ಮೈಸೂರು: ನಗರದ ಕಿರುರಂಗಮಂದಿರವು ಸೋಮವಾರ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ‘ಕರ್ವಾಲೋ’ ಲೋಕದ ಮೆಲುಕಿನಲ್ಲಿ ಮಿಂದಿತು.
ಕಾದಂಬರಿ ರಚನೆಯಾಗಿ 50 ವರ್ಷವಾದ ಪ್ರಯುಕ್ತ ಇಲ್ಲಿನ ಕಿರುರಂಗಮಂದಿರದಲ್ಲಿ ಸೋಮವಾರ ಅವರ ಒಡನಾಡಿಗಳು, ಲೇಖಕರು ಹಾಗೂ ವಿಮರ್ಶಕರು ತೇಜಸ್ವಿಯವರ ಬದುಕು–ಬರಹವನ್ನು ನೆನೆದರು.
ಇದರೊಂದಿಗೆ, ‘ಕರ್ವಾಲೊ 50; ತೇಜಸ್ವಿ ಮತ್ತು ಪರಿಸರ’ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ‘ಮಾಯಲೋಕ’ ಸಾಕ್ಷ್ಯಚಿತ್ರ ಹಾಗೂ ‘ಜುಗಾರಿಕ್ರಾಸ್’ ಕಾದಂಬರಿ ಆಧರಿತ ನಾಟಕವು ನೆನಪನ್ನು ಸಂಪನ್ನಗೊಳಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ‘ಕರ್ವಾಲೊ ಮೂಲಕ ತೇಜಸ್ವಿ ದುರಂತ ಕಥನ ಹೇಳಲಿಲ್ಲ. ವಿಜ್ಞಾನದ ಮೂಲಕ ಜೀವಪರವಾದ ನಿಲುವನ್ನು ಪ್ರದರ್ಶಿಸಿದರು. ಕಾಡನ್ನು ಉಳಿಸಿದ ಆದಿವಾಸಿಗಳು, ಜ್ಞಾನ ಪರಂಪರೆ ಉಳಿಸಿದ ರೈತರು ಹಾಗೂ ಅಸ್ಪೃಶ್ಯರಲ್ಲಿ ಅವರು ಅನುಭಾವವನ್ನು ಹುಡುಕಿದರು. ಅನುಭಾವ, ಅಧ್ಯಾತ್ಮವು ವಿಜ್ಞಾನದಿಂದ ಸಿಗುತ್ತದೆ. ಧರ್ಮದ ಮೂಲಕ ಸಿಗುವುದಿಲ್ಲವೆಂದಿದ್ದರು’ ಎಂದು ಸ್ಮರಿಸಿದರು.
‘ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ನರಕ ಮಾಡಲಾಗುತ್ತಿದೆ. ನದಿ ನೀರನ್ನು ತಡೆದು, ಜೋಗಕ್ಕೆ ಮರುಪೂರಣ ಮಾಡುವ ಯೋಜನೆಯಂಥವು ಬರುತ್ತಿವೆ. ಬಂಜರು ಭೂಮಿ ಆಗಿಸುವ ಹುನ್ನಾರಗಳಿವು’ ಎಂದು ಬೇಸರಿಸಿದರು.
ಒಡನಾಡಿ ಪ್ರೊ.ಬಿ.ಎನ್.ಶ್ರೀರಾಮ ಮಾತನಾಡಿ, ‘1975ರಲ್ಲಿ ಮಾಸ ಪತ್ರಿಕೆಯೊಂದರ ಧಾರಾವಾಹಿಯಾಗಿ ಕರ್ವಾಲೊ ಪ್ರಕಟವಾಗಲು ಶುರುವಾದ ನಂತರ ಅದರ ಪ್ರಸರಣ ಸಂಖ್ಯೆ 15 ಸಾವಿರದಿಂದ 60 ಸಾವಿರಕ್ಕೇರಿತು. 1980ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿ 85ನೇ ಮುದ್ರಣವಾಗಿದೆ’ ಎಂದರು.
ಲೇಖಕ ಜಿ.ಪಿ.ಬಸವರಾಜು ಮಾತನಾಡಿ, ‘ತೇಜಸ್ವಿ ಮಲಯಾಳಂ ಲೇಖಕನಾಗಿದ್ದರೆ ಕರ್ವಾಲೊ 50ರ ಸಂಭ್ರಮವನ್ನು ಸರ್ಕಾರವೇ ದೊಡ್ಡ ಮಟ್ಟದಲ್ಲಿ ಆಚರಿಸುತ್ತಿತ್ತು’ ಎಂದರು.
