ADVERTISEMENT

ತಂದೆ ವರುಣಾದಲ್ಲಿ ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ:ಯತೀಂದ್ರ

ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವರೇ ಎಂಬ ಚರ್ಚೆ ಆರಂಭ

ಎಂ.ಮಹೇಶ
Published 19 ಮಾರ್ಚ್ 2023, 8:40 IST
Last Updated 19 ಮಾರ್ಚ್ 2023, 8:40 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಬದಲಿಗೆ ಜಿಲ್ಲೆಯ ವರುಣಾದಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಪಕ್ಷದ ಇಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ‘ಬೂಸ್ಟರ್‌ ಡೋಸ್‌’ನಂತೆ ಉತ್ಸಾಹ ಮೂಡಿಸಿದೆ. ಇಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆ–ವಿಶ್ಲೇಷಣೆಗಳೂ ಆರಂಭವಾಗಿವೆ.

ಸಿದ್ದರಾಮಯ್ಯ, ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆ ಪ್ರಕಟಿಸಿದ್ದರಿಂದ ತವರು ಮೈಸೂರು ಜಿಲ್ಲೆಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ನಿರಾಸೆ ಅನುಭವಿಸಿದ್ದರು. ಆದರೆ, ಅವರೀಗ ಮನಸ್ಸು ಬದಲಿಸುವ ಸಾಧ್ಯತೆ ಇದೆ ಎಂಬ ಬೆಳವಣಿಗೆಗಳು ನಡೆದಿರುವುದು, ತಮ್ಮ ನೆಚ್ಚಿನ ನಾಯಕ ಇಲ್ಲೇ ಸ್ಪರ್ಧಿಸಬೇಕು ಎಂದು ಬಯಸಿದ್ದ ವರುಣಾ ಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ನಿರೀಕ್ಷೆಯೂ ಗರಿಗೆದರಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಹಠಾತ್‌ ನಿಧನದಿಂದ ಸೊರಗಿದ್ದ ಪಕ್ಷದ ವಲಯದಲ್ಲಿ, ಸಿದ್ದರಾಮಯ್ಯ ಸ್ಪರ್ಧೆಯ ವಿಷಯವು ಹೊಸ ಚೈತನ್ಯದ ಟಾನಿಕ್‌ ನೀಡಿದೆ. ಕಣದ ವಿಷಯದಲ್ಲಿ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಏನು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವುದು ಕುತೂಹಲವನ್ನೂ ಮೂಡಿಸಿದೆ.

ADVERTISEMENT

ಬೆಂಬಲಿಗರ ಬಯಕೆ:

ವರುಣಾ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದ ಸಿದ್ದರಾಮಯ್ಯ, 2013ರಲ್ಲಿ ಮುಖ್ಯಮಂತ್ರಿಯೂ ಆಗಿದ್ದರು. 2018ರ ಚುನಾವಣೆಯಲ್ಲಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯಗೆ ವರುಣಾ ಬಿಟ್ಟು ಕೊಟ್ಟು, ತಮ್ಮ ಹಳೆಯ ಕ್ಷೇತ್ರ ಚಾಮುಂಡೇಶ್ವರಿಗೆ ಹೋದ ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದಲೂ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತ ಅವರನ್ನು ಬಾದಾಮಿಯ ಜನರು ಕೈಬಿಡಲಿಲ್ಲ. ರಾಜಕೀಯ ಜೀವನದ ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧಿಸಬೇಕು ಎನ್ನುವುದು ಅಲ್ಲಿನ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರ ಬಯಕೆಯಾಗಿದೆ.

