ADVERTISEMENT

ಕಿಸಾನ್‌ ಸ್ವರಾಜ್‌ ಸಮ್ಮೇಳನ ಮುಕ್ತಾಯ: ‘ರೈತರನ್ನು ಕಂಪನಿಗಳ ಪಾಲು ಮಾಡದಿರಿ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 14:34 IST
Last Updated 13 ನವೆಂಬರ್ 2022, 14:34 IST
ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಭಾನುವಾರ ನಡೆದ ಕಿಸಾನ್‌ ಸ್ವರಾಜ್‌ ಸಮ್ಮೇಳನದ ಸಮಾರೋಪದಲ್ಲಿ ಸಂಘಟಕ ಶ್ರೀಧರ್ ರಾಧಾಕೃಷ್ಣನ್‌ ಮಾತನಾಡಿದರು. ಕೆಎಸ್‌ಒಯು ಕುಲಸಚಿವ ಖಾದರ್‌ ಪಾಷಾ, ರಾಜ್ಯಸಭಾ ಸದಸ್ಯ ಅನಿಲ್ ಹೆಗ್ಡೆ, ರೈತ ಮಹಿಳೆಯರ ಹಕ್ಕುಗಳ ಹೋರಾಟಗಾರ್ತಿ ಆಶ್ಲೇಶಾ ಖಾದ್ಸೆ, ಉಷಾ ಸೂಲಪಾಣಿ, ಕಾರ್ತಿಕ್ ಗುಣಸೇಖರ್‌ ಇದ್ದಾರೆ/ ಪ್ರಜಾವಾಣಿ ಚಿತ್ರ
ಮೈಸೂರಿನ ಮುಕ್ತ ಗಂಗೋತ್ರಿಯಲ್ಲಿ ಭಾನುವಾರ ನಡೆದ ಕಿಸಾನ್‌ ಸ್ವರಾಜ್‌ ಸಮ್ಮೇಳನದ ಸಮಾರೋಪದಲ್ಲಿ ಸಂಘಟಕ ಶ್ರೀಧರ್ ರಾಧಾಕೃಷ್ಣನ್‌ ಮಾತನಾಡಿದರು. ಕೆಎಸ್‌ಒಯು ಕುಲಸಚಿವ ಖಾದರ್‌ ಪಾಷಾ, ರಾಜ್ಯಸಭಾ ಸದಸ್ಯ ಅನಿಲ್ ಹೆಗ್ಡೆ, ರೈತ ಮಹಿಳೆಯರ ಹಕ್ಕುಗಳ ಹೋರಾಟಗಾರ್ತಿ ಆಶ್ಲೇಶಾ ಖಾದ್ಸೆ, ಉಷಾ ಸೂಲಪಾಣಿ, ಕಾರ್ತಿಕ್ ಗುಣಸೇಖರ್‌ ಇದ್ದಾರೆ/ ಪ್ರಜಾವಾಣಿ ಚಿತ್ರ   

ಮೈಸೂರು: ತಂತ್ರಜ್ಞಾನ, ಕೃಷಿ ಉತ್ಪಾದನೆ ಹೆಚ್ಚಳದ ನೆಪದಲ್ಲಿ ಸಾಂಪ್ರದಾಯಿಕ ಕೃಷಿ ಹಾಗೂ ಕೃಷಿಕರನ್ನು ಕಾರ್ಪೊರೇಟ್‌ ಕಂಪನಿಗಳ ಪಾಲು ಮಾಡುವುದನ್ನು ವಿರೋಧಿಸಿ ‘ಕಿಸಾನ್‌ ಸ್ವರಾಜ್‌ ಸಮ್ಮೇಳನ’ದಲ್ಲಿ ರೈತರು ಘೋಷಣೆ ಮೊಳಗಿಸಿದರು.

ಇಲ್ಲಿನ ಮುಕ್ತ ಗಂಗೋತ್ರಿಯಲ್ಲಿ ‘ಆಶಾ (ಅಲಯನ್ಸ್‌ ಫಾರ್‌ ಸಸ್ಟೈನಬಲ್ ಆ್ಯಂಡ್‌ ಹೊಲಿಸ್ಟಿಕ್‌ ಅಗ್ರಿಕಲ್ಚರ್‌) ಕಿಸಾನ್‌ ಸ್ವರಾಜ್‌ ಒಕ್ಕೂಟ’ವು ಭಾನುವಾರ ಆಯೋಜಿಸಿದ್ದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ರೈತರು ದನಿಗೂಡಿಸಿದರು.

ರೈತ ಮಹಿಳೆಯರ ಹಕ್ಕುಗಳ ಹೋರಾಟಗಾರ್ತಿ ಆಶ್ಲೇಶಾ ಖಾದ್ಸೆ ಹಾಗೂ ಸಂಜೀವ್‌ ಕುಲಕರ್ಣಿ ಘೋಷಣೆಗಳನ್ನು ಮಂಡಿಸಿದರು.

