ADVERTISEMENT

ಮೈಸೂರು: ದೆಹಲಿ ಹೋರಾಟದಲ್ಲಿ ಭಾಗಿ -ಕುರುಬೂರು ಶಾಂತಕುಮಾರ್

ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭೇಟಿಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:09 IST
Last Updated 29 ಜುಲೈ 2021, 5:09 IST
ಕುರುಬೂರು ಶಾಂತಕುಮಾರ್‌
ಕುರುಬೂರು ಶಾಂತಕುಮಾರ್‌   

ಮೈಸೂರು: ಜುಲೈ 29ರಿಂದ ಆಗಸ್ಟ್ 3ರವರೆಗೆ ನವದೆಹಲಿ ಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಭಾಗಿಯಾಗುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಈ ವೇಳೆ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರನ್ನು ಭೇಟಿ ಮಾಡಿ, ರಸಗೊಬ್ಬರದ ಮೇಲಿನ ಜಿಎಸ್‌ಟಿ ತೆರಿಗೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗುವುದು ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಚಿನ್ನ, ಬೆಳ್ಳಿ ಗಿಂತ ರಸಗೊಬ್ಬರ, ಕೀಟನಾಶಕಗಳ ಮೇಲಿನ ಜಿಎಸ್‌ಟಿ ಹೆಚ್ಚಾಗಿದೆ. ಆಭರಣ ಖರೀದಿಸುವವರು ಬಡವರು, ರಸಗೊಬ್ಬರ ಖರೀದಿಸುವವರು ಶ್ರೀಮಂತರು ಎಂಬ ಭಾವನೆ ಸರ್ಕಾರಕ್ಕೆ ಇದ್ದಂತಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆ ಆರಂಭ ವಾಗಿದ್ದರೂ, ಕಬ್ಬು ದರ ನಿಗದಿಯಾಗಿಲ್ಲ. ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡಿಲ್ಲ. ಕಬ್ಬಿನಿಂದ ಎಥೆನಾಲ್‌ ಉತ್ಪಾದಿಸಲು ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಕಡ್ಡಾಯಗೊಳಿಸಬೇಕು. ಎಥೆನಾಲ್‌ನಿಂದ ಬರುವ ಲಾಭವನ್ನು ರೈತರಿಗೆ ಹಂಚಿಕೆ ಮಾಡಬೇಕು’ ಎಂದರು.

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮುಖಂಡರಾದ ಬರಡನಪುರ ನಾಗರಾಜ್, ದೇವೇಂದ್ರಕುಮಾರ್, ಗಳಿಗರ ಹುಂಡಿ ವೆಂಕಟೇಶ್, ಸಾತಗಳ್ಳಿ ಬಸವರಾಜ್, ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.