ADVERTISEMENT

ಮೈಸೂರು: ‘ಬಿಜೆಪಿ ಭ್ರಷ್ಟತೆ: ಮನೆ–ಮನೆ ಪ್ರಚಾರ’

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 6:26 IST
Last Updated 26 ಮಾರ್ಚ್ 2023, 6:26 IST
ಮೈಸೂರಿನಲ್ಲಿ ಎರದು ದಿನಗಳ ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕಾರಿಣಿಯನ್ನು ಶನಿವಾರ ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜಾ ಉದ್ಘಾಟಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇದ್ದಾರೆ
ಮೈಸೂರಿನಲ್ಲಿ ಎರದು ದಿನಗಳ ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕಾರಿಣಿಯನ್ನು ಶನಿವಾರ ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜಾ ಉದ್ಘಾಟಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇದ್ದಾರೆ   

ಮೈಸೂರು: ‘ಜನರ ತೆರಿಗೆ ಹಣವು ಭ್ರಷ್ಟ ಬಿಜೆಪಿಗರ ಮನೆ ಸೇರುತ್ತಿದೆ. ಬೇಸಿಗೆಯ ಒಂದು ಮಳೆಗೇ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನೀರು ನಿಲ್ಲುತ್ತಿದೆ. ಬಿಜೆಪಿಯ ಭ್ರಷ್ಟತೆಯನ್ನು ಅನಾವರಣಗೊಳಿಸಲು ಪ್ರತಿಯೊಬ್ಬರ ಮನೆಗೂ ಕಾಂಗ್ರೆಸ್‌ ಕಾರ್ಯಕರ್ತೆಯರು ತೆರಳಲಿದ್ದೇವೆ’ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜ ಹೇಳಿದರು.

ಶನಿವಾರ ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕಾರಿಣಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು, ‘ಎಲ್‌ಐಸಿಯಲ್ಲಿರುವ ಜನಸಾಮಾನ್ಯರ ಉಳಿತಾಯದ ಹಣವನ್ನು, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಅದಾನಿ ಅವರನ್ನು ಪಾರು ಮಾಡಲು ಬಳಸಲಾಗುತ್ತಿದೆ. ₹ 3 ಸಾವಿರ ಕೋಟಿ ಷೇರುಪೇಟೆಯಲ್ಲಿ ನಷ್ಟವಾಗುತ್ತಿದೆ. ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ’ ಎಂದು ಕಿಡಿಕಾರಿದರು.

‘ಬಿಜೆಪಿ ಸರ್ಕಾರವು ಎಲ್ಲ ಯೋಜನೆಗಳಲ್ಲಿ ಶೇ 40 ಕಮಿಷನ್‌ ಹಣ ದೋಚುತ್ತಿದೆ. ಕರಾಳ ದಿನಗಳು ರಾಜ್ಯಕ್ಕೆ ಬಂದಿವೆ. ಪದವೀಧರರಿಗೆ ಉದ್ಯೋಗ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಪ್ರಶ್ನಿಸಿದರೆ ವಿರೋಧ ಪಕ್ಷಗಳನ್ನು ದಮನ ಮಾಡುತ್ತಿದೆ’ ಎಂದು ಹರಿಹಾಯ್ದರು.

ADVERTISEMENT

‘ಅದಾನಿ ಪ್ರಕರಣವನ್ನು ಜಂಟಿ ಸದನ ಸಮಿತಿ ತನಿಖೆಗೆ ವಹಿಸುವಂತೆ ರಾಹುಲ್‌ ಗಾಂಧಿ ಆಗ್ರಹಿಸಿದ್ದಕ್ಕಾಗಿ ದ್ವೇಷ ಸಾಧಿಸಿದೆ. ನ್ಯಾಯಾಲಯದ ಆದೇಶವನ್ನು ಇಟ್ಟುಕೊಂಡು ಒಂದೇ ದಿನದಲ್ಲಿ ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿದೆ. ಕೇಂದ್ರದ ಮೋದಿ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸಿದೆ. ವಿರೋಧ ಪಕ್ಷಗಳನ್ನು ಬೆದರಿಸುವ ಕುತಂತ್ರವಿದು’ ಎಂದು ಕಿಡಿಕಾರಿದರು.

‘ಭಾರತ್‌ ಜೋಡೋ ಯಾತ್ರೆಯ ಅಭೂತಪೂರ್ವ ಸ್ಪಂದನೆಯಿಂದ ಬಿಜೆಪಿ ಕಂಗಾಲಾಗಿದೆ. ಹೀಗಾಗಿಯೇ ರಾಹುಲ್‌ ಗಾಂಧಿ ವಿರುದ್ಧ ಮುಗಿಬಿದ್ದಿದೆ. ಎಲ್ಲ ವಿರೋಧ ಪಕ್ಷಗಳು ಒಗ್ಗಟ್ಟಾಗಲಿವೆ. ಸಮಾನ ಮನಸ್ಕ ಪಕ್ಷಗಳು ಈಗಾಗಲೇ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿವೆ’ ಎಂದು ಹೇಳಿದರು.

‘ಪಕ್ಷಕ್ಕೆ ದೇಣಿಗೆ ನೀಡುವ ಬಂಡವಾಳಶಾಹಿಗಳಿಗೆ ದೇಶದ ಆಸ್ತಿಯನ್ನು ಬಿಜೆಪಿ ಸರ್ಕಾರ ಒಪ್ಪಿಸುತ್ತಿದೆ. ಅಡುಗೆ ಅನಿಲ ಸಿಲಿಂಡರ್‌ ₹ 1,150 ಆಗಿದೆ. ಅಡುಗೆ ಎಣ್ಣೆ ದರ ಮೂರು ಪಟ್ಟು, ಔಷಧಗಳ ದರ ನಾಲ್ಕು ಪಟ್ಟು ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.