ADVERTISEMENT

* ರೈತರ ಭೂಮಿ, ಬೀಜ, ಮಾರುಕಟ್ಟೆ ಅಸ್ಥಿರಗೊಳಿಸಲು ಕಾರ್ಪೊರೇಟ್‌ ಕಂಪನಿಗಳು ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಅದರ ವಿರುದ್ಧ ಸಂಘಟಿತರಾಗಿ ಹೋರಾಡಬೇಕು.

* ಎಲ್ಲರನ್ನೂ ಒಳಗೊಳ್ಳುವ ಪರಿಸರಾತ್ಮಕ ಕೃಷಿ ಪದ್ಧತಿಯನ್ನೇ ಅನುಸರಿಸಬೇಕು. ಅದನ್ನು ಬೆಂಬಲಿಸುವ ತಂತ್ರಜ್ಞಾನಗಳನ್ನಷ್ಟೆ ಒಪ್ಪಬೇಕು.

* ರೈತರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಸಾರ್ವಭೌಮತೆ ಹೆಚ್ಚಿಸಬೇಕು. ನೀತಿ ಜಾರಿಗೆ ಮುನ್ನ ರೈತರ ಒಪ್ಪಿಗೆ ಪಡೆಯಬೇಕು.

* ರೈತ ಮಹಿಳೆಯರಿಗೆ ಭೂಮಿ ಹಕ್ಕು ವಿಷಯದಲ್ಲಿ ಕಾನೂನಾತ್ಮಕ ಬೆಂಬಲ ನೀಡಬೇಕು. ನಿಜವಾದ ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ಸಿಗಬೇಕು. ಅನ್ಯ ಉದ್ದೇಶಕ್ಕೆ ಮಾರಾಟ ತಪ್ಪಿಸಬೇಕು.

* ಕನಿಷ್ಠ ಬೆಂಬಲ ಬೆಲೆ, ಯೋಗ್ಯ ಪರಿಹಾರ, ವಿಮೆ ನೀಡಬೇಕು. ರೈತರ ಆತ್ಮಹತ್ಯೆ ತಡೆಯಬೇಕು.

* ಬೀಜಗಳ ಹಕ್ಕುಸ್ವಾಮ್ಯ ಕಂಪನಿಗಳ ಪಾಲಾಗಬಾರದು. ಕೃಷಿ ವೈವಿಧ್ಯ ಉಳಿಸಿಕೊಳ್ಳಬೇಕು.

* ಸುರಕ್ಷಿತ, ವೈವಿಧ್ಯಮಯ, ಸಮಗ್ರ ಆಹಾರವು ಪ್ರತಿಯೊಬ್ಬ ನಾಗರಿಕರಿಗೂ ಸಿಗಬೇಕು. ಏನನ್ನು ತಿನ್ನಬೇಕು, ತಿನ್ನಬಾರದೆಂದು ನಿರ್ಧರಿಸುವುದೂ ಸಂವಿಧಾನಕ್ಕೆ ವಿರುದ್ಧ.

* ಜೀವ ವೈವಿಧ್ಯವನ್ನು ಉಳಿಸಿಕೊಳ್ಳಲು ಕುಲಾಂತರಿ ಸಾಸಿವೆ ಸೇರಿದಂತೆ ಯಾವುದೇ ಹೈಬ್ರೀಡ್‌ ತಳಿಗೆ ಅವಕಾಶ ನೀಡಬಾರದು.

* ಸ್ಥಳೀಯ ಸುಸ್ಥಿರ ಕೃಷಿ ಪ್ರೋತ್ಸಾಹಿಸಬೇಕು. ನಗರ ಹಾಗೂ ಗ್ರಾಮೀಣರ ನಡುವೆ ಸಂಬಂಧ ಬಲಪಡಿಸಬೇಕು.

ರಾಜ್ಯಸಭಾ ಸದಸ್ಯ ಅನಿಲ್ ಹೆಗ್ಡೆ, ಆಶಾ ಒಕ್ಕೂಟದ ಶ್ರೀಧರ್‌ ರಾಧಾಕೃಷ್ಣನ್‌, ಸಂಘಟಕರಾದ ಉಷಾ ಸೂಲಪಾಣಿ, ಕಾರ್ತಿಕ್‌ ಗುಣಶೇಖರ್‌, ರಾಷ್ಟ್ರೀಯ ಸಂಚಾಲಕ ಕಪಿಲ್‌ ಶಾ, ಕೆಎಸ್‌ಒಯು ಕುಲಸಚಿವ ಖಾದರ್‌ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.