ADVERTISEMENT

ಕಾಯಕ ಸಮಾಜಗಳಲ್ಲಿ ಸಂಘಟನೆ ಕೊರತೆ: ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌

ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:59 IST
Last Updated 14 ಆಗಸ್ಟ್ 2025, 6:59 IST
ಮೈಸೂರಿನ ರೋಟರಿ ಸಭಾಂಗಣದಲ್ಲಿ ಬುಧವಾರ ನಡೆದ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು
ಮೈಸೂರಿನ ರೋಟರಿ ಸಭಾಂಗಣದಲ್ಲಿ ಬುಧವಾರ ನಡೆದ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು   

ಮೈಸೂರು: ‘ಹಿಂದುಳಿದ ವರ್ಗಗಳು ಹಾಗೂ ಕಾಯಕ ಸಮಾಜಗಳು ಸಂಘಟನೆಯ ಕೊರತೆಯಿಂದಾಗಿ ಸಮುದಾಯದ ಸ್ಥಿತಿಗತಿಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಹಿಂದೆ ಬಿದ್ದಿವೆ’ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ವೀರ ಮಡಿವಾಳ ಸಂಘದಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ, ಮನ– ಮನೆಗೆ ಮಾಚಿದೇವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಅನುಭವ ಮಂಟಪದಲ್ಲಿ ಕಾಯಕ ಸಮಾಜಗಳ ಮಹತ್ವವನ್ನು ತಿಳಿಸಿದ್ದರು. ಈ ಸಮಾಜಗಳ ಕಾಯಕದ ಶ್ರಮದ ಫಲವೇ ವಚನ ಸಾಹಿತ್ಯವಾಗಿ ಹೊರಹೊಮ್ಮಿದೆ. ಮಡಿವಾಳ ಮಾಚಿದೇವರು ಅತ್ಯಂತ ನಂಬಿಕಸ್ಥರಾಗಿದ್ದವರು. ಈ ಸಮುದಾಯವೂ ಕಾಯಕ ನಿಷ್ಠೆ ಮತ್ತು ಶ್ರಮ ಜೀವನಕ್ಕೆ ಹೆಸರಾಗಿದೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಕೊಟ್ಟಿದ್ದರಿಂದ ಸಣ್ಣ ಸಮುದಾಯದವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶಗಳು ಸಿಕ್ಕಿವೆ. ಹಿಂದುಳಿದ ವರ್ಗಗಳ ಬೆಳವಣಿಗೆಗೆ ನಮ್ಮ ಮುಂದಿರುವ ಬಹುದೊಡ್ಡ ಅಸ್ತ್ರವೇ ಶಿಕ್ಷಣ. ಮಕ್ಕಳನ್ನು ಹೆಚ್ಚು ಶಿಕ್ಷಿತರನ್ನಾಗಿ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು’ ಎಂದು ತಿಳಿಸಿದರು.

ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ‘ಬುದ್ಧ ತೋರಿದ ಬೆಳಕಿನ ಹಾದಿಯಲ್ಲಿ ನಡೆದರೆ, ಅಂಬೇಡ್ಕರ್ ಅವರ ಸಂವಿಧಾನ ಸರಿಯಾಗಿ ಅನುಷ್ಠಾನಕ್ಕೆ ಬಂದರೆ ಕಾಯಕ ಸಮಾಜಗಳ ಬದುಕು ಹಸನಾಗುತ್ತದೆ’ ಎಂದರು.

ಮುಖ್ಯಮಂತ್ರಿಯವರ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್ ಮಾತನಾಡಿ, ‘ಕೀಳರಿಮೆ ಇಟ್ಟುಕೊಂಡು, ನೋವುಗಳನ್ನು ಅನುಭವಿಸಿದರೆ ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೀಳರಿಮೆಯಿಂದ ಹೊರಬರಬೇಕು’ ಎಂದು ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಮಡಿವಾಳ ಸಮಾಜದ ಶೇ 90ರಷ್ಟು ಮಂದಿಗೆ ಅನುಕೂಲವಾಗಿದೆ. ನಮ್ಮ ಸಮಾಜಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ಇಲ್ಲ. ನಾವು ಸಂಘಟಿತರಾದರೆ ಜನಪ್ರತಿನಿಧಿಗಳು ತಾವಾಗಿಯೇ ಬರುತ್ತಾರೆ. ಈ ಸಮಾಜ ಪರಿಶಿಷ್ಟ ಜಾತಿಗೆ ಸೇರಲು ಅರ್ಹವಾಗಿದೆ’ ಎಂದರು.

ಎಡಿಎಲ್‌ಆರ್‌ ಮಂಜುನಾಥ್, ಪಿಕೆಟಿಬಿ ಆಸ್ಪತ್ರೆಯ ಡಾ.ಪ್ರಸಾದ್, ಡಾ.ಪ್ರಶಾಂತ್, ಸಂತೋಷ್ ಕಿರಾಳು, ಕರ್ನಾಟಕ ಪವರ್ ಸಂಪಾದಕ ಡಿ.ಎನ್.ಬಾಬು, ಮುಖಂಡರಾದ ಸಿ.ಬಾಲಚಂದ್ರನ್, ಜೋಗಿ ಮಹೇಶ್ ಅವರನ್ನು ಸನ್ಮಾನಿಸಲಾಯಿತು.

ಚಿತ್ರದುರ್ಗದ ಮಾಚಿದೇವ ಸಂಸ್ಥಾನ ಮಠದ ಪೀಠಾಧಿಪತಿ ಬಸವ ಮಾಚಿದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ದ್ಯಾವಪ್ಪ ನಾಯಕ, ಜಯರಾಜ್ ಹೆಗಡೆ, ಸಮಿತಿಯ ಗೌರವಾಧ್ಯಕ್ಷ ಬಿ.ಜಿ ಕೇಶವ, ಅಧ್ಯಕ್ಷ ಸತ್ಯನಾರಾಯಣ, ಹರಿಹರ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆಂಪಶೆಟ್ಟಿ, ಉಪಾಧ್ಯಕ್ಷ ಕುರುಬೂರು ಮಹಾದೇವಸ್ವಾಮಿ, ಹರ್ಷವರ್ಧನ್ ಸಾಲಿಗ್ರಾಮ, ಕೃಷ್ಣಯ್ಯ , ಸಿ.ಎಸ್. ಮಹೇಶ್, ವಿ ಚಿಲಕುಂದ ಹಾಗೂ ಖಜಾಂಚಿ ರವಿಚಂದ್ರ, ಸಂಘಟನಾ ಕಾರ್ಯದರ್ಶಿ ಮಂಜು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.