ADVERTISEMENT

ಮೈಸೂರು ನಗರದಲ್ಲಿ ಮೊಳಗಿದ ಕನ್ನಡದ ಕಹಳೆ

ರಾಜ್ಯೋತ್ಸವ ಸಂಭ್ರಮ; ಕನ್ನಡ ನಾಡು, ಭಾಷೆ ಮೇಲೆ ಅಭಿಮಾನ ಮೆರೆದ ಜನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 1:48 IST
Last Updated 2 ನವೆಂಬರ್ 2020, 1:48 IST
ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು (ಎಡಚಿತ್ರ). ಮೈಸೂರಿನ ಕನ್ನಡ ಹೋರಾಟಗಾರರ ಹಿತರಕ್ಷಣಾ ಸಮಿತಿ ವತಿಯಿಂದ ನ.ನಾಗಲಿಂಗ ಸ್ವಾಮಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು
ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಡಾ.ರಾಜ್ ಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು (ಎಡಚಿತ್ರ). ಮೈಸೂರಿನ ಕನ್ನಡ ಹೋರಾಟಗಾರರ ಹಿತರಕ್ಷಣಾ ಸಮಿತಿ ವತಿಯಿಂದ ನ.ನಾಗಲಿಂಗ ಸ್ವಾಮಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು   

ಮೈಸೂರು: ಮೈಸೂರು ನಗರ ಒಳಗೊಂಡಂತೆ ಜಿಲ್ಲೆಯಾದ್ಯಂತ ಭಾನುವಾರ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸರಳ, ಸಂಭ್ರಮದಿಂದ ಆಚರಿಸಲಾಯಿತು.

ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡದ ನೆಲ, ಭಾಷೆಯ ಮೇಲಿನ ಅಭಿಮಾನ ಮೆರೆದರು. ನಗರದ ಪ್ರಮುಖ ವೃತ್ತಗಳು, ಆಟೊ ನಿಲ್ದಾಣ ಮತ್ತು ವಾಹನಗಳಲ್ಲಿ ಕನ್ನಡದ ಬಾವುಟ ರಾರಾಜಿಸಿದವು.

ಕೋವಿಡ್‌ ಮಾರ್ಗಸೂಚಿ ಪಾಲಿಸ ಬೇಕಿದ್ದ ಕಾರಣ ಎಲ್ಲೂ ವಿಜೃಂಭಣೆಯ ಕಾರ್ಯಕ್ರಮ, ಮೆರವಣಿಗೆ ನಡೆಯಲಿಲ್ಲ. ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸರಳವಾಗಿ ಆಯೋಜಿಸಲಾಯಿತು.

ADVERTISEMENT

ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾ.ರಾಜ್ ಕುಮಾರ್ ಪ್ರತಿಮೆಗೆ ಮಾಲಾ ರ್ಪಣೆ ಮಾಡಲಾಯಿತು. ಆ ಬಳಿಕ ಧ್ವಜಾರೋಹಣ ಮಾಡಿ ಸಾರ್ವಜನಿ ಕರಿಗೆ ಸಿಹಿ ವಿತರಿಸಲಾಯಿತು. ಬಳಗದ ಕಿಶೋರ್, ಜಿ ರಾಘವೇಂದ್ರ , ಎಂ.ಡಿ.ಪಾರ್ಥಸಾರಥಿ , ಶಿಕ್ಷಕ ಮಂಜುನಾಥ್, ವಿನಯ್ ಕಣಗಾಲ್, ಕಿರಣ್, ಸೂರಿ, ಮಂಜು, ವಿನೋದ ಇದ್ದರು.

ಮೈಸೂರಿನ ಕನ್ನಡ ಹೋರಾಟಗಾರರ ಹಿತರಕ್ಷಣಾ ಸಮಿತಿ ವತಿಯಿಂದ ಕನ್ನಡ ಹೋರಾಟಗಾರ ನ. ನಾಗಲಿಂಗಸ್ವಾಮಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಕಾರ್ಯಕ್ರಮ ಉದ್ಘಾಟಿಸಿದರು. ನಾಗಲಿಂಗ ಸ್ವಾಮಿ ಜೊತೆಗಿನ ಒಡನಾಟ ಮತ್ತು ಅವರ ಹೋರಾಟಗಳನ್ನು ನೆನಪಿಸಿಕೊಂಡರು .

