ADVERTISEMENT

ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್‌: ದಿನಕ್ಕೊಂದು ದರ!

ಇಲಾಖೆ ವೆಬ್‌ಸೈಟ್‌ ಗೊಂದಲದಿಂದ ಪ್ರಯಾಣಿಕರಿಗೆ ತೊಂದರೆ

ಶಿವಪ್ರಸಾದ್ ರೈ
Published 21 ಜುಲೈ 2024, 20:22 IST
Last Updated 21 ಜುಲೈ 2024, 20:22 IST
ಕೆಎಸ್‌ಆರ್‌ಟಿಸ್‌ ಅಧಿಕೃತ ಬುಕ್ಕಿಂಗ್‌ ಆ್ಯಪ್‌ನಲ್ಲಿ ಮೈಸೂರಿನಿಂದ ಪುತ್ತೂರಿಗೆ ಜು.19ರಂದು ತೋರಿಸುತ್ತಿರುವ ಟಿಕೆಟ್‌ ದರ
ಕೆಎಸ್‌ಆರ್‌ಟಿಸ್‌ ಅಧಿಕೃತ ಬುಕ್ಕಿಂಗ್‌ ಆ್ಯಪ್‌ನಲ್ಲಿ ಮೈಸೂರಿನಿಂದ ಪುತ್ತೂರಿಗೆ ಜು.19ರಂದು ತೋರಿಸುತ್ತಿರುವ ಟಿಕೆಟ್‌ ದರ   

ಮೈಸೂರು: ದೂರದ ಊರುಗಳಿಗೆ ಪ್ರಯಾಣಿಸಲು ಖಾಸಗಿ ಬಸ್‌ಗಳು ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಟಿಕೆಟ್‌ ದರ ಹೆಚ್ಚಿಸುತ್ತವೆ. ಇದೀಗ ಸರ್ಕಾರಿ ಬಸ್‌ಗಳಲ್ಲೂ ಯಾವುದೇ ಸೂಚನೆ ನೀಡದೆ ನಿತ್ಯ ಟಿಕೆಟ್ ದರ ಹೆಚ್ಚಿಸುತ್ತಿದ್ದು, ಪ್ರಯಾಣ ದುಬಾರಿಯಾಗಿ ಪರಿಣಮಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಅಧಿಕೃತ ಆನ್‌ಲೈನ್ ಬುಕ್ಕಿಂಗ್‌ ಆ್ಯಪ್‌ನಲ್ಲಿ ದಿನಕ್ಕೊಂದು ಟಿಕೆಟ್‌ ದರ ತೋರಿಸುತ್ತಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚುವರಿ ಹಣ ಪಾವತಿಸಿ ಪ್ರಯಾಣಿಸುತ್ತಿದ್ದಾರೆ.

ಪ್ರಯಾಣಿಕರೊಬ್ಬರು ಜು.10ರಂದು ಮೈಸೂರಿನಿಂದ ಪುತ್ತೂರಿಗೆ ತೆರಳಲು ಜು.3ರಂದು ಆನ್‌ಲೈನ್‌ನಲ್ಲಿ ರಾಜಹಂಸ ಎಕ್ಸಿಕ್ಯೂಟಿವ್‌ ಬಸ್‌ನ ಟಿಕೆಟ್‌ ಕಾಯ್ದಿರಿಸಲು ಮುಂದಾದಾಗ ಟಿಕೆಟ್‌ ದರ ₹366 ತೋರಿಸುತ್ತಿತ್ತು. ಮರುದಿನ ₹495ಕ್ಕೆ ಏರಿಕೆಯಾಗಿತ್ತು.

ADVERTISEMENT

ಜು.13ರಂದು ಪುತ್ತೂರು ಬಸ್ಸು ನಿಲ್ದಾಣದಲ್ಲಿರುವ ಮುಂಗಡ ಟಿಕಟ್‌ ಬುಕ್ಕಿಂಗ್‌ ಕೇಂದ್ರದಲ್ಲಿ ವಿಚಾರಿಸಿದಾಗ ಅದೇ ಬಸ್‌ನ ಟಿಕೆಟ್‌ ಮೊತ್ತ ₹540ಕ್ಕೆ ಏರಿಕೆಯಾಗಿತ್ತು. ಕಳೆದ 15 ದಿನಗಳಲ್ಲಿ ನಿತ್ಯ ಇದೇ ರೀತಿಯಾಗಿ ದರ ವ್ಯತ್ಯಾಸವಾಗಿದೆ. ಕೆಎಸ್‌ಆರ್‌ಟಿಸಿ ಸಂಚರಿಸುವ ಇತರೆ ದಾರಿಗಳಲ್ಲೂ ದರ ವ್ಯತ್ಯಾಸ ಕಂಡುಬಂದಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.