ತೇಜಸ್ವಿ ಮತ್ತು ಹೊಸ ತಲೆಮಾರಿನ ಕಣ್ಣಲ್ಲಿ ಕುರಿತು ಚಲನಚಿತ್ರ ನಿರ್ದೇಶಕ ಶಶಾಂಕ್ ಸೋಗಲ್, ಕವಿ ಶಿವಪ್ರಸಾದ ಪಟ್ಟಣಗೆರೆ, ಎಸ್.ಜ್ಯೋತಿ, ಪತ್ರಕರ್ತ ನಾಗರಾಜ್ ನವೀಮನೆ, ಸಮಗ್ರ ಬರಹದ ಕುರಿತು ಪ್ರೊ.ಕೆ.ಸಿ.ಶಿವಾರೆಡ್ಡಿ, ‘ಕರ್ವಾಲೊ’ ಕುರಿತು ಪ್ರೊ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿದರು.
ಅಭಿರುಚಿ ಪ್ರಕಾಶನ, ರೈತಸಂಘ, ದಲಿತ ಸಂಘರ್ಷ ಸಮಿತಿ, ಮಾನವ ಮಂಟಪ, ನಿರಂತರ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕೃಷಿಕ ಎಂ.ವಿ.ಕೃಷ್ಣ, ಪುಸ್ತಕ ಪ್ರಕಾಶನದ ರಾಘವೇಂದ್ರ ಮೂಡಿಗೆರೆ ಪಾಲ್ಗೊಂಡಿದ್ದರು.
ಪಾತ್ರಗಳೇ ಬಂದು ತೇಜಸ್ವಿ ಪ್ರಶ್ನಿಸಿದ್ದವು..!
‘ಕರ್ವಾಲೊ ಕಾದಂಬರಿಯಲ್ಲಿ ಬರುವ ಬಿರಿಯಾನಿ ಕರಿಯಪ್ಪ ಒಮ್ಮೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರನ್ನು ‘ನನ್ನ ಬಗ್ಗೆ ಏನೇನೋ ಬರೆದಿದ್ದೀರಂತೆ’ ಎಂದು ತಕರಾರು ತೆಗೆದಿದ್ದನಂತೆ. ತೇಜಸ್ವಿ ಲೋಕದ ಪಾತ್ರಗಳಲ್ಲಿ ನೀವೂ ಒಬ್ಬರು. ಅವರನ್ನು ಕರಿಯಪ್ಪನಂತೆ ಪ್ರಶ್ನಿಸಿರಲಿಲ್ಲವೇ’ ಎಂಬ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಅವರ ಪ್ರಶ್ನೆಗೆ ಪ್ರಕಾಶಕ ಪ್ರೊ.ಬಿ.ಎನ್.ಶ್ರೀರಾಮ ‘ನನಗೊಂದು ಪತ್ರ ಬರೆದು ನಿಮ್ಮ ಪಾತ್ರದ ಕಥೆ ಪ್ರಕಟಿಸಬಹುದೇ ಎಂದು ಕೇಳಿದ್ದರು. ನಾನೇ ಕಾಪಿ ಮಾಡಿ ಪ್ರಕಟಿಸಲು ಪತ್ರಿಕೆಗೆ ಕಳುಹಿಸಿದ್ದೆ’ ಎಂದು ಉತ್ತರಿಸಿದರು. ಪಾತ್ರಗಳೇ ಎದುರಾಗಿ ತೇಜಸ್ವಿ ಅವರನ್ನು ಪ್ರಶ್ನಿಸಿದ್ದ ಘಟನೆಯನ್ನು ‘ಕರ್ವಾಲೊ ಸುತ್ತಮುತ್ತ’ ಸಂವಾದದಲ್ಲಿ ಶ್ರೀರಾಮ ಹೇಳಿದ್ದು ಹೀಗೆ. ಸೇನಾನಿ ಮಾತನಾಡಿ ‘ಪಾರ್ಶ್ವವಾಯುನಿಂದ ಬಳಲುತ್ತಿದ್ದ ಸ್ನೇಹಿತ ಖಿನ್ನತೆಗೆ ಒಳಗಾಗಿದ್ದ ಅವನ ಮನೆಯಲ್ಲಿ ತೇಜಸ್ವಿ ಅವರ ಮಿಲೇನಿಯಂ ಸರಣಿ ಪುಸ್ತಕಗಳೂ ಸೇರಿದಂತೆ ಹಲವು ಪುಸ್ತಕಗಳನ್ನು ಇಟ್ಟು ಬಂದಿದ್ದೆ ತಿಂಗಳಲ್ಲಿ ಅಷ್ಟೂ ಪುಸ್ತಕ ಓದಿ ಗೆಲುವಿನಂತಾಗಿದ್ದ. ಸಾಹಿತ್ಯದ ಶಕ್ತಿಯದು’ ಎಂದು ನೆನಪು ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀರಾಮ್ ‘ಶಿವಮೊಗ್ಗದ ಪುಸ್ತಕ ಮಳಿಗೆಯವರೊಬ್ಬರು ಕರೆ ಮಾಡಿ ಖಿನ್ನತೆಗೊಳಗಾಗಿದ್ದ ಬಿಎಸ್ಸಿ ಹುಡುಗಿಯೊಬ್ಬಳು ಕಿರಗೂರಿನ ಗಯ್ಯಾಳಿ ಓದಿ ಜೀವನ ಎದುರಿಸಲು ನಿರ್ಧರಿಸಿದ್ದಳಂತೆ ಎಂದಿದ್ದರು’ ಎಂದರು.
