ADVERTISEMENT

ಏರಿಕೆ ಕಂಡ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ

2 ಖಾಸಗಿ ಬಸ್‌ ನಂತರ 1 ಕೆಎಸ್‌ಆರ್‌ಟಿಸಿ ಬಸ್ ಸಂಚಾರ; ಕೆಲವೆಡೆ ಕಲ್ಲೆಸೆತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 4:50 IST
Last Updated 13 ಏಪ್ರಿಲ್ 2021, 4:50 IST
ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು
ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು   

ಮೈಸೂರು: ಸರ್ಕಾರದ ಕರೆಗೆ ಓಗೊಟ್ಟು, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರ ಸಂಖ್ಯೆಯಲ್ಲಿ ಸೋಮವಾರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದರಿಂದ ಸಂಜೆ ಹೊತ್ತಿಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಘಟಕದಿಂದ 171 ಕೆಎಸ್‌ಆರ್‌ಟಿಸಿ ಬಸ್‌ಗಳು ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣ ಬೆಳೆಸಿದ್ದರೆ, ನಗರ ಘಟಕದಿಂದ 299 ಬಸ್‌ಗಳು ಬಸ್ ಸಂಚರಿಸಿವೆ.

ನಗರ ಘಟಕದಲ್ಲಿ ಶೇ 40ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯಕ್ಕೆ ಬಂದಿದ್ದರೆ, ಗ್ರಾಮಾಂತರ ಘಟಕದಲ್ಲಿ ಶೇ 30ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ADVERTISEMENT

ಖಾಸಗಿ ಬಸ್ ಮಾಲೀಕರ ಆಕ್ಷೇಪ: ಈ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಏರಿಕೆಯಾಗುತ್ತಿದ್ದಂತೆ ಖಾಸಗಿ ಬಸ್‌ ಮಾಲೀಕರ ಆಕ್ಷೇಪವೂ ಹೆಚ್ಚಾಯಿತು. ‘ಮೊದಲು ಬಂದಿರುವುದು ನಾವು. ಈಗ ಬಂದಿರುವ ಕೆಎಸ್‌ಆರ್‌ಟಿಸಿ ಬಸ್‌ಗೆ ಜನರನ್ನು ಹತ್ತಿಸಬಾರದು’ ಎಂದು ತಗಾದೆ ತೆಗೆದರು.

ಇದರಿಂದ ಕೆಲಕಾಲ ನಿಲ್ದಾಣದಲ್ಲಿ ಜಟಾಪಟಿ ಉಂಟಾಯಿತು. ಸ್ಥಳಕ್ಕೆ ಬಂದ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದರು.

ಎರಡು ಖಾಸಗಿ ಬಸ್ ತೆರಳಿದ ಮೇಲೆ 1 ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಲು ಸರ್ವಾನುಮತದ ಒಪ್ಪಿಗೆ ಪಡೆಯಲಾಯಿತು. ಈ ನಿಯಮದಡಿ ಗ್ರಾಮಾಂತರ ಘಟಕದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಚಾರ ನಡೆಸಿವೆ.

ಯುಗಾದಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇದರಿಂದ ಗ್ರಾಮಾಂತರ ಘಟಕದಿಂದ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಸೇರಿ ಒಟ್ಟು 480 ಬಸ್‌ಗಳು ಸೋಮವಾರ ಸಂಜೆಯವರೆಗೆ ಸಂಚರಿಸಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.