ADVERTISEMENT

ಮೈಸೂರು | ಮಾರ್ಚ್‌ 12ಕ್ಕೆ ‘ರೈತರ ಆಕ್ರೋಶ ದಿನ’; ಪಂಜಿನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 15:48 IST
Last Updated 10 ಮಾರ್ಚ್ 2024, 15:48 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಮೈಸೂರು: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್‌ 12ರಂದು ರಾಜ್ಯದಾದ್ಯಂತ ಪಂಜಿನ ಪ್ರತಿಭಟನೆ ಮತ್ತು ‘ರೈತರ ಆಕ್ರೋಶ ದಿನ’ ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಪಂಜಾಬ್, ಹರಿಯಾಣ ರೈತರು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ತೀವ್ರವಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಬಲದ ಮೂಲಕ ಚಳವಳಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಗೋಲಿಬಾರ್ ಕೂಡ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ರೈತರ ಜೊತೆ ನಾಲ್ಕು ಬಾರಿ ಸಭೆ ನಡೆಸಿದ ನಾಟಕವಾಡಿ ಸಮಸ್ಯೆ ಬಗ್ಗೆ ನಿರ್ಲಕ್ಷದ ನೀತಿಯನ್ನು ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿದೆ. ಇದರ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ರೈತ ಸಂಘಟನೆಯಿಂದ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸುವುದಕ್ಕಾಗಿ ರೈತರ ಆಕ್ರೋಶ ದಿನ ಆಚರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರೈತ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿವೆ. ಮಾರ್ಚ್‌ 15ರ ನಂತರ ಧಾರವಾಡದಲ್ಲಿ ರೈತರು ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಿ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಾದ್ಯಂತ ಬರಗಾಲದ ಬವಣೆಯಿಂದ ಜನ–ಜಾನುವಾರಿಗೆ ಕುಡಿಯುವ ನೀರು, ದನ–ಕರುಗಳಿಗೆ ಮೇವಿನ ಕೊರತೆ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಬರಗಾಲದ ಕಾರಣ ಸಾಲ ವಸೂಲಾತಿ ನಿಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದರೂ ಬ್ಯಾಂಕ್‌ಗಳವರು ಬಲವಂತದಿಂದ ವಸೂಲಿಗೆ ಮುಂದಾಗಿವೆ. ನೋಟಿಸ್ ನೀಡುವುದೂ ಮುಂದುವರಿದಿದೆ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಲು ಚರ್ಚೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಉಪಾಧ್ಯಕ್ಷ ನೀಲಕಂಠಪ್ಪ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಉಪಾಧ್ಯಕ್ಷ ರಂಗರಾಜು, ಅಂಬಳೆ ಮಂಜುನಾಥ ಹಾಗೂ ಸುನೀಲ್‌ ಪಾಲ್ಗೊಂಡಿದ್ದರು.

ಸರ್ಕಾರವು ರಾಜ್ಯದಲ್ಲಿ ಆನ್‌ಲೈನ್‌ ಗೇಮ್ ನಿಷೇಧಿಸಿ ಯುವಕರ ಭವಿಷ್ಯವನ್ನು ಕಾಪಾಡಬೇಕು.
ಕುರುಬೂರು ಶಾಂತಕುಮಾರ್, ಅಧ್ಯಕ್ಷ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.