ADVERTISEMENT

ಸಹಜ ಸ್ಥಿತಿಗೆ ಮರಳಿದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

ಕೆಎಸ್‌ಆರ್‌ಟಿಸಿ ಒಡಕು ಬಿಂಬಿಸಿದ ಮುಷ್ಕರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 4:02 IST
Last Updated 15 ಡಿಸೆಂಬರ್ 2020, 4:02 IST
ಮೈಸೂರಿನಲ್ಲಿ ಸೋಮವಾರ ಸಂಜೆ ಹೊತ್ತಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಹಜ ಸ್ಥಿತಿಗೆ ಮರಳಿತು
ಮೈಸೂರಿನಲ್ಲಿ ಸೋಮವಾರ ಸಂಜೆ ಹೊತ್ತಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಹಜ ಸ್ಥಿತಿಗೆ ಮರಳಿತು   

ಮೈಸೂರು: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸೋಮವಾರ ಸಂಜೆಯ ಹೊತ್ತಿಗೆ ಸಹಜ ಸ್ಥಿತಿಗೆ ಮರಳಿದೆ. ಒಕ್ಕೂಟವು ಬೆಂಗಳೂರಿನಲ್ಲಿ ಮುಷ್ಕರ್ ವಾಪಸ್‌ ಎಂದು ಘೋಷಿಸುತ್ತಿದ್ದಂತೆ ಎಲ್ಲ ನಿಲ್ದಾಣಗಳಲ್ಲೂ ಸಹಜ ಸ್ಥಿತಿ ಮೂಡಿದೆ. ಸಂಜೆ ಹೊತ್ತಿಗೆ 128ಕ್ಕೂ ಅಧಿಕ ಬಸ್‌ಗಳು ಯಾವುದೇ ಭದ್ರತೆ ಇಲ್ಲದೇ ಸಂಚರಿಸಿದವು.

ಇದಕ್ಕೂ ಮುನ್ನ ಕೆಎಸ್‌ಆರ್‌ಟಿಸಿಯ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‌ನಡಿ ಗುರುತಿಸಿಕೊಂಡ ನೌಕರರು ಸೋಮವಾರ ಬೆಳಿಗ್ಗೆಯಿಂದಲೆ ಕರ್ತವ್ಯಕ್ಕೆ ಹಾಜರಾದರು. ಬೆಳಿಗ್ಗೆ 6 ಗಂಟೆಗೆಯೂನಿಯನ್‌ನ ನಗರ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಅವರ ನೇತೃತ್ವದಲ್ಲಿ ಜೆ.ಪಿ.ನಗರಕ್ಕೆ ಮೊದಲ ಬಸ್ ಸಂಚಾರ ಆರಂಭಿಸಿತು. ಸಂಜೆಯವರೆಗೆ 58 ಬಸ್‌ಗಳು ನಗರದಲ್ಲಿ ಬಿಗಿ ಭದ್ರತೆಯಲ್ಲಿ ಸಂಚಾರ ನಡೆಸಿದವು. ಆದರೆ, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟದ ಸದಸ್ಯರು ಸಂಜೆಯವರೆಗೂ ಕರ್ತವ್ಯಕ್ಕೆ ಬಾರದೇ ಮುಷ್ಕರ ನಡೆಸಿದರು.

ಜಯನಗರದಲ್ಲಿ ಒಕ್ಕೂಟಕ್ಕೆ ಸೇರಿದ ಮುಖಂಡರು ಮತ್ತು ನೌಕರರು ಸಭೆ ನಡೆಸಿ, ಕೋಡಿಹಳ್ಳಿ ಚಂದ್ರಶೇಖರ್ ಅವರ ತೀರ್ಮಾನಕ್ಕೆ ಅನುಗುಣವಾಗಿ ನಡೆದುಕೊಳ್ಳುವ ತೀರ್ಮಾನವನ್ನು ಕೈಗೊಂಡರು. ಈ ಸಭೆಯಲ್ಲಿ ವಿಶ್ವನಾಥ್, ಗಣೇಶ್, ಕೀರ್ತಿಕುಮಾರ್, ಮಧುಸೂದನ್, ಮಂಜೇಗೌಡ ಸೇರಿದಂತೆ ನೂರಕ್ಕೂ ಅಧಿಕ ಸಿಬ್ಬಂದಿ ಇದ್ದರು.

ADVERTISEMENT

ಸಚಿವ ಸೋಮಶೇಖರ್ ಭೇಟಿ

ಸಚಿವ ಎಸ್.ಟಿ.ಸೋಮಶೇಖರ್ ಅವರು ಗ್ರಾಮಾಂತರ ಬಸ್‌ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸನ್ನೇರಿದ್ದ ಪ್ರಯಾಣಿಕರೊಂದಿಗೆ ಮಾತನಾಡಿ ಮುಷ್ಕರದಿಂದ ತೊಂದರೆಯಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಜತೆಗೆ, ಸುರಕ್ಷಿತವಾಗಿ ಪ್ರಯಾಣ ಮಾಡಿ ಎಂದು ಹೇಳಿದರು. ಇದಕ್ಕೂ ಮುನ್ನ ಪೊಲೀಸ್ ಕಮಿಷನರ್ ಚಂದ್ರಗುಪ್ತ ಭದ್ರತೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.