
ಮೈಸೂರು: ‘ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಕಾರ್ಯಪರಿಸರ ಅತ್ಯುತ್ತಮವಾಗಿದ್ದು, ಒಂದೇ ಒಂದು ಕೈಗಾರಿಕೆಯೂ ಇಲ್ಲಿಂದ ಹೊರಹೋಗಿಲ್ಲ. ಈ ವಿಚಾರವಾಗಿ ತಪ್ಪು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬುಧವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ರಾಜ್ಯ ಸರ್ಕಾರವು ಕಳೆದ ಫೆಬ್ರುವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿತ್ತು. ಅಲ್ಲಿ ₹10.27 ಲಕ್ಷ ಕೋಟಿ ಬಂಡವಾಳ ಹರಿದು ಬರುವ ಖಾತ್ರಿ ಸಿಕ್ಕಿತು. ಈ ಪೈಕಿ ಶೇಕಡ 60ಕ್ಕಿಂತ ಹೆಚ್ಚು ಬಂಡವಾಳ ಈಗಾಗಲೇ ರಾಜ್ಯದಲ್ಲಿ ಹೂಡಿಕೆ ಆಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ’ ಎಂದರು.
‘ಫಾಕ್ಸ್ ಕಾನ್ ತರಹದ ದೈತ್ಯ ಕಂಪನಿಯು ರಾಜ್ಯದಲ್ಲಿ ಬೃಹತ್ ಉತ್ಪಾದನಾ ಘಟಕ ತೆರೆದಿದ್ದು, ಇಲ್ಲಿಂದ ದುಬಾರಿ ಮೊಬೈಲ್ ಫೋನುಗಳು ರಫ್ತಾಗಿ ಹೋಗುತ್ತವೆ. ಜಪಾನ್‌ನಿಂದ ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ ₹10,500 ಕೋಟಿ ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿದೆ. ಒಸಾಕಾವಾ ಕಂಪನಿ ಕೂಡ ಹೂಡಿಕೆ ಮಾಡಲು ಬಂದಿದೆ’ ಎಂದು ವಿವರಿಸಿದರು.
ಗೂಗಲ್ ಎಐ ಘಟಕ ಆಂಧ್ರಪ್ರದೇಶದ ಪಾಲಾದ ಕುರಿತು ಪ್ರತಿಕ್ರಿಯಿಸಿದ ಸಚಿವರು ‘ಕೇಂದ್ರ ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ವಿಶೇಷ ಪ್ರೋತ್ಸಾಹಧನಾ ಕ್ರಮಗಳನ್ನು ಹೊಂದಿದ್ದು, ಅಂತಹ ಕಂಪನಿಗಳನ್ನು ಬಿಜೆಪಿ ಆಡಳಿತವಿರುವ ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಕಳಿಸಿ ಕೊಡುತ್ತಿದೆ. ಆಂಧ್ರಪ್ರದೇಶದಲ್ಲಿಯೂ ಬಿಜೆಪಿ ಮಿತ್ರಪಕ್ಷವೇ ಆಡಳಿತದಲ್ಲಿ ಇದ್ದು, ಕೇಂದ್ರವೇ ಹೆಚ್ಚುವರಿ ಪ್ರೋತ್ಸಾಹ ಧನ ಕೊಟ್ಟು ಗೂಗಲ್ ಅನ್ನು ಅಲ್ಲಿಗೆ ಕಳುಹಿಸಿದೆ’ ಎಂದು ದೂರಿದರು.
‘ಹಿಂದೆ ಒಂದು ಕಂಪನಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಹೂಡಿಕೆ ಮಾಡಲು ತೀರ್ಮಾನಿಸಿತ್ತು. ಆದರೆ, ದೆಹಲಿಗೆ ಹೋದಮೇಲೆ ಅವರು ಮನಸ್ಸು ಬದಲಿಸಿದರು. ಕೇಂದ್ರ ಸರ್ಕಾರವು ಇನ್ನಾದರೂ ಇಂತಹ ತಾರತಮ್ಯವನ್ನು ಬಿಡಬೇಕು’ ಎಂದು ಆಗ್ರಹಿಸಿದರು.
ಉದ್ಯಮ ಸ್ಥಾಪನೆ ಗಡುವು ವಿಸ್ತರಿಸಿ
ಮೈಸೂರು: ‘ಕೈಗಾರಿಕಾ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಮೂಲಸೌಲಭ್ಯ ಕಲ್ಪಿಸಲು ವಿಳಂಬವಾಗಿರುವ ಕಡೆ ಉದ್ಯಮ ಸ್ಥಾಪಿಸಲು ಗಡುವನ್ನು ವಿಸ್ತರಿಸಬೇಕು’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೂಚಿಸಿದರು.
ಉದ್ಯಮಿಗಳ ಸಭೆ ನಡೆಸಿದ ಅವರು, ‘ಮೂಲಸೌಕರ್ಯ ಒದಗಿಸದೆ ಉದ್ಯಮ ಸ್ಥಾಪಿಸಲು ನೀಡಿದ್ದ ಗಡುವು ಮುಗಿಯಿತು ಎನ್ನುವುದು ನ್ಯಾಯವಲ್ಲ. ಈ ಸಮಸ್ಯೆಯನ್ನು ರಾಜ್ಯದೆಲ್ಲೆಡೆ ಪರಿಶೀಲಿಸಬೇಕು. ಕೆಐಎಡಿಬಿಯಲ್ಲಿ ಈ ಕುರಿತು ನಿರ್ಣಯವನ್ನೇ ಕೈಗೊಳ್ಳಬೇಕು. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ನಿರ್ದೇಶನ ನೀಡಿದರು.
‘ಇಲಾಖೆಯಲ್ಲಿ ಸಮಗ್ರ ಬದಲಾವಣೆಗಾಗಿ ಉದ್ಯಮಿಗಳ ಸಭೆ ನಡೆಸಿ ಅಭಿಪ್ರಾಯ, ಸಲಹೆಗಳನ್ನು ಆಲಿಸುತ್ತಿದ್ದೇನೆ. ಕಾಟಾಚಾರಕ್ಕೆ ಸಭೆ ನಡೆಸಲು ಬಂದಿಲ್ಲ. ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯವನ್ನು ಮಾದರಿ ಮಾಡಬೇಕು ಎಂಬುದೇ ಸರ್ಕಾರದ ಉದ್ದೇಶ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.