸವ ಸಂಪನ್ನ: ಮಹಾ ಮಾದಲಿ ಸೇವೆ

ಪಂಡಿತ್ ನಾಟಿಕರ್
Published 25 ಮಾರ್ಚ್ 2025, 5:55 IST
Last Updated 25 ಮಾರ್ಚ್ 2025, 5:55 IST
ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಸೋಮವಾರ ಮಹಾ ಮಾದಲಿ ಪ್ರಸಾದ ಖರೀದಿಸಲು ಮುಗಿಬಿದ್ದ ಭಕ್ತರು
ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಸೋಮವಾರ ಮಹಾ ಮಾದಲಿ ಪ್ರಸಾದ ಖರೀದಿಸಲು ಮುಗಿಬಿದ್ದ ಭಕ್ತರು   

ಕೆ.ಆರ್.ನಗರ: ತಾಲ್ಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯಿಂದ ಆರಂಭವಾಗಿದ್ದ ಜಾತ್ರೋತ್ಸವಕ್ಕೆ ಸೋಮವಾರ ಮಹಾ ಮಾದಲಿ ಸೇವೆಯೊಂದಿಗೆ ತೆರೆ ಎಳೆಯಲಾಯಿತು.

ಪ್ರತಿ ವರ್ಷ ಜಾತ್ರೋತ್ಸವದ ಕೊನೆಯ ದಿನಗಳಂದು ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಭಾನುವಾರ ಮತ್ತು ಸೋಮವಾರವೂ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು, ಮಾಂಸಾಹಾರ ಮತ್ತು ಸಸ್ಯಾಹಾರ ಅಡುಗೆ ತಯಾರಿಸಿಕೊಂಡು ಸವಿದರು.

ಸೋಮವಾರ ದೇವರ ದರ್ಶನ ಮಾಡಿದ ಭಕ್ತಾದಿಗಳು, ಮಹಾ ಮಾದಲಿ ಪ್ರಸಾದ ಸೇವೆಯಲ್ಲಿ ಭಾಗಿಯಾದರು. ಮಾರಾಟಕ್ಕೆ ಇಡಲಾಗಿದ್ದ ಮಹಾ ಮಾದಲಿ ಪ್ರಸಾದ ಖರೀದಿಸಿ ತಮ್ಮ ಊರುಗಳಿಗೆ ತೆರಳಿದರು.

ADVERTISEMENT

ಕಾವೇರಿ ನದಿ ದಂಡೆಯ ಹಸಿರು ತೋಪಿನಲ್ಲಿರುವ ಕಪ್ಪಡಿ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ರಾಚಪ್ಪಾಜಿ, ಚನ್ನಾಜಮ್ಮ  ಗದ್ದಿಗೆ, ಸಿದ್ದಪ್ಪಾಜಿ ದೇವಸ್ಥಾನ, ಉರಿ ಗದ್ದಿಗೆ, ಮಂಟೇಸ್ವಾಮಿ ಬಸವಣ್ಣ ದೇವರಿದ್ದು, ನೀಲಗಾರರ ಸಂಪ್ರದಾಯದಂತೆ ಭಕ್ತಾದಿಗಳಿಂದ ಇಲ್ಲಿ ಗದ್ದಿಗೆ, ಕಂಡಾಯ ಪೂಜೆ ನಡೆಯುತ್ತದೆ. ಕ್ಷೇತ್ರದಲ್ಲಿ ಭೋಜನ ಶಾಲೆ ಇದ್ದು, ಜಾತ್ರೋತ್ಸವ ಸಂದರ್ಭದಲ್ಲಿ ನಿತ್ಯ ಪ್ರಸಾದ ವಿನಿಯೋಗ ನಡೆಯುತ್ತದೆ.

ಮಂಗಳವಾರ (ಮಾ.25) ನಡೆಯುವ ಗದ್ದಿಗೆ ಮಹಾಭಿಷೇಕಕ್ಕೂ ಭಕ್ತಾದಿಗಳು ಹೆಚ್ಚಾಗಿ ಸೇರುವ ನಿರೀಕ್ಷೆ ಇದ್ದು, ಮಹಾಭಿಷೇಕ ನಡೆದ ನಂತರ ಮಧ್ಯಾಹ್ನ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳು ಕಪ್ಪಡಿಯಿಂದ ಊರಿಗೆ ಹೊರಡುವ ವಾಡಿಕೆ ಇದೆ. 

ಪ್ರತಿ ವರ್ಷ ಉರಿ ಗದ್ದಿಗೆಗೆ ಬಂದು ಪೂಜೆ ಸಲ್ಲಿಸಿ ಹೋಗುವುದರಿಂದ ಒಳ್ಳೆಯದಾಗುತ್ತದೆ. ಇದರಿಂದ ಬೆಟ್ಟದಷ್ಟು ಕಷ್ಟಗಳು ಬಂದರೂ ಮಂಜು ಗಡ್ಡೆ ಕರಗಿ ನೀರಾದಂತೆ ಕರಗಿ ಹೋಗುತ್ತವೆ. ಮನೆ ದೇವರು ಆಗಿರುವುದರಿಂದ ಕಳೆದ 30 ವರ್ಷಗಳಿಂದ ಕಪ್ಪಡಿ ಕ್ಷೇತ್ರಕ್ಕೆ ಬರುತ್ತಿದ್ದೇನೆ ಭಾನುವಾರ ಸಂಜೆ ಮಗನೊಂದಿಗೆ ಬಂದು ಮುಡಿ ಕೊಟ್ಟು ಪೂಜೆ ಸಲ್ಲಿಸಿದ್ದೇನೆ.
-ಮಹದೇವ ಹರಳೆ
ಕೊಳ್ಳೆಗಾಲ ತಾಲ್ಲೂಕು ಈ ಬಾರಿ ಕಡಿಮೆ ಭಕ್ತಾದಿಗಳ ಸಂಖ್ಯೆಯಲ್ಲಿ ಹಿಂದಿಗಿಂತ ಈ ಬಾರಿ ಕಡಿಮೆಯಾಗಿದೆ. ಜಾತ್ರೋತ್ಸವದ ಸಂದರ್ಭ ಕೊನೆಯ 2-3ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುವುದು ಸಾಮಾನ್ಯ. ಅದರಂತೆ ಸೋಮವಾರ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
-ಕೃಷ್ಣೇಗೌಡ ವ್ಯಾಪಾರಿ ಬಾಲೂರು
ಕೆ.ಆರ್.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರದಲ್ಲಿ ಸೋಮವಾರ ಪಂಕ್ತಿ ಭೋಜನ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.