ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ‘ಕರುನಾಡ ಸವಿಯೂಟ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರೊಂದಿಗೆ ತೀರ್ಪುಗಾರರಾದ ಮುರುಳಿ–ಸುಚಿತ್ರಾ ದಂಪತಿ
ಪ್ರಜಾವಾಣಿ ಚಿತ್ರ
ಮೈಸೂರು: ಬಾಯಲ್ಲಿ ನೀರೂರಿಸಿದ ವೈವಿಧ್ಯಮಯ ಸಾಂಪ್ರದಾಯಿಕ ತಿಂಡಿ–ತಿನಿಸುಗಳು. ಗಮನಸೆಳೆದ ಪ್ರಸ್ತುತಿ. ಮಹಿಳೆಯರ ಪ್ರತಿಭೆ–ಆವಿಷ್ಕಾರದ ಕೌಶಲ ಅನಾವರಣ. ವಿನೂತನವಾಗಿ ಸಿದ್ಧಪಡಿಸಿದ್ದ ಆಹಾರ ಪದಾರ್ಥಗಳಿಗೆ ಬಹುಮಾನದ ಮನ್ನಣೆ... - ‘ಕರುನಾಡ ಸವಿಯೂಟ’ ಸ್ಪರ್ಧೆ ಆವೃತ್ತಿ–4ರಲ್ಲಿ ಕಂಡುಬಂದ ವಿಶೇಷಗಳಿವು.
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಇಲ್ಲಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ವೈವಿಧ್ಯಮಯ ಆಹಾರ ಪದಾರ್ಥಗಳ ಸಂಗಮವೇ ಕಂಡುಬಂತು. ಹಲವೆಡೆಯಿಂದ ಬಂದಿದ್ದ ಸ್ಪರ್ಧಿಗಳು, ತಮ್ಮ ಪ್ರದೇಶದ ತಿನಿಸುಗಳನ್ನು ಸ್ಪರ್ಧೆಗೆ ತಂದಿದ್ದರು.
ಪ್ರವೇಶ ಶುಲ್ಕವಿಲ್ಲದೇ ಉಚಿತವಾಗಿ ಸ್ಪರ್ಧೆ ಆಯೋಜಿಸಿದ್ದಕ್ಕಾಗಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಿಗೆ ಅವರು ಧನ್ಯವಾದ ಸಮರ್ಪಿಸಿದರು. ಹತ್ತಾರು ಖಾದ್ಯಗಳ ಸಮಾಗಮ, ರುಚಿಗಳ ವೈವಿಧ್ಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಹಾಗೂ ಸವಿಯುವುದಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದರು.
‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮ ಖ್ಯಾತಿಯ ಮುರುಳಿ–ಸುಚಿತ್ರಾ ದಂಪತಿ ಸ್ಥಳದಲ್ಲೇ ಅವಲಕ್ಕಿ ಖಾದ್ಯವನ್ನು ತಯಾರಿಸಿ ಸ್ಪರ್ಧೆಗೆ ಚಾಲನೆ ನೀಡಿದರು.
ಸ್ಪರ್ಧೆಯ ನಿಯಮದಂತೆ, ಮನೆಯಲ್ಲೇ ಸಿದ್ಧಪಡಿಸಿಕೊಂಡು ತಂದಿದ್ದ ಖಾದ್ಯಗಳನ್ನು ಸ್ಪರ್ಧಿಗಳು ತಮಗೆ ನೀಡಲಾಗಿದ್ದ ಟೇಬಲ್‌ಗಳ ಮೇಲೆ ವ್ಯವಸ್ಥಿತವಾಗಿ ಜೋಡಿಸಿಟ್ಟಿದ್ದರು. ಕೆಲವರು, ಮೊಂಬತ್ತಿ, ಹೂವುಗಳು, ಗೊಂಬೆಗಳು ಹಾಗೂ ದೇವರ ಕಲಾಕೃತಿಗಳನ್ನು ಇಟ್ಟು ಖಾದ್ಯವನ್ನು ಆಕರ್ಷಕವಾಗಿ ಅಲಂಕರಿಸಿದ್ದು ಗಮನಸೆಳೆಯಿತು.