ಸಾಹಿತಿ ಮಡ್ಡೀಕೆರೆ ಗೋಪಾಲ್, ಪಾಲಿಕೆ ಸದಸ್ಯೆ ಶೋಭಾ ಸುನಿಲ್, ಚಿಕ್ಕಣ್ಣ, ಕನ್ನಡ ಹೋರಾಟಗಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಂಸಾಳೆ ರವಿ, ಗೌರವಾಧ್ಯಕ್ಷ ಜಯರಾಜ್ ಹೆಗಡೆ, ಗಿರೀಶ್ ಶಿವರ್ಚಕ , ತೇಜಸ್ವಿ ಕುಮಾರ್ ಪಾಟೀಲ್ , ಆಟೊ ಮಹೇಶ್ ಭಾಗವಹಿಸಿದ್ದರು.

ಸಮರ್ಪಣಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನಕ ಯುವ ಸೇನೆಯ ಅಧ್ಯಕ್ಷ,
ಶಿಕ್ಷಕರಾದ ಎಂ.ರವಿಕುಮಾರ್ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ವಿಭಾಗದಲ್ಲಿ 100 ಅಂಕಗಳನ್ನು ಗಳಿಸಿದ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕೆಲ್ಲಹಳ್ಳಿ ಮಹದೇವ್ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಎಸ್.ಬಾಲಸುಬ್ರಮಣ್ಯಂ, ಖಜಾಂಚಿ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಪಾಲ್ಗೊಂಡಿದ್ದರು.

ಸಿಹಿ ವಿತರಣೆ: ಮೈಸೂರು ರಕ್ಷಣಾ ವೇದಿಕೆ ವತಿಯಿಂದ ನಗರದ ಗೋಕುಲಂನಲ್ಲಿ ವಿದೇಶಿ ಯೋಗ ವಿದ್ಯಾರ್ಥಿಗಳು ಮತ್ತು ಅನ್ಯ ರಾಜ್ಯದ ಟೆಕಿಗಳಿಗೆ ಕನ್ನಡ ಧ್ವಜದ ಜೊತೆ ಸಿಹಿ ವಿತರಣೆ ಮಾಡಿ ರಾಜ್ಯೋತ್ಸವ ಆಚರಣೆಯ ಮಹತ್ವ ತಿಳಿಸಲಾಯಿತು.

ಈ ಸಂದರ್ಭ ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ವಿಕ್ರಂ ಅಯ್ಯಂಗಾರ್, ಕರ್ನಾಟಕ ಸೇನಾಪಡೆಯ ತೇಜೇಶ್ ಲೋಕೇಶ್ ಗೌಡ, ರವಿ ಕುಂಚಿಟಿಗ, ರಾಕೇಶ್ ಶ್ರೀನಿವಾಸ್, ವಿನಯ್ ಕಣಗಾಲ್, ಶ್ರೀಚಕ್ರ ಮನೋಜ್ ಭಾಗವಹಿಸಿದ್ದರು.

ಪತ್ರಿಕೆ ಉಳಿಸಿ, ಬೆಳೆಸಿ

ಮೈಸೂರು: ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿ ವರ್ಷದಂತೆ ‘ಕನ್ನಡ ಪತ್ರಿಕೆ ಉಳಿಸಿ, ಬೆಳೆಸಿ’ ಎಂಬ ಕಾರ್ಯಕ್ರಮ ಆಯೋಜಿಸಲಾಯಿತು.

ಕನ್ನಡ ರಾಜ್ಯೋತ್ಸವವನ್ನು ಕಳೆದ 10 ವರ್ಷಗಳಿಂದ ವಿಭಿನ್ನವಾಗಿ ಆಚರಿಸುತ್ತಿರುವ ವೇದಿಕೆ ಸದಸ್ಯರು, ಕೆ.ಆರ್.ವೃತ್ತದಲ್ಲಿ ಪತ್ರಿಕೆಗಳನ್ನು ಹಂಚಿದರಲ್ಲದೆ, ಕನ್ನಡ ಪತ್ರಿಕೆಗಳನ್ನು ಕೊಂಡು ಓದಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಪ್ಯಾಲೇಸ್ ಬಾಬು, ಗೋಪಿ, ಅಜಯ್ ಕುಮಾರ್ ಜೈನ್, ಮಹದೇವಸ್ವಾಮಿ, ಗುರು, ಸುನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.