ಕೆ.ಆರ್.ನಗರ: ಮಹಾ ಶಿವರಾತ್ರಿಯಿಂದ ತಿಂಗಳ ಕಾಲ ನಡೆದಿದ್ದ ತಾಲ್ಲೂಕಿನ ಕಪ್ಪಡಿ ಜಾತ್ರೋತ್ಸವ ಮಾರ್ಚ್ 24ರಂದು (ಸೋಮವಾರ) ನಡೆಯಲಿರುವ ಮಹಾ ಮಾದಲಿ ಸೇವೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಕೆ.ಆರ್.ನಗರದಿಂದ 11 ಕಿ.ಮೀ ದೂರದಲ್ಲಿ ಕಾವೇರಿ ನದಿ ದಂಡೆಯ ಹಸಿರು ತೋಪಿನಲ್ಲಿ ಇರುವ ಈ ಕಪ್ಪಡಿ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮಂಟೇಲಿಂಗಯ್ಯ, ಸಿದ್ದಪ್ಪಾಜಿ, ರಾಚಪ್ಪಾಜಿ, ದೊಡ್ಡಮ್ಮ ತಾಯಿ ಮತ್ತು ಚನ್ನಾಜಮ್ಮಣ್ಣಿ ಇಲ್ಲಿ ನೆಲೆಸಿದ್ದಾರೆ ಎನ್ನುವುದು ಭಕ್ತರ ನಂಬಿಕೆ. ನೀಲಗಾರರ ಸಂಪ್ರದಾಯದಂತೆ ಇಲ್ಲಿ ಗದ್ದಿಗೆ, ಕಂಡಾಯ ಪೂಜೆ ಮಾಡಲಾಗುತ್ತದೆ.
ಪ್ರತಿ ವರ್ಷ ಶಿವರಾತ್ರಿಯಿಂದ ಯುಗಾದಿವರೆಗೆ ತಿಂಗಳ ಕಾಲ ನಡೆಯುವ ಈ ಜಾತ್ರೆಗೆ ಹೊರ ರಾಜ್ಯ, ಜಿಲ್ಲೆ ಸೇರಿದಂತೆ ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಭಕ್ತರು ಹರಿದು ಬರುತ್ತಾರೆ. ದೇವರಿಗೆ ಮುಡಿ ಕೊಟ್ಟು ಹರಕೆ ತೀರಿಸುತ್ತಾರೆ. ಕ್ಷೇತ್ರದ ಬಳಿ ಇರುವ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗದ್ದಿಗೆ ಪೂಜೆಗಾಗಿ ತರುವ ತೆಂಗಿನಕಾಯಿಯನ್ನು ಇಲ್ಲಿ ಒಡೆಯುವುದಿಲ್ಲ. ಬಾಳೆಹಣ್ಣಿನ ತೊಟ್ಟು ಮುರಿಯದೇ ಇರುವುದು ಇಲ್ಲಿನ ವಿಶೇಷವಾಗಿದೆ.
ಜಾತ್ರೋತ್ಸವ ಸಂದರ್ಭದಲ್ಲಿ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಕಪ್ಪಡಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮಾಂಸಾಹಾರ ಮತ್ತು ಸಸ್ಯಾಹಾರ ಅಡುಗೆ ತಯಾರಿಸಿಕೊಂಡು ಊಟ ಮಾಡುವ ವಾಡಿಕೆಯೂ ಇದೆ.
ನಿತ್ಯ ಒಂದೊಂದು ದಿನ ಹೋಳಿಗೆ, ಡ್ರೈ ಜಾಮೂನು, ಮೈಸೂರು ಪಾಕ್, ಜಹಾಂಗೀರ್, ಬಾದೂಷ ಹೀಗೆ.. ವಿವಿಧ ಬಗೆಯ ಸಿಹಿ ಭಕ್ಷ್ಯಗಳನ್ನು ದೇವರಿಗೆ ಎಡೆಯಾಗಿ ಇಡಲಾಗುತ್ತದೆ. ಜಾತ್ರೋತ್ಸವದ ಕೊನೆಯ ದಿನ ವಿಶೇಷ ಪೂಜೆ, ಅಭಿಷೇಕ ಮಾಡಲಾಗುತ್ತದೆ. ರವೆ, ಸಕ್ಕರೆ ಸೇರಿದಂತೆ ಇನ್ನಿತರೆ ವಸ್ತುಗಳಿಂದ ಮಹಾ ಮಾದಲಿ ತಯಾರಿಸಿ ದೇವರಿಗೆ ಎಡೆ ಇಡಲಾಗುತ್ತದೆ.
ಈ ಸೇವೆಗೆ ಸಾವಿರಾರು ಮಂದಿ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ. ಮಹಾ ಮಾದಲಿ ಪ್ರಸಾದವನ್ನು ತಮ್ಮ ಊರುಗಳಿಗೆ ಕೊಂಡೊಯ್ಯುತ್ತಾರೆ. ಮಾರನೇ ದಿನ ಮಂಗಳವಾರ ಗದ್ದಿಗೆ ಶುಚಿಗೊಳಿಸಿ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ ಕಪ್ಪಡಿ ಕ್ಷೇತ್ರದ ಪೀಠಾಧಿಪತಿಗಳು ಕಪ್ಪಡಿಯಿಂದ ಊರಿಗೆ ಹೊರಡುವ ವಾಡಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.