ADVERTISEMENT

11 ವರ್ಷ ಬಳಿಕ ಪದವಿಯ ಖುಷಿ!

2013–14, 2014–15ನೇ ಸಾಲಿನ ಪರೀಕ್ಷೆಯಲ್ಲಿ ಪಾಸಾದವರಿಗೆ ಇಂದು ಪ್ರಮಾಣಪತ್ರ

ಎಂ.ಮಹೇಶ
Published 31 ಜನವರಿ 2026, 5:01 IST
Last Updated 31 ಜನವರಿ 2026, 5:01 IST
ಮೈಸೂರಿನ ಕೆಎಸ್‌ಒಯು ಆಡಳಿತ ಭವನ
ಮೈಸೂರಿನ ಕೆಎಸ್‌ಒಯು ಆಡಳಿತ ಭವನ   

ಮೈಸೂರು: ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2013–14 ಮತ್ತು 2014–15ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಪರೀಕ್ಷೆಯಲ್ಲಿ ಪಾಸಾದವರಿಗೆ ಪದವಿ ಸ್ವೀಕರಿಸುವ ಭಾಗ್ಯ ಬರೋಬ್ಬರಿ 11 ವರ್ಷಗಳ ನಂತರ ಬಂದಿದೆ.

ಆಗ ಒಟ್ಟು 90ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದರು. ಅವರಲ್ಲಿ 62,102 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಪಾಸಾಗಿರುವ 30,515 ಅಭ್ಯರ್ಥಿಗಳು ವಿವಿಧ ಪದವಿ ಸ್ವೀಕರಿಸಲು ಅರ್ಹತೆ ಗಳಿಸಿದ್ದಾರೆ. ಶನಿವಾರ (ಜ.31) ನಡೆಯಲಿರುವ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸುವ ಖುಷಿ ಅವರದಾಗಲಿದೆ.

ಉತ್ತೀರ್ಣರಾಗಿದ್ದರೂ ಪ್ರಮಾಣಪತ್ರ ಸಿಗದೆ ಅವರು ಕಾಯುತ್ತಲೇ ಇದ್ದರು. ಈ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳ ಕಾಯುವಿಕೆ ಕೊನೆಯ ಹಂತಕ್ಕೆ ಬಂದಿದೆ. ವಿಶ್ವವಿದ್ಯಾಲಯವು ಅವರಿಗೆ ಪ್ರಮಾಣಪತ್ರ ನೀಡುವುದಕ್ಕೆ ನಿರ್ಧರಿಸಿರುವುದು ಅವರಲ್ಲಿ ಸಮಾಧಾನದೊಂದಿಗೆ, ಪದವಿ ಪಡೆದಿದ್ದಕ್ಕೆ ಸಾರ್ಥಕತೆಯ ಭಾವವನ್ನೂ ತಂದುಕೊಟ್ಟಿದೆ. ಅವರಿಗೆ ಹಿಂದೆಯೇ ಪದವಿ ಪಡೆಯುವುದಕ್ಕೆ, ಯುಜಿಸಿ ಮಾನ್ಯತೆ ದೊರೆಯದಿರುವ ‘ತಾಂತ್ರಿಕ ತೊಡಕು’ ಎದುರಾಗಿತ್ತು. 

ADVERTISEMENT

ಉಲ್ಲಂಘಿಸಿದ್ದರಿಂದ: 

ರಾಜ್ಯದಲ್ಲಿ ದೂರ ಶಿಕ್ಷಣ ಕೊಡುವ ಅಧಿಕೃತ ಸಂಸ್ಥೆಯಾದ ಕೆಎಸ್‌ಒಯುನಲ್ಲಿ  ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)’ದ ನಿಯಮಾವಳಿಗಳನ್ನು ಉಲ್ಲಂಘಿಸಿ ವೈದ್ಯಕೀಯ, ತಾಂತ್ರಿಕ ಕೋರ್ಸ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಜೊತೆಗೆ, ಹೊರ ರಾಜ್ಯ, ಹೊರ ದೇಶಗಳ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಇದನ್ನು ನಂಬಿ ಸಾವಿರಾರು ಅಭ್ಯರ್ಥಿಗಳು ವಿವಿಧ ಕೋರ್ಸ್‌ಗಳಿಗೆ ನೋಂದಾಯಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಯುಜಿಸಿಯು ತಾಂತ್ರಿಕ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವ ಜೊತೆಗೆ, ರಾಜ್ಯದೊಳಗೆ ಸೀಮಿತವಾಗಿ ನಡೆಸುವಂತೆ ಸೂಚಿಸಿತ್ತು. ಹೀಗಿದ್ದರೂ, ಉಲ್ಲಂಘಿಸಿ ಪ್ರವೇಶಾತಿ, ಒಡಂಬಡಿಕೆ ಮುಂದುವರಿಸಿದ ಕಾರಣದಿಂದ ಮಾನ್ಯತೆಯನ್ನು ರದ್ದುಪಡಿಸಿತ್ತು. ಇದರಿಂದಾಗಿ ಕೆಎಸ್‌ಒಯು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿ ಕಲಿತವರ ಭವಿಷ್ಯವೂ ಡೋಲಾಯಮಾನವಾಗಿತ್ತು. ತೇರ್ಗಡೆಯಾಗಿದ್ದರೂ ಪ್ರಮಾಣಪತ್ರ ವಿತರಿಸಲು ಸಾಧ್ಯವಾಗಿರಲಿಲ್ಲ.

ದಾರಿ ಸುಗಮ: 

ಈ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕ್ರಮ ಕೈಗೊಂಡ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು ಯುಜಿಸಿ ಜೊತೆ ಪತ್ರ ವ್ಯವಹಾರಗಳನ್ನು ನಡೆಸಿ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪರಿಣಾಮ, 2013–14 ಹಾಗೂ 2014–15ನೇ ಸಾಲಿನಲ್ಲಿ ಪಾಸಾದವರಿಗೆ ಪ್ರಮಾಣಪತ್ರ ನೀಡಲು ದಾರಿ ಸುಗಮವಾಗಿದೆ.

ಪ್ರಸ್ತುತ, ಇನ್‌ಹೌಸ್ (ವಿವಿಯಲ್ಲೇ) ನೋಂದಾಯಿಸಿ ಪರೀಕ್ಷೆ ಪಾಸಾದವರಿಗೆ ಈಗ ಪ್ರಮಾಣಪತ್ರ ಕೊಡಲಾಗುತ್ತಿದೆ. ಸಿಂಡಿಕೇಟ್ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ರಾಜ್ಯಪಾಲರು ಅಸ್ತು ಎಂದಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

2013–14 ಹಾಗೂ 2014–15ನೇ ಸಾಲಿನಲ್ಲಿ ಕೆಎಸ್‌ಒಯುನಲ್ಲೇ ನೋಂದಾಯಿಸಿ ಪಾಸಾದವರಿಗೆ ಪದವಿ ದೊರೆಯಲಿದ್ದು ಇದರಿಂದ ಆ ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ.
ಪ್ರೊ.ಶರಣಪ್ಪ ವಿ.ಹಲಸೆ ಕುಲಪತಿ ಕೆಎಸ್‌ಒಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.