ಪ್ರತಿಯೊಬ್ಬರ ಬಳಿಗೂ ಹೋದ ತೀರ್ಪುಗಾರರಾದ ಮುರುಳಿ–ಸುಚಿತ್ರಾ, ಪ್ರತಿ ತಿನಿಸಿನ ರುಚಿಯನ್ನೂ ನೋಡಿ ಗುಣಮಟ್ಟಕ್ಕೆ ಅಂಕ ನೀಡಿದರು. ಪ್ರಸ್ತುತಿ, ಆವಿಷ್ಕಾರವನ್ನೂ ಮೌಲ್ಯಮಾಪನ ಮಾಡಿದರು. ‘ಅತ್ಯಂತ ಗುಣಮಟ್ಟದ ಸ್ಪರ್ಧೆ ಇದಾಗಿತ್ತು’ ಎಂದ ಈ ದಂಪತಿ, ತಮಗೆ ಇಷ್ಟವಾದ ತಿನಿಸುಗಳನ್ನು ತಿಳಿಸಿ ಸಿದ್ಧಪಡಿಸಿದವರಿಗೆ ಪಾಲ್ಗೊಂಡಿದ್ದವರಿಂದ ‘ಚಪ್ಪಾಳೆಗಳ ಅಭಿನಂದನೆ’ ಸಲ್ಲುವಂತೆ ಮಾಡಿದರು.
ಕೆಲವು ಸ್ಪರ್ಧಿಗಳು ಒಂದಕ್ಕಿಂತ ಹೆಚ್ಚು ಖಾದ್ಯಗಳನ್ನು ತಯಾರಿಸಿ ತಂದಿದ್ದರು. ಆಗ, ಅವರ ಆಯ್ಕೆಯ ಒಂದನ್ನು ಮಾತ್ರ ತೀರ್ಪುಗಾರರು ಸ್ಪರ್ಧೆಗೆ ಪರಿಗಣಿಸಿದರು. ಹದಿಹರೆಯದವರಿಂದ ಹಿರಿಯ ನಾಗರಿಕರವರೆಗೆ ಎಲ್ಲ ವಯೋಮಾನದವರೂ ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ತಾವು ಖಾದ್ಯ ತಯಾರಿಸಿದ ಬಗೆ, ತೆಗೆದುಕೊಂಡ ಸಮಯ, ಬಳಸಿದ ಪದಾರ್ಥಗಳ ವಿವರಣೆ ನೀಡಿ ಸ್ಪರ್ಧಿಗಳು ತೀರ್ಪುಗಾರರ ಮನಗೆಲ್ಲಲು ಯತ್ನಿಸಿದರು. ಪ್ರತಿಯೊಬ್ಬರ ಬಳಿಯೂ ತಾಳ್ಮೆಯಿಂದ ಮಾಹಿತಿ ಪಡೆದ ತೀರ್ಪುಗಾರರು ರುಚಿಯನ್ನೂ ಸವಿದು ಪ್ರೋತ್ಸಾಹಿಸಿದರು. ‘ಚೆನ್ನಾಗಿದೆ’ ಎಂದು ಉದ್ಗರಿಸಿ ಬೆನ್ನು ತಟ್ಟಿದರು.
ಸ್ಪರ್ಧಿಗಳೆಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಫ್ರೀಡಂ ಆಯಿಲ್ ಮಾರ್ಕೆಟಿಂಗ್ ಹೆಡ್ ಹರ್ಷ್, ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ‘ಡೆಕ್ಕನ್ ಹೆರಾಲ್ಡ್’ ಬ್ಯೂರೊ ಮುಖ್ಯಸ್ಥ ಟಿ.ಆರ್. ಸತೀಶ್‌ಕುಮಾರ್, ಟಿಪಿಎಂಎಲ್ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್.ಪ್ರಕಾಶ್, ಸಹಾಯಕ ವ್ಯವಸ್ಥಾಪಕ ಲೋಕೇಶ್ ಪಿ.ಆರ್., ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಸ್ಕಂದನ್‌ರಾವ್, ಈವೆಂಟ್ಸ್ ವಿಭಾಗದ ಪ್ರಮೋದ್ ಹಾಗೂ ಅಂಗೀರಾ ಬಿಸ್ವಾಸ್ ಪಾಲ್ಗೊಂಡಿದ್ದರು.
