ಮೈಸೂರಿನ ಕಿರುಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಶ್ರೀಕೃಷ್ಣನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ಮೈಸೂರು: ‘ಧರ್ಮ ರಕ್ಷಣೆಯಲ್ಲಿ ತೊಡಗಿದ್ದ ಶ್ರೀಕೃಷ್ಣನ ನ್ಯಾಯ, ನೀತಿಯ ಸಾರವನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ನಗರದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೃಷ್ಣ ಎಂದಿಗೂ ನ್ಯಾಯದ ಪರ. ಧರ್ಮ ರಕ್ಷಣೆಯಲ್ಲಿ ತೊಡಗಿದವನು. ಮಹಾಭಾರತ ಯುದ್ಧದಲ್ಲಿ, ಅರ್ಜುನನಿಗೆ ಭಗವದ್ಗೀತೆ ಬೋಧಿಸಿ ಧರ್ಮದ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದನು’ ಎಂದು ತಿಳಿಸಿದರು.
‘ಧರ್ಮ, ಕರ್ತವ್ಯ ಮತ್ತು ನೀತಿಗಳ ಮಹತ್ವ ಸಾರುವ ಶ್ರೀಕೃಷ್ಣನ ಜೀವನದ ಪ್ರತಿಯೊಂದು ಅಂಶವೂ ಆದರ್ಶಪ್ರಾಯ. ಉಪದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಕೃಷ್ಣನ ನ್ಯಾಯವಾದಿತನ ಅನುಸರಿಸಬೇಕಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಮಾತನಾಡಿ, ‘ದೈವಿಕ ಶಕ್ತಿಯುಳ್ಳ ಕೃಷ್ಣ ಹುಟ್ಟಿದ ಭೂಮಿಯಲ್ಲಿ ನಾವು ಬದುಕುತ್ತಿರುವುದು ನಮ್ಮೆಲ್ಲರ ಭಾಗ್ಯ. ಯಾರು ಜೀವನದಲ್ಲಿ ಆತಂಕಕ್ಕೆ ಒಳಗಾಗಬಾರದು. ಹತಾಶರಾಗಿ ಶರಣಾಗತರಾಗದೆ, ದೃಢವಾಗಿ ನಿಲ್ಲಬೇಕು. ಎಲ್ಲಿ ಅಧರ್ಮ ಮೊಳಗುತ್ತದೆಯೋ ಅಲ್ಲಿ ಹುಟ್ಟಿ ಬರುವೆನು ಎಂದು ಕೃಷ್ಣ ಹೇಳಿದ್ದಾನೆ’ ಎಂದರು.
ಕೆಎಸ್‌ಒಯು ಪ್ರಾಧ್ಯಾಪಕ ಶೆಲ್ವ ಪಿಳ್ಳೈ ಅಯ್ಯಂಗಾರ್ ಮಾತನಾಡಿ, ‘ಕೃಷ್ಣನ ಜೀವನದಿಂದ ಅನೇಕ ನೀತಿ ಕಲಿಯಬಹುದು. ಕೃಷ್ಣನದ್ದು ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿತ್ವ. ಬದುಕಿನ ಸಂದೇಶ ನಮ್ಮದಾಗಿಸಿಕೊಂಡು ಪರಿಪೂರ್ಣ ಜೀವನದತ್ತ ಸಾಗಬೇಕಿದೆ. ಪ್ರತಿಯೊಬ್ಬರೂ ಭಗವದ್ಗೀತೆ ಕುರಿತು ತಿಳಿಯಬೇಕಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಮಾಜಿ ಉಪಮೇಯರ್ ಪುಷ್ಪವಲ್ಲಿ, ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ಮುಖಂಡರಾದ ವೆಂಕಟಾಚಲ ಇದ್ದರು.
‘ಧರ್ಮಗ್ರಂಥದ ಅರಿವು ಮೂಡಿಸಿ’
‘ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಭಾರತದಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಇದೊಂದು ಪ್ರಮುಖವಾದ ಹಬ್ಬ. ನಮ್ಮ ಹಬ್ಬ– ಹರಿದಿನಗಳು ಪುಣ್ಯ ಪುರುಷರ ಇತಿಹಾಸ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬೇಕು. ಹಿಂದೂ ಧರ್ಮ ಗ್ರಂಥಗಳಾದ ರಾಮಾಯಾಣ ಮಹಾಭಾರತ ಕುರಿತು ಅರಿವು ಮೂಡಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸಲಹೆ ನೀಡಿದರು.
ವಿಶೇಷ ಪೂಜೆ ಅಭಿಷೇಕ
ಮೈಸೂರು: ನಗರದ ಇಸ್ಕಾನ್ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಬೆಳಿಗ್ಗೆ 7.30ರಿಂದ ಮಧ್ಯಾರಾತ್ರಿ 12ರವರೆಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ ಹರಿನಾಮ ಸಂಕೀರ್ತನೆಯೊಂದಿಗೆ ಶ್ರೀಕೃಷ್ಣ– ಬಲರಾಮರ ಮಹಾಭಿಷೇಕ ಜರುಗಿತು. ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.