ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಕೋಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನೂರು ಗ್ರಾಮದಲ್ಲಿ ಸೋಮವಾರ ಒತ್ತುವರಿ ತೆರವಿಗೆ ಬಂದಿದ್ದ ತಾಲ್ಲೂಕು ಪಂಚಾಯಿತಿ ಇಒ ಡಿ.ಬಿ.ಸುನೀಲ್ ಕುಮಾರ್ ಹಾಗೂ ದಲಿತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಗ್ರಾಮದ ಜ್ಯೋತಿ ಎಂಬುವವರು ಸರ್ವೇ ನಂಬರ್ 16/10 ರಲ್ಲಿ ವಾಸಕ್ಕಾಗಿ ಮನೆ ನಿರ್ಮಿಸಿಕೊಂಡಿದ್ದು, ಈ ಜಾಗಕ್ಕೆ ಪಂಚಾಯಿತಿಯಿಂದ ಇ ಸ್ವತ್ತು ಕೂಡ ಮಾಡಿಕೊಡಲಾಗಿದೆ. ಸ್ವತ್ತಿನ ಚೆಕ್‌ಬಂದಿ ಪಹಣಿಯ ಸರ್ವೇ ನಂಬರ್‌ನಲ್ಲಿ ರಸ್ತೆಯನ್ನು ಕೂಡ ತೋರಿಸಿಲ್ಲ ಆದರೂ ಕಂದಾಯ ಇಲಾಖೆ ಮತ್ತು ಪಂಚಾಯಿತಿಯವರು ವಿನಾಕಾರಣ ದಲಿತ ವ್ಯಕ್ತಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆ ಮುಖಂಡರು ತೆರವು ಕಾರ್ಯವನ್ನು ತಡೆದು ಪ್ರತಿಭಟಿಸಿದರು.
ದಲಿತ ಮುಖಂಡ ಎಸ್.ರಾಮು ಮಾತನಾಡಿ, ‘ತಾಲ್ಲೂಕಿನಾದ್ಯಂತ ಸಾಕಷ್ಟು ಸರ್ಕಾರಿ ಜಾಗಗಳನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಯಾರದೋ ಒತ್ತಡಕ್ಕೆ ಮಣಿದು ದಲಿತ ವ್ಯಕ್ತಿ ವಾಸಕ್ಕಾಗಿ ನಿರ್ಮಿಸಿರುವ ಮನೆಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿರುವುದು ಖಂಡನೀಯ. ಈ ಒತ್ತುವರಿ ತೆರವಿಗೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ ಈಗಾಗಲೇ ಸಾಕಷ್ಟು ಒತ್ತುವರಿ ತೆರವು ಕಾರ್ಯಗಳನ್ನು ಮಾಡಿ ಸರ್ಕಾರಿ ಜಾಗ ವಶಕ್ಕೆ ಪಡೆದಿದ್ದೇವೆ. ಒತ್ತುವರಿ ತೆರವಿನ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗೆ ಸಂಪೂರ್ಣ ಜವಾಬ್ದಾರಿ ಇದೆ. ಸಾರ್ವಜನಿಕರು ಕರ್ತವ್ಯಕ್ಕೆ ಅಡ್ಡಿಪಡಿಸದೆ ಸಹಕರಿಸಬೇಕು’ ಎಂದು ತಾ.ಪಂ ಇಒ ಸುನೀಲ್ ಕುಮಾರ್ ಹೇಳಿದರು.
ತಾಲ್ಲೂಕಿನ ಇತರೆ ಕಡೆ ಒತ್ತುವರಿ ಜಾಗಗಳನ್ನು ತೆರವು ಮಾಡಿಸಲು ಇಒ ನೀಡಿದ ಭರವಸೆ ಮೇರೆಗೆ ತೆರವು ಕಾರ್ಯಕ್ಕೆ ಸಹಕಾರ ನೀಡಿದರು.
ಬೆಟ್ಟದಪುರ ಪೊಲೀಸ್ ಉಪ ನಿರೀಕ್ಷಕರಾದ ಅಜಯ್ ಕುಮಾರ್, ರವಿಕುಮಾರ್, ಸ್ವಾಮಿ ಎಸ್.ರಾಮು ಶಿವಪ್ಪಚಾರ್, ಕುಮಾರ್, ಮುಖಂಡರಾದ ತಮ್ಮಣ್ಣಯ್ಯ, ಈರಾಜ್, ಶಿವರಾಜ್, ಜಗದೀಶ್, ಗಿರೀಶ್, ಪುಟ್ಟರಾಜು, ರಾಜಣ್ಣ, ಜಯಣ್ಣ, ಮಹದೇವ್, ರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.