ADVERTISEMENT

ಜೆಡಿಎಸ್‌ಗೆ ಚುನಾವಣೆಯಲ್ಲಷ್ಟೇ ಕಾವೇರಿ ನೆನಪು: ಕೆಪಿಸಿಸಿ ವಕ್ತಾರ ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 4:47 IST
Last Updated 1 ಏಪ್ರಿಲ್ 2024, 4:47 IST
ಎಚ್‌.ಎ.ವೆಂಕಟೇಶ್‌
ಎಚ್‌.ಎ.ವೆಂಕಟೇಶ್‌   

ಮೈಸೂರು: ‘ಜೆಡಿಎಸ್ ಪಕ್ಷದವರಿಗೆ ಚುನಾವಣಾ ಸಮಯದಲ್ಲಿ ಮಾತ್ರ ಕಾವೇರಿ ನದಿಯ ವಿಚಾರ ನೆನಪಿಗೆ ಬರುತ್ತದೆ. ದೇಶಕ್ಕಾಗಿ ಮೋದಿ, ಕಾವೇರಿಗಾಗಿ ಕುಮಾರಸ್ವಾಮಿ ಎಂಬ ಮಾತುಗಳು ಹಾಸ್ಯಾಸ್ಪದ’ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ ನದಿ ವಿಚಾರದಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಹೇಳಿಕೆ ಬಾಲಿಶವಾಗಿದೆ. ಅವರಲ್ಲಿ ಈ ಬಗ್ಗೆ ನೈಜ ಕಾಳಜಿಯಿದ್ದಿದ್ದರೆ, ಪ್ರಧಾನಿಯಾಗಿದ್ದ ಸಮಯದಲ್ಲಿ  ಪರಿಹಾರ ಮಾಡಬಹುದಾಗಿತ್ತು. ರಾಜಕೀಯ ದೃಷ್ಟಿಯಿಂದ ಜನರ ಭಾವನೆ ಕೆರಳಿಸಲು ಜೀವಂತವಿರಿಸಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಜೆಡಿಎಸ್ ಪಕ್ಷದ ನಡೆ, ನುಡಿಗಳು ಬಿಜೆಪಿಯ ಪ್ರಣಾಳಿಕೆಯಂತಾಗಿವೆ. ಅನುಷ್ಠಾನಕ್ಕೆ ಬರುವುದೇ ಇಲ್ಲ. ಬರೀ ಸುಳ್ಳುಗಳನ್ನಷ್ಟೇ ಹೇಳುತ್ತಾರೆ. ಚುನಾವಣೆ ನಂತರವೂ ಮೈತ್ರಿ ಮುಂದುವರಿಯುತ್ತದೆ ಎಂದು ಹೇಳುವರು. ವಿಲೀನವೂ ಆಗಬಹುದಾ ಎಂಬುದನ್ನು ಕಾದು ನೋಡಲಿ. ಕಾಂಗ್ರೆಸ್‌ ನುಡಿದಂತೆ ನಡೆದಿದ್ದು, ಈ ಬಾರಿ ರಾಜ್ಯದ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ’ ಎಂದರು.

ADVERTISEMENT

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣೆಗೆ ನಿಲ್ಲಲು ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಹಣವಿದ್ದವರಿಗೆ ಮಾತ್ರ ಮಹತ್ವವೇ ಅಥವಾ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಿಲ್ಲ ಎಂಬುದು ಅರಿವಾಗಿದೆಯೇ. ನಾವು ಕಾಂಗ್ರೆಸ್‌ ಗ್ಯಾರಂಟಿ ಎಂದರೆ ಅವರು ಮೋದಿ ಗ್ಯಾರಂಟಿ ಎನ್ನುತ್ತಾರೆ. ಅವರ ಪಕ್ಷದ ಹೆಸರಿಗೆ ಬೆಲೆ, ಶಕ್ತಿ ಇಲ್ಲವಾಗಿದೆಯೇ’ ಎಂದು ವ್ಯಂಗ್ಯವಾಡಿದರು.

‘ಕೇಂದ್ರ ಸಚಿವ ಅಮಿತ್‌ ಶಾ ಕುರಿತು ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳು ಸಮರ್ಥನೀಯವಾಗಿದ್ದು, ಇದನ್ನು ವಿರೋಧಿಸುವ ಬರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಆಶೋಕ ಅನುಚಿತ ಮಾತುಗಳನ್ನಾಡಿದ್ದಾರೆ. ಶೀಘ್ರವೇ ಅವರು ಕ್ಷಮೆಯಾಚಿಸದಿದ್ದರೆ ಸಭೆಗಳಲ್ಲಿ ಧಿಕ್ಕಾರ ಕೂಗಲಿದ್ದೇವೆ’ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣದ ವಕ್ತಾರ ಜಿ.ವಿ. ಸೀತಾರಾಂ, ಕೆಪಿಸಿಸಿ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಬಿ.ಕೆ.ಪ್ರಕಾಶ್, ಲೋಕೇಶ್, ಶಿವನಾಗಪ್ಪ ಇದ್ದರು.

‘ಭೈರಪ್ಪ ಮಾತು ಸತ್ಯ’

‘ರಾಜ್ಯದಲ್ಲಿ ಬಿಜೆಪಿಯು ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಸತ್ಯವನ್ನೇ ಹೇಳಿದ್ದಾರೆ. ಸದಾ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಹಿತವಾಗುವ ಮಾತನಾಡುತ್ತಿದ್ದ ಅವರು ಇಂದು ಭಿನ್ನವಾಗಿ ಮಾತನಾಡಿರುವುದು ಬಿಜೆಪಿಯ ಕಾರ್ಯವೈಖರಿಯನ್ನು ತೋರುತ್ತದೆ’ ಎಂದು ಎಚ್.ಎ. ವೆಂಕಟೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.