ADVERTISEMENT

ಕೆಎಸ್‌ಆರ್‌ಟಿಸಿ: 545 ಚಾಲಕ ಕಂ ನಿರ್ವಾಹಕ ಹುದ್ದೆ ಭರ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 3:15 IST
Last Updated 9 ನವೆಂಬರ್ 2025, 3:15 IST
   

ಮೈಸೂರು: ‘ಸರ್ಕಾರ ಕೆಎಸ್‌ಆರ್‌ಟಿಸಿ ಇಲಾಖೆಯಲ್ಲಿನ 545 ಚಾಲಕ ಕಂ ನಿರ್ವಾಹಕ ಹುದ್ದೆಗಳನ್ನು ಶೀಘ್ರ ನೇಮಕಾತಿ ಮಾಡಬೇಕು’ ಎಂದು ಅಭ್ಯರ್ಥಿಗಳು ಆಗ್ರಹಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿ ಆರ್.ಟಿ.ಜಯರಾಮ, ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಹಾಗೂ ಕಂ ನಿರ್ವಾಹಕ 2,545 ಹುದ್ದೆಗಳಿಗೆ 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಇದರಲ್ಲಿ 2000 ಮಾತ್ರ ಭರ್ತಿ ಮಾಡಲಾಗಿದ್ದು, ಬಾಕಿ 545 ಹುದ್ದೆಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ, ಸಾರಿಗೆ ಸಚಿವರು, ಕೇಂದ್ರ ಸಚಿವರು, ಪ್ರಧಾನಮಂತ್ರಿ, ರಾಷ್ಟ್ರಪತಿಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಹಣವಿಲ್ಲ ಎಂದು ಹೇಳಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಇದರಿಂದ 545 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಗಮನಹರಿಸಿ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಅಭ್ಯರ್ಥಿಗಳಾದ ರಾಮರೆಡ್ಡಿ, ವಾಸಿಂ, ನಟರಾಜು, ಲೋಕೇಶ್, ಮಾದೇಗೌಡ, ಅಕ್ರಂವಾಸಿಂ, ಸಂತೋಷ್, ಶರತ್, ಗಿರಿಧರ್, ಪರಮೇಶ್, ಮನುಕುಮಾರ್, ವಿಜಯ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.