ಮೈಸೂರು: ಎಐಯುಟಿಯುಸಿಯಿಂದ ನಗರದಲ್ಲಿ ಅ.26 ಹಾಗೂ 27ರಂದು ಹಮ್ಮಿಕೊಂಡಿರುವ 4ನೇ ರಾಜ್ಯಮಟ್ಟದ ಕಾರ್ಮಿಕ ಸಮ್ಮೇಳನದ ಅಂಗವಾಗಿ ಚಾಮರಾಜನಗರದಿಂದ ರಾಮನಗರದ ಬಿಡದಿವರೆಗೆ ಸಂಚರಿಸಲಿರುವ ಪ್ರಚಾರ ಜಾಥಾ ಬುಧವಾರ ಇಲ್ಲಿಗೆ ಆಗಮಿಸಿತು.
ಚಾಮರಾಜನಗರದಿಂದ ಬಂದ ಜಾಥಾವನ್ನು ನಗರದ ಚಿಕ್ಕಗಡಿಯಾರದ ವೃತ್ತದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಸ್ವಾಗತಿಸಿದರು.
ನಂತರ ಮಾತನಾಡಿ, ‘ಅನ್ನ ಹಾಕುವ ರೈತರಂತೆಯೇ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಾರ್ಮಿಕರು ಕೂಡ ದೇಶಕ್ಕೆ ಬಹುಮುಖ್ಯ. ಆದರೆ, ಕಾರ್ಮಿಕರ ಕಾಯ್ದೆಗಳನ್ನು ರದ್ದುಗೊಳಿಸುವ ಮೂಲಕ, ಶ್ರಮಿಕರ ಕತ್ತುಹಿಸುಕುವ ಕೆಲಸವನ್ನು ಸರ್ಕಾರಗಳು ಮಾಡುತ್ತಲೇ ಬಂದಿವೆ’ ಎಂದು ದೂರಿದರು.
‘ದುಡಿಯುವ ಜನರ ಬದುಕು ಸಂಕಟಮಯವಾಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ಬಡಜನರ- ಕಾರ್ಮಿಕರ ವಿರುದ್ಧ ಅನುಸರಿಸುವ ನೀತಿ–ನಿಲುವುಗಳ ವಿರುದ್ಧ ಸಶಕ್ತ ಹೋರಾಟ ರೂಪಿಸಲು ಕಾರ್ಮಿಕ ವರ್ಗ ಸಜ್ಜಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಮ್ಮೇಳನದ ಯಶಸ್ಸಿಗೆ ದುಡಿಯುವ ವರ್ಗದವರು ಸಹಕಾರ ನೀಡಬೇಕು’ ಎಂದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎ.ದೇವದಾಸ್, ಸೆಕ್ರೆಟರಿಯೇಟ್ ಸದಸ್ಯರಾದ ಎಂ.ಉಮಾದೇವಿ, ಹನುಮೇಶ್, ಜಿಲ್ಲಾ ಸಮಿತಿ ಅಧ್ಯಕ್ಷ ಯಶೋಧರ್, ಕಾರ್ಯದರ್ಶಿ ಚಂದ್ರಶೇಖರ ಮೇಟಿ ಪಾಲ್ಗೊಂಡಿದ್ದರು.
ಜಾಥಾವು ನಗರದ ಪ್ರಮುಖ ರಸ್ತೆಗಳು, ಬನ್ನಿಮಂಟಪ, ಯಾದವಗಿರಿ, ಹೆಬ್ಬಾಳ, ಮೇಟಗಳ್ಳಿ, ಹೂಟಗಳ್ಳಿ, ಕೂರ್ಗಳ್ಳಿ, ವಿಶ್ವೇಶ್ವರನಗರ ಮೊದಲಾದ ಕೈಗಾರಿಕಾ ಪ್ರದೇಶಗಳಲ್ಲಿ ಸಾಗಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಎಐಯುಟಿಯುಸಿಯ ಪಿ.ಎಸ್. ಸಂಧ್ಯಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.