ಮಾಸ್ಟರ್‌ಕ್ಲಾಸ್ ನಡೆಸಿದ ಮುರುಳಿ ಮಾತನಾಡಿ ‘ಯಾವುದೇ ಅಡುಗೆ ಇರಲಿ ಅದಕ್ಕೆ ನೋಟ ಮತ್ತು ಆಸ್ವಾದ ಚೆನ್ನಾಗಿರಬೇಕು. ಪ್ರಸ್ತುತಿ ಬಹಳ ಮುಖ್ಯವಾಗುತ್ತದೆ. ರುಚಿಯೂ ಇರಬೇಕು. ಆಗ ಅದು ತೀರ್ಪುಗಾರರ ಮನ ಗೆಲ್ಲುತ್ತದೆ. ನಾನು ಬಹಳಷ್ಟು ಕಡೆ ಸ್ಪರ್ಧೆಗಳಿಗೆ ಹೋಗಿದ್ದೇನೆ. ಆದರೆ ಮೈಸೂರಿನಲ್ಲಿ ಸಾಂಪ್ರದಾಯಿಕ ತಿನಿಸುಗಳು ಬಹಳ ರುಚಿಯಾಗಿದ್ದವು. ಬಹುಮಾನಕ್ಕೆ ಆಯ್ಕೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಒಂದಕ್ಕಿಂತ ಮತ್ತೊಂದು ಚೆನ್ನಾಗಿತ್ತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಮನೆಗಳಲ್ಲಿ ಅಡುಗೆಗೆ ಉತ್ತಮ ಪ್ರತಿಕ್ರಿಯೆ ಕೊಡಬೇಕು. ಆಗ ತಯಾರಿಸಿದವರಿಗೂ ಖುಷಿಯಾಗುತ್ತದೆ. ಚೆನ್ನಾಗಿದೆ ಎಂದರೆ ಇನ್ನೂ ಚೆನ್ನಾಗಿ ತಯಾರಿಸಲು ಪ್ರಯತ್ನಿಸುತ್ತಾರೆ. ಚೆನ್ನಾಗಿಲ್ಲ ಎಂದರೆ ಸುಧಾರಣೆ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಅಡುಗೆಗೆ ಪ್ರತಿಕ್ರಿಯಿಸಬೇಕು’ ಎಂದು ತೀರ್ಪುಗಾರರಾಗಿದ್ದ ಸುಚಿತ್ರಾ ಹೇಳಿದರು. ಈ ಅಭಿಪ್ರಾಯಕ್ಕೆ ಬಹಳಷ್ಟು ಮಹಿಳೆಯರು ದನಿಗೂಡಿಸಿದರು.
ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಸುರಕ್ಷಿತ ಬಳಕೆಯ ಬಗ್ಗೆ ಇಂಡೇನ್ ತಂಡದ ಸೇಲ್ಸ್ ಮ್ಯಾನೇಜರ್ ಗೋವರ್ಧನ್ ಅವರು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಹೇಗಿಟ್ಟುಕೊಳ್ಳಬೇಕು ಎಲ್ಲಿಡಬೇಕು ಸುರಕ್ಷತೆಗೆ ಬಳಸಬೇಕಾದ ಉಪಕರಣಗಳು ಯಾವುವು ಎಂಬುದನ್ನು ತಿಳಿಸಿಕೊಟ್ಟರು. ‘ಫೈರ್ ಪ್ರೂಫ್ ಏಪ್ರನ್’ಗಳು ಮಾರುಕಟ್ಟೆಗೆ ಬಂದಿದ್ದು ಅವುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಅನಿಲ ಉಳಿತಾಯದ ಉಪಾಯಗಳನ್ನು ಹೇಳಿಕೊಟ್ಟರು. ‘ಸಿಲಿಂಡರ್‌ನಲ್ಲಿ ಸೋರಿಕೆ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ತೂಕವನ್ನೂ ಖಾತ್ರಿಪಡಿಸಿಕೊಳ್ಳಬೇಕು. ಸ್ವಯಂ ದುರಸ್ತಿ ಸಲ್ಲದು. ಐದು ವರ್ಷಕ್ಕೊಮ್ಮೆ ಸುರಕ್ಷಾ ಪೈಪ್ ಬದಲಾಯಿಸಬೇಕು’ ಎಂದು ಸಲಹೆ ನೀಡಿದರು.