ತಮ್ಮ ನೆಚ್ಚಿನ ನಾಯಕ ಇಲ್ಲಿ ಸ್ಪರ್ಧಿಸಿದರೆ ಸಂಭ್ರಮದಿಂದ ಸ್ವಾಗತಿಸಲು ಅವರು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅವರು, ‘ಕೋಲಾರದಿಂದ ಕಣಕ್ಕಿಳಿಯುತ್ತೇನೆ’ ಎಂದು ಘೋಷಿಸಿದ ನಂತರವೂ ಅಭಿಮಾನಿಗಳ ವರುಣಾದಲ್ಲೂ ಸ್ಪರ್ಧಿಸಬೇಕು ಎಂದೇ ಪಟ್ಟು ಹಿಡಿದಿದ್ದರು. ಈಗಲೂ ಎರಡೂ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿ ಎಂಬ ಅಪೇಕ್ಷೆಯಲ್ಲಿಯೇ ಇಲ್ಲಿನ ಅಭಿಮಾನಿಗಳು ಇದ್ದಾರೆ.

ಸ್ಪರ್ಧೆಯಿಂದೇನು ಲಾಭ?:

ವರುಣಾದಲ್ಲಿ ಸ್ಪರ್ಧಿಸಿದರೆ, ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಶಕ್ತಿ ವೃದ್ಧಿಸಲಿದೆ ಮತ್ತು ಬಿಜೆಪಿ ಹಾಗೂ ಜೆಡಿಎಸ್‌ಗೆ ಪ್ರಬಲ ಪೈಪೋಟಿ ಕೊಡಬಹುದು ಎನ್ನುವ ನಿರೀಕ್ಷೆಯನ್ನು ಆ ಪಕ್ಷದ ಮುಖಂಡರು ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೆ ಸಿದ್ಧವಿರುವುದಾಗಿ ಹಾಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಹೇಳುತ್ತಿದ್ದಾರೆ.

‘ಅವರು ಇಲ್ಲಿ ಕಣಕ್ಕಿಳಿದಿದ್ದರೆ, ತಿ.ನರಸೀಪುರ, ನಂಜನಗೂಡು, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ವಿಶೇಷವಾದ ಶಕ್ತಿ ಬರುತ್ತದೆ. ನೆರೆಯ ಜಿಲ್ಲೆಗಳಲ್ಲೂ ಪಕ್ಷಕ್ಕೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಮುಖಂಡರು.

ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಧ್ರುವನಾರಾಯಣ ಅಗಲಿಕೆಯಿಂದ ಉಂಟಾಗಿರುವ ನಿರ್ವಾತ ತುಂಬಲು ಸಿದ್ದರಾಮಯ್ಯ ಅವರಂತಹ ನಾಯಕ ಜಿಲ್ಲೆಯಲ್ಲಿ ಸ್ಪರ್ಧಿಸುವುದರಿಂದ ನೆರವಾಗಲಿದೆ ಎನ್ನುತ್ತಾರೆ ಅವರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ, ಈ ಬಾರಿ ಎಲ್ಲೇ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ವರುಣಾದಲ್ಲಿ ಸ್ಪರ್ಧಿಸಿದರೆ ಈ ಭಾಗದ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಪ್ರಯೋಜನವಾಗಲಿದೆ. ಪಕ್ಷದ ಹಿತದೃಷ್ಟಿಯಿಂದ, ಅವರಿಗೆ ಕೋಲಾರ ಮತ್ತು ವರುಣಾ ಎರಡರಲ್ಲೂ ಸ್ಪರ್ಧೆಗೆ ಅವಕಾಶ ಕೊಟ್ಟರೆ ಹೆಚ್ಚು ಅನುಕೂಲವಾಗಲಿದೆ. ಇದು ಅವರ ಹಿತೈಷಿಗಳಾದ ನಮ್ಮೆಲ್ಲರ ಒತ್ತಾಯವೂ ಆಗಿದೆ’ ಎನ್ನುತ್ತಾರೆ ಮೈಸೂರಿನವರೇ ಆದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ.

ಬಿಟ್ಟು ಕೊಡಲು ಸಿದ್ಧ

ತಂದೆ ವರುಣಾದಲ್ಲಿ ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿದ್ದೇನೆ. ಹೈಕಮಾಂಡ್ ಹಾಗೂ ಅವರು ಏನು ತೀರ್ಮಾನ ಕೈಗೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿಲ್ಲ.

–ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.