ADVERTISEMENT

ಕುಶಾಲತೋಪಿನ ಶಬ್ದ: ತೀವ್ರತೆಗೆ ಅಂಜಿದ ಗಂಡಾನೆಗಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 3:43 IST
Last Updated 6 ಅಕ್ಟೋಬರ್ 2021, 3:43 IST
ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ನಡೆದ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗೆ ಕುಶಾಲತೋಪು ಸಿಡಿಸುವ 2ನೇ ಹಂತದ ತಾಲೀಮಿನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಿಡಿಮದ್ದಿಗೆ ಬೆಂಕಿ ಇಟ್ಟಾಗ ಫಿರಂಗಿಯ ನಳಿಗೆಯಿಂದ ಬೃಹತ್ ಗಾತ್ರದ ಬೆಂಕಿಯುಂಡೆಯೊಂದು ಸೃಷ್ಟಿಯಾಯಿತು
ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ನಡೆದ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗೆ ಕುಶಾಲತೋಪು ಸಿಡಿಸುವ 2ನೇ ಹಂತದ ತಾಲೀಮಿನಲ್ಲಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸಿಡಿಮದ್ದಿಗೆ ಬೆಂಕಿ ಇಟ್ಟಾಗ ಫಿರಂಗಿಯ ನಳಿಗೆಯಿಂದ ಬೃಹತ್ ಗಾತ್ರದ ಬೆಂಕಿಯುಂಡೆಯೊಂದು ಸೃಷ್ಟಿಯಾಯಿತು   

ಮೈಸೂರು: ಅರಮನೆಯ ಹೊರ ಆವರಣದಲ್ಲಿ ಮಂಗಳವಾರ ದಸರಾ ಗಜಪಡೆಯ ಕುಶಾಲತೋಪು ಸಿಡಿಸುವ 2ನೇ ಹಂತದ ತಾಲೀಮಿನಲ್ಲಿ ಹೆಣ್ಣಾನೆಗಳಿಗಿಂತ ಗಂಡಾನೆಗಳೇ ಬೆದರಿದವು.

ತಾಲೀಮಿನಲ್ಲಿ ‌ಗೋಪಾಲಸ್ವಾಮಿ, ಧನಂಜಯ ಹಾಗೂ ಅಶ್ವತ್ಥಾಮ ಆನೆಗಳು ಶಬ್ದದ ತೀವ್ರತೆಗೆ ಬೆಚ್ಚಿ ಹಿಂದಡಿ ಇಟ್ಟವು. ಕಳೆದ ಬಾರಿಯೂ ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಬೆಚ್ಚಿದ್ದವು.

ಕಳೆದ ಬಾರಿ ಬೆದರಿದ್ದ ಲಕ್ಷ್ಮೀ ಆನೆ ಈ ಬಾರಿ ಜಗ್ಗದೆ ನಿಂತಿತ್ತು. ಅದರೊಂದಿಗೆ, ಇತರೆ ಹೆಣ್ಣಾನೆಗಳಾದ ಕಾವೇರಿ, ಚೈತ್ರಾ ಸಹ ಬೆದರದೇ ನಿಂತಿದ್ದವು. ಅಭಿಮನ್ಯು ಎಂದಿನಂತೆ ರಾಜಗಾಂಭೀರ್ಯವನ್ನು ಕಾಪಾಡಿಕೊಂಡು ಸೈ ಎನ್ನಿಸಿಕೊಂಡಿತು. ಮಸ್ತಿಯಲ್ಲಿದ್ದ ವಿಕ್ರಮ ಆನೆಯನ್ನು ಈ ಬಾರಿ ತಾಲೀಮಿನಿಂದ ದೂರ ಇರಿಸಲಾಗಿತ್ತು. ಕಳೆದ ಬಾರಿಗಿಂತ ಶಬ್ದದ ತೀವ್ರತೆ ಈ ಬಾರಿ ಹೆಚ್ಚಿತ್ತು.

ADVERTISEMENT

ತಾಲೀಮು ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಕರಿಕಾಳನ್, ‘ಕಳೆದ ಬಾರಿ ಆನೆಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. ಆದರೆ, ಈ ಬಾರಿ ಸರಪಣಿ ತೆಗೆಯಲಾಗಿತ್ತು. ಶಬ್ದದ ತೀವ್ರತೆಗೆ ಆನೆಗಳು ಸ್ಪಂದಿಸಿದ ರೀತಿ ತೃಪ್ತಿ ತಂದಿದೆ. ಅ. 8ರಂದು ನಡೆಯಲಿರುವ ಕೊನೆಯ ತಾಲೀಮಿನಲ್ಲಿಇನ್ನಷ್ಟು ಉತ್ತಮವಾಗಿ ಆನೆಗಳು ಸ್ಪಂದಿಸಲಿವೆ. ವಿಕ್ರಮ ಆನೆ ಮಸ್ತಿಯಲ್ಲಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.