‘ಮಂತ್ರ ಮಾಂಗಲ್ಯಕ್ಕೆ ಹೋಗಿದ್ದೆ’
ಸೇನಾನಿ ಮಾತನಾಡಿ ‘ತೇಜಸ್ವಿ ಮಂತ್ರಮಾಂಗಲ್ಯ ವಿವಾಹದಲ್ಲಿ ಮೂಡಿಗೆರೆ ತೋಟಕ್ಕೆ ಹೋಗಿದ್ದೆ. ನಾನಾಗ ಚಿಕ್ಕ ಹುಡುಗ. ಹಂದಿಮಾಂಸದ ತಿನಿಸಷ್ಟೇ ನನಗೆ ಜ್ಞಾಪಕ’ ಎಂದು ನೆನಪಿಸಿಕೊಂಡರು ಅದಕ್ಕೆ ಶ್ರೀರಾಮ ‘ಅದನ್ನು ಮಾಡಿದ್ದು ನಾನು ಮತ್ತು ಅದೇ ಬಿರಿಯಾನಿ ಕರಿಯಪ್ಪ’ ಎಂದು ಚಟಾಕಿ ಹಾರಿಸಿದರು. ‘ಕರ್ವಾಲೊವನ್ನು ಸಾಹಿತ್ಯ ವಲಯ ಹೇಗೆ ಸ್ವೀಕಾರ ಮಾಡಿತು’ ಎಂಬ ಕೃಪಾಕರ ಅವರ ಪ್ರಶ್ನೆಗೆ ‘ಸಾಹಿತ್ಯ ವಲಯ ಎಂದಿಗೂ ಡಲ್ಲೇ. ವಿಜ್ಞಾನ ಲೇಖಕ ಅಂತಲೇ ನೋಡಿದವು. ಲಂಕೇಶ್ ಮಾತ್ರವೇ ಕೃತಿಯ ಬಗ್ಗೆ ಉತ್ತಮ ವಿಮರ್ಶೆ ಬರೆದರು’ ಎಂದು ಶ್ರೀರಾಮ್ ಹೇಳಿದರು. ‘ನವ್ಯದ ಪ್ರಭಾವದಿಂದ ಬಿಡಿಸಿಕೊಂಡು ಬರೆದ ಕೃತಿಯದು. ಪ್ರಾಕೃತಿಕ ಇತಿಹಾಸದ ಕಾಲದ ಹಿಮ್ಮುಖ ಪಯಣದಂತೆ ನನಗೆ ಕಾಣುತ್ತದೆ. ಕೃತಿಯ ಕೊನೆಯ ಘಟ್ಟದಲ್ಲಿ ‘ಹಾರುವ ಓತಿಯು ಕಾಲ– ದೇಶದ ಆಚೆಯ ವಿಸ್ಮೃತಿಯ ಶೂನ್ಯದಲ್ಲಿ ಲೀನವಾಯಿತು’ ಎನ್ನುತ್ತಾರೆ. ಜೀವವಿಕಾಸವು ಅನಂತ ಪಯಣವಾಗಿದ್ದು ಮನುಷ್ಯನದ್ದು ಮಾತ್ರವಲ್ಲ’ ಎಂದು ಸೇನಾನಿ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.