ADVERTISEMENT

ಹಣ–ಹೆಣದ ಮೇಲೆ ರಾಜಕಾರಣ: ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 14:30 IST
Last Updated 28 ಜುಲೈ 2022, 14:30 IST
   

ಮೈಸೂರು: ‘ಪ್ರಸ್ತುತ ಹಣ ಮತ್ತು ಹೆಣಗಳ ಮೇಲೆ ರಾಜಕಾರಣ ನಡೆಯುತ್ತಿದೆ. ಯಾರಾದರೂ ಸತ್ತರೆ ಆತ ಯಾವ ಪಕ್ಷದವರು ಎಂದು ಹುಡುಕುವ ಪ್ರವೃತ್ತಿ ಆರಂಭವಾಗಿದೆ’ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಕೆ.ಹರೀಶ್‌ಗೌಡ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಗೋಕುಲಂನ ನಗರಪಾಲಿಕೆ ವಲಯ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಮತ್ತು ಅಂಗವಿಕಲರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯವಕರು ಇಂತಹ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ದೇಶವನ್ನು ಸರಿ ದಾರಿಗೆ ತೆಗೆದುಕೊಂಡು ಹೋಗಲು ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದರು.

ADVERTISEMENT

‘ದೇಶದಾದ್ಯಂತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಇದು ಬಗೆಹರಿಯಬೇಕಾದಲ್ಲಿ ಉದ್ಯೋಗ ಮೇಳಗಳು ಹೆಚ್ಚಾಗಿ ನಡೆಯಬೇಕು’ ಎಂದು ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಹೇಳಿದರು.

‘ಮುಖಂಡ ಹರೀಶ್‌ ಗೌಡ ಶಾಸಕ ಅಲ್ಲದಿದ್ದರೂ ಚಾಮರಾಜ ಕ್ಷೇತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರ ಪ್ರೀತಿ ಗಳಿಸಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಆಶೀರ್ವಾದವಿದೆ’ ಎಂದರು.

ಅತಿಥಿಗಳು ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ ಹರೀಶ್‌ಗೌಡ, ‘20 ವರ್ಷಗಳಿಂದಲೂ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ನನ್ನ ಕೈಲಾದ ಅಳಿಲು ಸೇವೆ ಮಾಡಿಕೊಂಡು ಬಂದಿದ್ದೇನೆ. ನಿಮ್ಮ ಆಶೀರ್ವಾದ ಹೀಗೆಯೇ ಇರಲಿ’ ಎಂದು ಕೋರಿದರು.

ಹೊಸಮಠದ ಚಿದಾನಂದ ಸ್ವಾಮೀಜಿ, ಬಸವ ಸ್ವಾಮೀಜಿ, ಧರ್ಮಗುರು ಮೌಲಾನಾ ಅಬ್ದುಲ್ ಸಲಾಂ, ಡಾ.ಕೆ.ಎಂ.ವಿಲಿಯಮ್ಸ್, ಶಾಸಕರಾದ ಅನಿಲ್ ಚಿಕ್ಕಮಾದು, ಡಾ.ಡಿ.ತಿಮ್ಮಯ್ಯ, ನಗರಪಾಲಿಕೆ ಸದಸ್ಯ ಜೆ.ಗೋಪಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ವಾಸು, ಎಂ.ಕೆ.ಸೋಮಶೇಖರ್, ರಮೇಶ್ ಬಂಡಿಸಿದ್ದೇಗೌಡ, ಕೆ.ಮರೀಗೌಡ, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಶಿವಕುಮಾರ್, ಭಾಸ್ಕರ್ ಎಲ್.ಗೌಡ, ಡಿ.ನಾಗಭೂಷಣ, ಪಿ.ಪ್ರಶಾಂತ್ ಗೌಡ, ಶಿವಣ್ಣ, ಮೌಲಾನ ಶಮೂನ್, ಕೆಪಿಸಿಸಿ ಮೈಸೂರು ಉಸ್ತುವಾರಿ ಸುಧೀಂದ್ರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.