ADVERTISEMENT

ಕಿಸಾನ್‌ ಸ್ವರಾಜ್‌ ಸಮ್ಮೇಳನ ಫೆ.27ರಿಂದ

ಸುಸ್ಥಿರ ಮತ್ತು ಕೃಷಿ ಮೈತ್ರಿಕೂಟ–ಕಿಸಾನ್‌ ಸ್ವರಾಜ್‌, ಕೆಎಸ್‌ಒಯು ಸಹಯೋಗ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 18:33 IST
Last Updated 20 ಫೆಬ್ರುವರಿ 2026, 18:33 IST
ಮೈಸೂರಿನಲ್ಲಿ ನಡೆಯಲಿರುವ ಕಿಸಾನ್ ಸ್ವರಾಜ್ ಸಮ್ಮೇಳನದ ಪ್ರಚಾರ ಸಾಮಗ್ರಿಯನ್ನು ಶುಕ್ರವಾರ ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಬಿಡುಗಡೆ ಮಾಡಿದರು
ಮೈಸೂರಿನಲ್ಲಿ ನಡೆಯಲಿರುವ ಕಿಸಾನ್ ಸ್ವರಾಜ್ ಸಮ್ಮೇಳನದ ಪ್ರಚಾರ ಸಾಮಗ್ರಿಯನ್ನು ಶುಕ್ರವಾರ ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಬಿಡುಗಡೆ ಮಾಡಿದರು   

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ದಲ್ಲಿ ಫೆ.27ರಿಂದ ಮಾರ್ಚ್‌ 1ರವರೆಗೆ ‘6ನೇ ಕಿಸಾನ್‌ ಸ್ವರಾಜ್‌ ಸಮ್ಮೇಳನ’ ಆಯೋಜಿಸಲಾಗಿದ್ದು, ದೇಶದ ವಿವಿಧ 11 ರಾಜ್ಯಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

‘ಸುಸ್ಥಿರ ಮತ್ತು ಕೃಷಿ ಮೈತ್ರಿಕೂಟ (ಆಶಾ)–ಕಿಸಾನ್‌ ಸ್ವರಾಜ್‌ ಹಾಗೂ ಕೆಎಸ್‌ಒಯು ಪ್ರಸಾರಾಂಗದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾನಾಂತರ ವೇದಿಕೆಗಳಲ್ಲಿ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಧಿವೇಶನಗಳು ನಡೆಯಲಿವೆ’ ಎಂದು ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪದ್ಮಶ್ರೀ ‍ಪುರಸ್ಕೃತ ಸುಭಾಷ್ ಶರ್ಮಾ ಅವರಂತಹ ನೈಸರ್ಗಿಕ ಕೃಷಿಕರು ಹಾಗೂ ಹಲವು ಮಂದಿ ತಳಿ ಸಂರಕ್ಷಕ ರೈತರು ಪಾಲ್ಗೊಳ್ಳಲಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ನೈಸರ್ಗಿಕ ಕೃಷಿ ವಿಭಾಗದ ವಿಶೇಷ ಮುಖ್ಯ ಕಾರ್ಯದರ್ಶಿ ಟಿ.ವಿಜಯ್‌ಕುಮಾರ್‌ ಮತ್ತು ಛತ್ತೀಸಗಢದ ದಂತೇವಾಡವನ್ನು ಸಂಪೂರ್ಣ ಸಾವಯವ ಕೃಷಿ ಜಿಲ್ಲೆಯನ್ನಾಗಿ ಪರಿವರ್ತಿಸಲು ಅಡಿಪಾಯ ಹಾಕಿದ ಅಧಿಕಾರಿ ದೈವಸೇನಾಪತಿ ಅವರಂತಹ ನೀತಿ–ನಿರೂಪಕರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಪ್ರದರ್ಶನ, ಮಾರಾಟ: 

‘ಸಾರ್ವಜನಿಕರು ಹಾಗೂ ರೈತರಿಗಾಗಿ ಕೃಷಿ ಕಲಿಕಾ ಪ್ರದರ್ಶನ ಇರಲಿದೆ. ನೈಸರ್ಗಿಕ, ಸಾವಯವ ಕೃಷಿಕರ ಮತ್ತು ರೈತ ಒಕ್ಕೂಟದವರು ರಾಸಾಯನಿಕಮುಕ್ತ ಉತ್ಪನ್ನಗಳನ್ನು ಮಾರಲಿದ್ದಾರೆ. ಸಾವಯವ ಆಹಾರ ಮಳಿಗೆಯೂ ಇರಲಿದೆ. ನಗರ ಪ್ರದೇಶದಲ್ಲಿ ಕೈತೋಟ ಹಾಗೂ ತಾರಸಿ ತೋಟ ಮಾಡಲು ಆಸಕ್ತಿ ಇರುವವರಿಗೆ ವಿಶೇಷ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದೆ. ಆಂಧ್ರಪ್ರದೇಶದ ಪೊಂಡೂರಿನ ಮಹಿಳೆಯರು ‘ಪಟ್ನುಲು’ ನೂಲು ತೆಗೆಯುವ ನೇರ ಪ್ರಾತ್ಯಕ್ಷಿಕೆ ನೀಡುವುದು ವಿಶೇಷ. ಎತ್ತುಗಳಿಂದ ನಡೆಸುವ ಸಾಂಪ್ರದಾಯಿಕ ಎಣ್ಣೆಗಾಣದ ಪ್ರದರ್ಶನ ಇರಲಿದೆ’ ಎಂದು ಹೇಳಿದರು.