ಸರ್ಕಾರಿ ಬಸ್‌ಗಳಲ್ಲಿ ಜನ ಹೆಚ್ಚಾದಾಗ ಅಥವಾ ವಾರಾಂತ್ಯದಲ್ಲಿ ಟಿಕೆಟ್‌ ದರ ಹೆಚ್ಚಾಗುವುದಿಲ್ಲ. ಹಾಗಿದ್ದರೂ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ ದರ ಏರಿಕೆಯಾಗುತ್ತಿರುವುದು ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ.  ₹200ರ ರವರೆಗೂ ಹೆಚ್ಚುವರಿ ಹಣ ಪಾವತಿಸಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬಸ್‌ ನಿರ್ವಾಹಕರು ನೀಡುವ ಟಿಕೆಟ್‌ನ ಮೊತ್ತ ಹಾಗೂ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ ಮೊತ್ತಕ್ಕೂ ಅಪಾರ ವ್ಯತ್ಯಾಸ ಉಂಟಾಗಿದೆ. ಪುತ್ತೂರು– ಮೈಸೂರಿನ ರಾಜಹಂಸ ಬಸ್‌ನಲ್ಲಿ ನಿರ್ವಾಹಕರು ನೀಡುವ ಟಿಕೆಟ್‌ ದರ ₹350 ಇದ್ದರೆ, ಆನ್‌ಲೈನ್‌ನಲ್ಲಿ ₹495 ಪಾವತಿಸಬೇಕು. ಈ ಮುಂಚೆ, ಮುಂಗಡ ಪಾವತಿಗಾಗಿ ₹20 ಹೆಚ್ಚುವರಿ ಪಡೆಯಲಾಗುತ್ತಿತ್ತು. ಆದರೆ ಈಗಿನ ವ್ಯವಸ್ಥೆಯಲ್ಲಿ ₹129 ಹೆಚ್ಚಳವಾದಂತಾಗಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್‌ ಕಾಯ್ದಿರಿಸುವಿಕೆ ಕೇಂದ್ರದವರನ್ನು ಸಂಪರ್ಕಿಸಿದಾಗ, ಸಿಬ್ಬಂದಿಯಲ್ಲೂ ಸಮರ್ಪಕ ಮಾಹಿತಿ ಇರಲಿಲ್ಲ.

‘ವಿಭಾಗೀಯ ಕೇಂದ್ರಗಳು ನೀಡಿದ ಮಾಹಿತಿಯಂತೆ ದರ ನಿಗದಿ ಮಾಡಲಾಗುತ್ತಿದೆ. ಮುಂದಿನ 2–3 ದಿನಗಳಲ್ಲಿ ಗೊಂದಲ’ ಸರಿಪಡಿಸಲಾಗುವುದು’ ಎಂದು ಬುಕಿಂಗ್‌ ಕೇಂದ್ರದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಎಸ್‌ಆರ್‌ಟಿಸ್‌ ಅಧಿಕೃತ ಬುಕ್ಕಿಂಗ್‌ ಆ್ಯಪ್‌ನಲ್ಲಿ ಜು.23ರಂದು ಅದೇ ಬಸ್‌ಗಳಲ್ಲಿ ಆಗಿರುವ ದರ ವ್ಯತ್ಯಾಸ

ಮುಂಗಡ ಟಿಕೆಟ್‌ ಕಾಯ್ದಿರಿಸುವ ಕೇಂದ್ರಕ್ಕೆ ಬೀಗ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿರುವ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಕೇಂದ್ರದ ಕೊಠಡಿಗೆ ಬೀಗ ಜಡಿಯಲಾಗಿದೆ. ಪ್ರಯಾಣದ ಮಾಹಿತಿ ಪಡೆಯುವ ಸಿಬ್ಬಂದಿ ಪಕ್ಕದಲ್ಲೇ ಇರುವ ಖಾಸಗಿ ಬುಕ್ಕಿಂಗ್‌ ಕೇಂದ್ರಕ್ಕೆ ತೆರಳಲು ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.