ಕೆ.ಆರ್.ನಗರ: ತಾಲ್ಲೂಕಿನ ಡೋರ್ನಹಳ್ಳಿಯಲ್ಲಿ ಪವಾಡ ಪುರುಷ ಸಂತ ಅಂತೋಣಿ ಅವರ ವಾರ್ಷಿಕ ಮಹೋತ್ಸವವು ಪ್ರತಿ ವರ್ಷದಂತೆ ಜೂನ್ 13ರಂದು ಅದ್ದೂರಿಯಾಗಿ ನಡೆಯಲಿದೆ.
ಡೋರ್ನಹಳ್ಳಿ ಚರ್ಚ್ ಧರ್ಮಗುರು ಡೇವಿಡ್ ಸಗಾಯರಾಜ್ ಮತ್ತು ಆಡಳಿತಾಧಿಕಾರಿ ಪ್ರವೀಣ್ ಪೇದ್ರು ಅವರ ನೇತೃತ್ವದಲ್ಲಿ ಜೂನ್ 5ರಿಂದ ವಾರ್ಷಿಕ ಮಹೋತ್ಸವ ಪ್ರಾರಂಭವಾಗಿದೆ. ಜೂನ್ 12ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಲಿ ಪೂಜೆ ನಡೆಯಲಿದೆ.
ಜೂನ್ 13ರಂದು ಹಬ್ಬದ ದಿನ ಬೆಳಿಗ್ಗೆ 10ಕ್ಕೆ ವಿಶೇಷವಾಗಿ ಮೈಸೂರು ಧರ್ಮ ಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರಾಸ್ ಅವರಿಂದ ಹಬ್ಬದ ಆಡಂಬರದ ಗಾಯನ ಬಲಿಪೂಜೆ ನಡೆಯಲಿದೆ.
ಜೂನ್ 13ರಂದು ಬೆಳಿಗ್ಗೆ 5ಕ್ಕೆ ಡೋರ್ನಹಳ್ಳಿ ಚರ್ಚ್ ಧರ್ಮಗುರು ಡೇವಿಡ್ ಸಗಾಯರಾಜ್, ಬೆಳಿಗ್ಗೆ 6ಕ್ಕೆ ಕೋಲ್ಕತ್ತ ಧರ್ಮ ಕ್ಷೇತ್ರದ ಪ್ರಾಂಶುಪಾಲ ರಾಬರ್ಟ್ ಗ್ರೆಗೋರಿ ಮೊಂತೇರೊ, ಬೆಳಿಗ್ಗೆ 7ಕ್ಕೆ ಮೈಸೂರು ಧರ್ಮ ಕ್ಷೇತ್ರದ ಕೋಶಾಧಿಕಾರಿ ಸೆಬಾಸ್ಟಿಯನ್ ಅಲೆಕ್ಸಾಂಡರ್, ಬೆಳಿಗ್ಗೆ 8ಕ್ಕೆ ಯಾಧವಗಿರಿ ಧರ್ಮಗುರು ರೋಹನ್, ಬೆಳಿಗ್ಗೆ 11.30ಕ್ಕೆ ಬೋಗಾದಿ ಧರ್ಮಗುರು ವಾಲೆಂಟಿನ್ ರಾಜೇಂದ್ರ ಕುಮಾರ್ ಜೆ, ಮಧ್ಯಾಹ್ನ 1ಕ್ಕೆ ಮೈಸೂರು ಪುಷ್ಪಾಶ್ರಮದ ಧರ್ಮಗುರು ಓಸ್ವಾಲ್ಡ್ ಕ್ರಾಸ್ತ, ಮಧ್ಯಾಹ್ನ 3ಕ್ಕೆ ಮಂಡ್ಯ ಧರ್ಮಗುರು ಮರಿರಾಜ್, ಸಂಜೆ 4ಕ್ಕೆ ಶ್ರೀರಾಮಪುರ ಧರ್ಮಗುರು ಆರ್.ಆರೋಗ್ಯಸ್ವಾಮಿ, ಸಂಜೆ 5.30ಕ್ಕೆ ಮೈಸೂರು ಧರ್ಮ ಕ್ಷೇತ್ರದ ಸಹಾಯಕ ಕೋಶಾಧಿಕಾರಿ ಯೇಸು ಪ್ರಸಾದ್ ಅವರಿಂದ ಕನ್ನಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಗಾಯನ ಬಲಿಪೂಜೆ ನಡೆಯಲಿದೆ.
