ADVERTISEMENT

‘ಬದಲಾವಣೆ ತರುವ ಶಕ್ತಿ ಸಾಹಿತ್ಯಕ್ಕಿದೆ’

ಬಹುಭಾಷಾ ಮುಂಗಾರು ಕವಿ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 15:57 IST
Last Updated 18 ಜೂನ್ 2019, 15:57 IST
ಮೈಸೂರು ನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಲ್ಯಾಣೋತ್ಸವ ಭವನದಲ್ಲಿ ಮಂಗಳವಾರ ನಡೆದ ಬಹುಭಾಷಾ ಮುಂಗಾರು ಕವಿ ಸಮ್ಮೇಳನದಲ್ಲಿ ಸಾಹಿತಿಗಳನ್ನು ಸನ್ಮಾನಿಸಲಾಯಿತು
ಮೈಸೂರು ನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಲ್ಯಾಣೋತ್ಸವ ಭವನದಲ್ಲಿ ಮಂಗಳವಾರ ನಡೆದ ಬಹುಭಾಷಾ ಮುಂಗಾರು ಕವಿ ಸಮ್ಮೇಳನದಲ್ಲಿ ಸಾಹಿತಿಗಳನ್ನು ಸನ್ಮಾನಿಸಲಾಯಿತು   

ಮೈಸೂರು: ’ಸಮಾಜವನ್ನು ಸರಿಯಾದ ದಾರಿಗೆ ತರುವಂತಹ ಶಕ್ತಿ ಸಾಹಿತ್ಯಕ್ಕಿದೆ’ ಎಂದು ವೆಂಕಟಗಿರಿ ‍‍ಪ್ರಕಾಶನದ ಮುಖ್ಯಸ್ಥ ಪ್ರೊ.ನೀ.ಗಿರಿಗೌಡ ಹೇಳಿದರು.

ವೆಂಕಟಗಿರಿ ಪ್ರಕಾಶನದ ವತಿಯಿಂದ ನಗರದ ವಿಜಯ ನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಲ್ಯಾಣೋತ್ಸವ ಭವನದಲ್ಲಿ ಮಂಗಳವಾರ ನಡೆದ ಬಹುಭಾಷಾ ಮುಂಗಾರು ಕವಿ ಸಮ್ಮೇಳನದಲ್ಲಿ ಮಾತನಾಡಿದರು.

’ಸರಸ್ವತಿಯ ಜ್ಞಾನ ಭಂಡಾರಕ್ಕೆ ಬೆಲೆ ಕಟ್ಟಲಾಗದು. ಕನ್ನಡ ಭಾಷೆಯ ಸಾಹಿತ್ಯ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇತರೆ ಭಾಷಾ ಸಾಹಿತ್ಯಕ್ಕೆ ಹೋಲಿಸಿದರೆ ನಮ್ಮ ಕನ್ನಡ ಸಾಹಿತ್ಯ ವಿಶಿಷ್ಷವಾಗಿದೆ. ನವ ಕವಿಗಳಿಗೆ ಸಮಾಜದಲ್ಲಿ ಒಂದು ನೆಲೆಯನ್ನು ಕಲ್ಪಿಸಿಕೊಡುವ ಉದ್ದೇಶದಿಂದ ವೆಂಕಟಗಿರಿ ‍‍ಪ್ರಕಾಶನ ಸ್ಥಾಪಿಸಲಾಗಿದೆ. ಕವಿಗಳು ರಚಿಸಿದ ಕವಿತೆಗಳನ್ನು ಪ್ರಸ್ತುತಿ ಪಡಿಸುವ ಮತ್ತು ಜನರಿಗೆ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ಉದ್ದೇಶ ಪೂರ್ವಕವಾಗಿ ಬಹುಭಾಷಾ ಮುಂಗಾರು ಕವಿ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.

ADVERTISEMENT

ಮೈಸೂರು ನಗರದ ಸಾಂಸ್ಕೃತಿಕ ಲೋಕಕ್ಕೆ ಸಾಹಿತಿ ಎಚ್ಚೆಸ್ಕೆ ಕೊಡುಗೆ ಅಪಾರ ಎಂದು, ಅವರನ್ನು ಸ್ಮರಿಸಿ ಕವಿ ಪ್ರೊ.ಮಳಲಿವಸಂತಕುಮಾರ್‌ ರಚಿಸಿದ ಕವಿತೆಯನ್ನು ಕಾರ್ಯಕ್ರಮದಲ್ಲಿ ಮಂಡಿಸಿದರು.

ಪ್ರೊ.ಬಿ.ಎನ್‌.ನಾಗರಾಜಭಟ್‌, ’ಆಕಾಶದಲ್ಲಿ ಕಪ್ಪು ಮೋಡಗಳ ಜಾತ್ರೆ, ಹೊಲ–ಗದ್ದೆಗಳಲ್ಲಿ ರೈತ ಹಿಡಿದಿದ್ದ ಪಾತ್ರೆ...’ ಎಂದು ಮುಂಗಾರಿನ ಸಮಯದಲ್ಲಿ ಮಳೆ ಮತ್ತು ರೈತನ ನಡುವಿನ ಸಂಬಂಧವನ್ನು ಕುರಿತು ರಚಿಸಿದ್ದ ಕವಿತೆಯನ್ನು ಪ್ರಸ್ತುತಪಡಿಸಿದರು.

ಕವಿ ರಂಗನಾಥ ’ದಟ್ಟ ಕಾಡುಗಳ ಹಸಿರಿನಲ್ಲಿ ಎಲೆಮರೆಯ ಕೋಗಿಲೆಯ ಗಾನದಲ್ಲಿ, ಹರಿವ ನೀರಿನ ಝುಳುಝುಳು ನಾದದಲ್ಲಿ ಕಣ್ತೆರೆಯ ಬೇಕಿದ್ದ ಕವಿತೆ ಕಾಣೆಯಾಗಿದೆ...’ ಎಂದು ಪ್ರಸ್ತುತದಲ್ಲಿ ಕವಿತೆ ರಚನೆಯ ಪ್ರವೃತಿ ಮರೆಯಾಗುತ್ತಿರುವ ಬಗ್ಗೆ ಬರೆದಿದ್ದ ಕವಿತೆಯನ್ನು ಹೇಳಿದರು.

ಸಮ್ಮೇಳನದಲ್ಲಿ 18ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಮುಂಗಾರು ಮಳೆ ಕುರಿತು ಕನ್ನಡ, ತಮಿಳು, ತೆಲುಗು, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಸ್ವತಃ ರಚಿಸಿದ್ದ ಕವಿತೆ–ಕವನಗಳನ್ನು ಮಂಡಿಸಿದರು.

ಯೋಗಾ ನರಸಿಂಹಸ್ವಾಮಿ ದೇವಸ್ಥಾನದ ಪೀಠಾಧಿಪತಿ ಡಾ.ಭಾಷ್ಯಂಸ್ವಾಮಿ, ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಕಲಾವಿದ ಹ.ರಾ.ಭದ್ರೇಶ್‌ಕುಮಾರ್‌, ಪ್ರೊ.ಸಿ.ಪಿ.ಕೃಷ್ಣಕುಮಾರ್‌, ಡಾ.ಕವಿತಾ ರಾಯ್‌, ಪ್ರೊ.ವೈ.ವಿ.ಹೆಗ್ಗಡೆ, ಡಾ.ಲತಾ ರಾಜಶೇಖರ್, ಡಾ.ಮಣಿ, ಡಾ.ಟಿ.ವಿ.ಸತ್ಯನಾರಾಯಣ, ಚಂಪಾ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.