ಖಾದ್ಯ ತಯಾರಿಯೆಂದರೆ ಸದಾ ಅಚ್ಚುಮೆಚ್ಚು. ಅಡುಗೆ ಮನೆಗೆಯಿಂದ ಹೊರಬಂದು ಮೊದಲ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಇನ್ನಷ್ಟು ಸಂಭ್ರಮ ತಂದಿದೆ. ಸಿಹಿಗುಂಬಳ ಕಡುಬಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
-ಎಸ್.ಅಶ್ವಿನಿ, ಕುವೆಂಪುನಗರ
ಅಡುಗೆಯನ್ನು ಸ್ಪರ್ಧೆಯ ಭಾಗವಾಗಿ ನೋಡುವುದೇ ಹೊಸ ಸಂಭ್ರಮ. ಭಾಗವಹಿಸುವುದು ಖುಷಿ ನೀಡಿದೆ. ಕುಟುಂಬದೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದು, ಸಂತಸದ ಕ್ಷಣಗಳನ್ನು ಕಳೆದೆ
-ಆರ್.ಶಿವರಂಜನಿ, ಶ್ರೀರಾಂಪುರ 2ನೇ ಹಂತ
ಪತಿ ಹಾಗೂ ನಾನು ಮುದ್ದೆ, ರೊಟ್ಟಿ, ಪಲ್ಯ ಮಾಡಿ ತಂದಿದ್ದೇವೆ. ಇಲ್ಲಿ ಬಂದಿರುವ ಸ್ಪರ್ಧಿಗಳ ಉತ್ಸಾಹ ನೋಡಿಯೇ ಖುಷಿಯಾಯಿತು. ಬಹುಮಾನಕ್ಕಿಂತ ಪಾಲ್ಗೊಂಡ ಸಂಭ್ರಮವೇ ಹೆಚ್ಚು ಕಾಲ ಉಳಿಯಲಿದೆ
-ಎಸ್.ಹರ್ಷಿತಾ, ಬೋಗಾದಿ
ಸ್ಪರ್ಧೆಯ ಸುದ್ದಿ ಸಿಕ್ಕಾಗ, ಅಪರೂಪ ಎನಿಸುವ ಗಿಣ್ಣು ಮಾಡಿ ತರಲು ನಿರ್ಧರಿಸಿದ್ದೆ. ಗೀಬು ಹಾಲು, ಬೆಲ್ಲ ಬೆರೆಸಿದ ಗಿಣ್ಣುಗೆ ಹದವಾಗಿ ಡ್ರೈಫ್ರೂಟ್ಸ್ ಹಾಕಿ ಸಿದ್ಧಪಡಿಸಿದ್ದೆ
-ಶೋಭಾ ಶಿವಾನಂದ್, ದಟ್ಟಗಳ್ಳಿ
ಈವರೆಗೆ ಯಾವುದೇ ಅಡುಗೆ ಸ್ಪರ್ಧೆಯಲ್ಲಿ ಭಾಗಿಯಾಗಿರಲಿಲ್ಲ. ‘ಪ್ರಜಾವಾಣಿ’ಯು ಕಾರ್ಯಕ್ರಮ ಆಯೋಜಿಸಿ ಉತ್ತಮ ಅವಕಾಶ ನೀಡಿತು.
-ರೇಖಾ ವಿನೋದ್, ಸೋಮನಾಥನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.