‘ಫೆ.27ರಂದು ರಾತ್ರಿ 8ಕ್ಕೆ ಗಾಯಕ ವಾಸು ದೀಕ್ಷಿತ್‌ ಅವರಿಂದ ಗಾಯನ ಹಾಗೂ 28ರ ರಾತ್ರಿ 8ಕ್ಕೆ ‘ಅಭಿವ್ಯಕ್ತಿ ಫೌಂಡೇಷನ್‌’ನಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ’ ಎಂದರು.

ನೋಂದಣಿ ಕಡ್ಡಾಯ: 

‘ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿಗೆ ಮೊ.ಸಂ. 81055 79839 ಸಂಪರ್ಕಿಸಬಹುದು’ ಎಂದು ಕೋರಿದರು.

ಕೆಎಸ್‌ಒಯು ಕುಲಸಚಿವರಾದ ಸಿ.ಎಸ್.ಆನಂದ್ ಕುಮಾರ್, ಪ್ರೊ.ನವೀನ್‌ಕುಮಾರ್ ಎಸ್.ಕೆ., ಡೀನ್ ರಾಮನಾಥಂನಾಯ್ಡು, ನಿರಂಜನ್‌, ಚಂದ್ರೇಗೌಡ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ಕವಿತಾ ಶ್ರೀನಿವಾಸ್, ಪ್ರಸಾರಾಂಗ ಸಂಯೋಜನಾಧಿಕಾರಿ ಆರ್. ಸಂತೋಷ್ ನಾಯಕ್ ಪಾಲ್ಗೊಂಡಿದ್ದರು.

ಸಾವಿರಕ್ಕೂ ಹೆಚ್ಚು ತಳಿಗಳು...

‘30 ಬೀಜ ಸಂರಕ್ಷಕ ರೈತರಿಂದ ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಬೀಜಗಳ ತಳಿಗಳು ವಿವಿಧ ಬಗೆಯ ಗೆಡ್ಡೆ–ಗೆಣಸು ಅಪರೂಪದ ತರಕಾರಿಗಳ ಪ‍್ರದರ್ಶನ ಇರಲಿದೆ. ಬೀಜವೈವಿಧ್ಯವನ್ನು ಪರಿಚಯಿಸಲಾಗುವುದು’ ಎಂದು ಶರಣಪ್ಪ ವಿವರಿಸಿದರು. ‘28ರಂದು ಬೆಳಿಗ್ಗೆ 10.45ಕ್ಕೆ ಗುಜರಾತ್‌ನ ಬನ್ಸಿಗೀರ್‌ ಗೋಶಾಲೆಯ ‘ಗೋಕೃಪಾಮೃತ’ದ ಮೂಲ ಅನುಶೋಧಕ ಗೋಪಾಲ್‌ಭಾಯ್‌ ಸುತಾರಿಯಾ ಕಾರ್ಯಾಗಾರ ನಡೆಸಿಕೊಡುವರು. ಸೂಕ್ಷ್ಮಜೀವಿಗಳ ಕುರಿತು ಮಾತನಾಡುವರು. ಹೈದರಾಬಾದ್‌ನ ಪ್ರಶಸ್ತಿ ವಿಜೇತ ಕೃಷಿ ವಿಜ್ಞಾನಿ ಜಿ.ವಿ. ರಾಮಾಂಜನೇಯುಲು ಆಧುನಿಕ ವೈಜ್ಞಾನಿಕ ಆಯಾಮ ಕುರಿತು ಚರ್ಚಿಸುವರು. ಪ್ರಸಿದ್ಧ ರೈತರು ತಮ್ಮ ಅನುಭವ ಹಾಗೂ ಪರಿಣತಿಯನ್ನು ಹಂಚಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು. ‘ಕೃಷಿ ಹಾಗೂ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದ್ದು ಪರಿಹಾರಗಳ ಕುರಿತೂ ಸಮಾಲೋಚನೆ ನಡೆಯಲಿದೆ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ನಿರ್ಣಯಗಳನ್ನಾಗಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಕೃಷಿಕರು ಇಲ್ಲಿ ಪಾಲ್ಗೊಂಡು ಉತ್ತಮ ಅಭ್ಯಾಸಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಹೇಳಿದರು.

ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆಯೂ... ‘ಆಶಾ’ ಸಂಸ್ಥೆಯ ಸಹ ಸಂಚಾಲಕಿ ಕವಿತಾ ಕುರುಗಂಟಿ ಮಾತನಾಡಿ ‘ಕೃಷಿಯಲ್ಲಿ ಶ್ರಮ (ಕಾರ್ಮಿಕರು) ರೈತ –ವನ್ಯಜೀವಿ ಸಂಘರ್ಷ ಕಡಿಮೆ ಮಾಡುವುದು ಕಳೆನಾಶಕ ಸಹಿಷ್ಣು ಬೆಳೆಗಳು ಹಾಗೂ ಬೀಜ ಸಾರ್ವಭೌಮತ್ವ ಕೃಷಿಕರ ಕೈಯಲ್ಲೇ ಇರಬೇಕು ಎಂಬ ಪ್ರಮುಖ ನಾಲ್ಕು ವಿಷಯಗಳ ಮೇಲೆ ಅಧಿವೇಶನಗಳಲ್ಲಿ ಚರ್ಚೆಯಾಗಲಿದೆ’ ಎಂದು ಮಾಹಿತಿ ನೀಡಿದರು. ‘ಈವರೆಗೆ 900ಕ್ಕೂ ಹೆಚ್ಚು ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಮಾರ್ಚ್‌ 1ರಂದು ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಗಳು ಕುರಿತು ರೈತ ನಾಯಕಿ ನಂದಿನಿ ಜಯರಾಂ ವಿಷಯ ಮಂಡಿಸುವರು’ ಎಂದು ತಿಳಿಸಿದರು.