ಮೈಸೂರು: ‘ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಆದಿಮ ಸಂಜಾತ ಬುಡಕಟ್ಟು ಜನಾಂಗವೆಂದು ಘೋಷಿಸಬೇಕು. ಸಂವಿಧಾನದ 340, 342ನೇ ವಿಧಿಯಂತೆ ಎಸ್.ಟಿ. ಪಟ್ಟಿಯಲ್ಲಿ ಸೇರಿಸಿ ರಾಜಾಶ್ರಯ ನೀಡಬೇಕು’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.
‘ಕೊಡಗಿನ ಮೂಲ ನಿವಾಸಿಗಳಾದ ಕೊಡವ ಜನಾಂಗ ತನ್ನದೇ ವಿಶಿಷ್ಟ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳಿಂದ ಹೆಸರುವಾಸಿಯಾಗಿದೆ. ಅಂಕಿ -ಅಂಶಗಳ ಪ್ರಕಾರ ಕೊಡಗು ಹೊರತುಪಡಿಸಿ, ದೇಶ–ವಿದೇಶಗಳಲ್ಲಿ ನೆಲೆಸಿರುವ ಕೊಡವರ ಸಂಖ್ಯೆ ಸುಮಾರು 1.60 ಲಕ್ಷವಿದೆ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಕೊಡವ ಜನಾಂಗದೊಳಗೆ 18 ಉಪ ಜಾತಿಗಳಿವೆ. ಆರ್ಥಿಕವಾಗಿ , ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದ್ದರೂ, ಹಿಂದುಳಿದಿರುವವರ ಸಂಖ್ಯೆಯೂ ಸಾಕಷ್ಟಿದೆ’ ಎಂದರು.
‘ನಮ್ಮ ಸಂಘಟನೆಯು ನವದೆಹಲಿಯಲ್ಲಿ ಒತ್ತಡ ಹಾಕಿದ ಪರಿಣಾಮ, ಹಿಂದಿನ ಕೇಂದ್ರ–ರಾಜ್ಯ ಸರ್ಕಾರಗಳು ಬುಡಕಟ್ಟು (ಎಸ್‌ಟಿ) ಸ್ಥಾನಮಾನ ನೀಡುವ ಕುರಿತು, ಕುಲಶಾಸ್ತ್ರ ಅಧ್ಯಯನಕ್ಕೆ ಮುಂದಾಗಿದ್ದವು. ಇದನ್ನು ಮಂಡಿಸಲು ಈಗಿನ ಸರ್ಕಾರಗಳು ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.
‘ಅಸ್ಸಾಮಿನಲ್ಲಿ ಸತತ 8 ಬಾರಿ ತಿರಸ್ಕಾರಕ್ಕೊಳಗಾದ ಅಸ್ಸಾಮಿನ 6 ಬುಡಕಟ್ಟು ವರ್ಗಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಕೇಂದ್ರ ಮತ್ತು ಅಸ್ಸಾಂ ಸರ್ಕಾರ ಸಂವಿಧಾನ ತಿದ್ದುಪಡಿಗೆ ಮುಂದಾಗಿವೆ. ಇದೇ ರೀತಿ ಕೊಡವ ಕುಲದ ಸುದೀರ್ಘ ಅಶೋತ್ತರವಾದ ಸ್ವಾಯತ್ತತೆ ಮತ್ತು ಎಸ್‌ಟಿ ಪಟ್ಟಿ ಸೇರ್ಪಡೆಗಾಗಿ ತುರ್ತಾಗಿ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್‌ನ ಪದಾಧಿಕಾರಿಗಳಾದ ಅರೆಯಡ ಗಿರೀಶ್, ಕಲಿಯಂಡ ಪ್ರಕಾಶ್, ಚಂಬಂಡ ಜನತ್ ಕುಮಾರ್, ಅಪ್ಪನೆರಂಡ, ಮನೋಜ್ ಮಂದಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.