ADVERTISEMENT

ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಉದ್ಘಾಟನೆಗೆ ಸಜ್ಜು

ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಿಂದ ನಿರ್ವಹಣೆ: ಸಾವಿರಾರು ರೋಗಿಗಳಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:28 IST
Last Updated 4 ಮಾರ್ಚ್ 2026, 5:28 IST
ಮೇಟಗಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ
ಮೇಟಗಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ   

ಮೈಸೂರು: ನಗರದ ಕೆಆರ್‌ಎಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ‘ಪೆರಿಫೆರಲ್‌ ಕ್ಯಾನ್ಸರ್ ಕೇಂದ್ರ’ ನಿರ್ಮಾಣ ಕಾಮಗಾರಿಯು ಮುಕ್ತಾಯದ ಹಂತದಲ್ಲಿದ್ದು, ಉದ್ಘಾಟನೆಗೆ ಸಜ್ಜಾಗುತ್ತಿದೆ.

ಬೆಂಗಳೂರಿನಲ್ಲಿರುವ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಮೇಲಿನ ಒತ್ತಡ ತಪ್ಪಿಸಿ ರೋಗಿಗಳಿಗೆ ಅವರ ಸಮೀಪದ ಸ್ಥಳಗಳಲ್ಲಿಯೇ ಚಿಕಿತ್ಸೆ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರವು ಮೈಸೂರು, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪೆರಿಫೆರಲ್‌ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿತ್ತು. ಅದರಂತೆ 2023ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಈ ಕೇಂದ್ರ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡೂವರೆ ವರ್ಷದಲ್ಲೇ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತಿದೆ.

ಕೆಆರ್‌ಎಸ್‌ ರಸ್ತೆಯ ಮೇಟಗಳ್ಳಿಯಲ್ಲಿರುವ ಪಿ.ಕೆ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ 5 ಎಕರೆ ಜಾಗದಲ್ಲಿ ಈ ಕೇಂದ್ರವು ನಿರ್ಮಾಣ ಆಗುತ್ತಿದೆ. ಇದಕ್ಕಾಗಿ ಸರ್ಕಾರವು ಒಟ್ಟು ₹121 ಕೋಟಿ ವಿನಿಯೋಗಿಸುತ್ತಿದೆ. ಮೊದಲ ಹಂತದಲ್ಲಿ 100 ಹಾಸಿಗೆ ಸಾಮರ್ಥ್ಯದಲ್ಲಿ ಚಿಕಿತ್ಸೆ ಸಿಗಲಿದ್ದು, ಕ್ರಮೇಣ 350 ಹಾಸಿಗೆಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ.

ADVERTISEMENT

ಸದ್ಯ ಸಿವಿಲ್‌ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಆಸ್ಪತ್ರೆಗೆ ಬೇಕಾದ ಯಂತ್ರೋಪಕರಣಗಳ ಖರೀದಿ ಬಾಕಿ ಇದೆ. ನಂತರದಲ್ಲಿ ಸರ್ಕಾರ ಇದಕ್ಕೆ ಬೇಕಾದ ಅಗತ್ಯ ವೈದ್ಯರು, ತಂತ್ರಜ್ಞರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಿದೆ.

ತಪ್ಪಲಿದೆ ಅಲೆದಾಟ: ರಾಜ್ಯದ ಪ್ರಮುಖ ಸರ್ಕಾರಿ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಯಾದ ಕಿದ್ವಾಯಿ ಆಸ್ಪತ್ರೆಗೆ ಮೈಸೂರು ಭಾಗದಿಂದಲೂ ಪ್ರತಿ ವರ್ಷ ಸಾವಿರಾರು ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಕೆಲವೊಮ್ಮೆ ಚಿಕಿತ್ಸೆಗಾಗಿ ದಿನಗಟ್ಟಲೇ ಕಾಯುವ ಪರಿಸ್ಥಿತಿಯೂ ಇದೆ. ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪೆರಿಫೆರಲ್‌ ಕೇಂದ್ರ ಆರಂಭಗೊಂಡಲ್ಲಿ ರಾಜಧಾನಿ ಬೆಂಗಳೂರಿಗೆ ರೋಗಿಗಳು ಹಾಗೂ ಅವರ ಸಂಬಂಧಿಕರ ಅಲೆದಾಟ ತಪ್ಪಲಿದೆ. ಮೈಸೂರಿನ ಜೊತೆಗೆ ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳ ಜನರಿಗೂ ಇದರಿಂದ ಅನುಕೂಲ ಆಗಲಿದೆ.

ಸದ್ಯ ಕೆ.ಆರ್. ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿ ರೇಡಿಯೊ ಥೆರೆಪಿ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಪ್ರತಿದಿನ ಸರಾಸರಿ 40 ಜನರಿಗೆ ಚಿಕಿತ್ಸೆ ಸಿಗುತ್ತಿದೆ. ಕೆಲವೊಮ್ಮೆ ರೋಗಿಗಳು ತಮ್ಮ ಸರದಿಗಾಗಿ ಕಾಯಬೇಕಿದೆ. ಹೆಚ್ಚಿನ ಮಂದಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಈ ಪರಿಸ್ಥಿತಿ ತಪ್ಪಲಿದೆ.

ಕೆ.ಹರೀಶ್‌ಗೌಡ
ಕಿದ್ವಾಯಿ ಕ್ಯಾನ್ಸರ್ ಕೇಂದ್ರದ ಸಿವಿಲ್ ಕಾಮಗಾರಿಗಳು ಮುಗಿದಿದ್ದು ಆಸ್ಪತ್ರೆಗೆ ಬೇಕಾದ ಯಂತ್ರೋಪರಣ ಖರೀದಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಅವರಿಂದ ಆಸ್ಪತ್ರೆ ಉದ್ಘಾಟಿಸಲಾಗುವುದು
ಕೆ. ಹರೀಶ್‌ ಗೌಡ ಶಾಸಕ

ಏನೇನು ಇರಲಿದೆ?

ಒಟ್ಟು ಎರಡು ಅಂತಸ್ತುಗಳ ಕಟ್ಟಡ ಇದಾಗಿದೆ. ನೆಲಮಹಡಿಯಲ್ಲಿ ನೋಂದಣಿ ಕೇಂದ್ರ ತುರ್ತು ಘಟಕ ಹೊರ ರೋಗಿಗಳ ವಿಭಾಗ ಒಪಿಡಿ ರಕ್ತ ಸಂಗ್ರಹ ಕೇಂದ್ರ ರೇಡಿಯೋಲಜಿ ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ ರೇಡಿಯೇಷನ್ ಆ್ಯಂಕೊಲಜಿ ಫಾರ್ಮಸಿ ಹಾಗೂ ಕ್ಯಾಂಟೀನ್ ಇರಲಿದೆ. ಮೊದಲ ಮಹಡಿಯಲ್ಲಿ ಜನರಲ್ ವಾರ್ಡ್ ಐಸಿಯು ಶಸ್ತ್ರಚಿಕಿತ್ಸಾ ಕೊಠಡಿ ಪ್ರಯೋಗಾಲಯ ಸರ್ಜಿಕಲ್ ಆಂಕೊಲಜಿ ಪ್ಯಾಥಾಲಜಿ ಬಯೋ ಕೆಮಿಸ್ಟ್ರಿ ಮೆಡಿಕಲ್ ಆಂಕೊಲಜಿ ಸೇರಿದಂತೆ ವಿವಿಧ ವಿಭಾಗಗಳು ಕಾನ್ಫರೆನ್ಸ್ ಕೊಠಡಿಗಳು ಇರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.