ಸುಮಾರು 250 ವರ್ಷಗಳ ಹಿಂದೆ ಡೋರ್ನಹಳ್ಳಿಯಲ್ಲಿ ರೈತನೊಬ್ಬ ಉಳುಮೆ ಮಾಡುತ್ತಿದ್ದಾಗ ನೇಗಿಲಿಗೆ ಮನುಷ್ಯನ ಆಕೃತಿಯ ಗೊಂಬೆ ದೊರೆತಿತ್ತು. ರೈತನ ಕನಸಿನಲ್ಲಿ ಬಂದ ಸಂತನೊಬ್ಬ ಗೊಂಬೆ ದೊರೆತ ಸ್ಥಳದಲ್ಲಿ ದೇಗುಲ ನಿರ್ಮಿಸಿದರೆ ನಿನ್ನ ಕಷ್ಟ ದೂರವಾಗುತ್ತದೆ ಎಂದು ಹೇಳಿದ್ದರು. ಅದರಂತೆ ಡೋರ್ನಹಳ್ಳಿಯಲ್ಲಿ ಪುಣ್ಯಕ್ಷೇತ್ರ ನಿರ್ಮಿಸಲಾಯಿತು. ಆ ದಿನದಿಂದ ರೈತನ ಕುಟುಂಬಕ್ಕೆ ನೆಮ್ಮದಿ ದೊರೆಯಿತು ಎಂದು ನಂಬಲಾಗಿದೆ.
ಎರಡೂವರೆ ಶತಮಾನಗಳ ಇತಿಹಾಸ ಹೊಂದಿರುವ ಡೋರ್ನಹಳ್ಳಿ ಚರ್ಚ್‌ಗೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಬರುವ ಭಕ್ತಾದಿಗಳು ಹರಕೆ ಹೊರುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿದ ನಂತರ ಹರಕೆ ತೀರಿಸುವ ವಾಡಿಕೆಯೂ ಇದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಾ ಇಂದು ಪುಣ್ಯಕ್ಷೇತ್ರವಾಗಿ ಬೆಳೆದಿದೆ. ಹರಕೆ ಹೊತ್ತು ಬರುವ ಭಕ್ತಾದಿಗಳು ಮುಡಿಕೊಟ್ಟು, ಸ್ನಾನ ಮಾಡುತ್ತಾರೆ. ಸಂತ ಅಂತೋಣಿಯವರಿಗೆ ಮೇಣದ ಬತ್ತಿ ಹಚ್ಚಿ ಹರಕೆ ತೀರಿಸುತ್ತಾರೆ. ವಾರ್ಷಿಕೋತ್ಸಕ್ಕೆ ದೂರದ ಊರುಗಳಿಂದ ರೈಲು, ಬಸ್ಸು, ಕಾರು, ದ್ವಿಚಕ್ರವಾಹನಗಳ ಮೂಲಕ ಭಕ್ತಾದಿಗಳು ಆಗಮಿಸುತ್ತಾರೆ.
ದೆಹಲಿ ಮುಂಬೈ ಪುಣೆ ಸೇರಿ ಅನೇಕ ಕಡೆಗಳಿಂದ ಬರುವ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದೊಂದು ಸರ್ವ ಧರ್ಮದ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿಗೆ ಕೇವಲ ಕ್ರೈಸ್ತರಷ್ಟೇ ಅಲ್ಲ ಎಲ್ಲ ಧರ್ಮ ಜಾತಿ ಜನಾಂಗದವರು ಬರುತ್ತಾರೆ. ಭಕ್ತಾದಿಗಳು ಸಂತ ಅಂತೋನಿ ಅವರಲ್ಲಿ ಪ್ರಾರ್ಥಿಸಿ ಕಷ್ಟಗಳು ಪರಿಹಾರ ಮಾಡಿಕೊಳ್ಳುತ್ತಾರೆ-ಡೇವಿಡ್ ಸಗಾಯರಾಜ್ ಧರ್ಮಗುರು ಡೋರ್ನಹಳ್ಳಿ ಚರ್ಚ್
ಆಧ್ಯಾತ್ಮಿಕವಾದ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ. ಜಾತ್ರೋತ್ಸವವು ಧರ್ಮ ಜಾತಿ ಭಾಷೆಗಳ ಭೇದ ಭಾವ ಇಲ್ಲದೇ ನಡೆಯುತ್ತದೆ. ಕಷ್ಟ ಹೇಳಿಕೊಂಡು ಬರುವ ಭಕ್ತಾದಿಗಳಿಗೆ ಒಳ್ಳೆಯದಾಗಿದೆ. ಜೂನ್ 5ರಿಂದ ವಿಶೇಷವಾದ ಪ್ರಾರ್ಥನೆ ಬಲಿ ಪೂಜೆ ನಡೆಯುತ್ತಿದೆಪ್ರವೀಣ್ ಪೇದ್ರು ಆಡಳಿತಾಧಿಕಾರಿ ಡೋರ್ನಹಳ್ಳಿ ಚರ್ಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.