ಮೈಸೂರು: ‘ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ ಸಮರ್ಪಕ ವಿದ್ಯುತ್ ಪೂರೈಸಲು ‘ಕುಸುಮ್-ಸಿ’ ಯೋಜನೆಯನ್ನು ತ್ವರಿತ ಅನುಷ್ಠಾನಕ್ಕೆ ಕ್ರಮವಹಿಸಬೇಕು’ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯನಗರದ ಸೆಸ್ಕ್ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ರೈತರ ಸಮಸ್ಯೆಗಳು ಬಗೆಹರಿಯಲಿವೆ. ಸೆಸ್ಕ್ ರಾಜ್ಯದ ನಂಬರ್ ಒನ್ ಎಸ್ಕಾಂ ಎಂಬ ಶ್ರೇಯಕ್ಕೆ ಭಾಜನವಾಗಲಿದೆ’ ಎಂದರು.
‘ಭೂಮಿಯ ಸಮಸ್ಯೆಯಿದ್ದರೆ, ಉದ್ಯಮಿ ಹಾಗೂ ರೈತರ ಜತೆಗೆ ಮಾತುಕತೆ ನಡೆಸಿ ಅಗತ್ಯ ಜಾಗ ಪಡೆಯಿರಿ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಚುರುಕಾಗಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಜನಾಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಬಿಲ್ಲಿಂಗ್, ಮೀಟರ್ ರೀಡಿಂಗ್, ಮೀಟರ್, ವಿದ್ಯುತ್ ಅಕ್ರಮ ಸಂಪರ್ಕಗಳ ಪರಿಶೀಲನೆ ನಡೆಸಬೇಕು. ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸಿ’ ಎಂದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ‘ಕುಸುಮ್–ಸಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ 153 ಸಬ್ ಸ್ಟೇಷನ್‌ಗಳಿಂದ 842.16 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕಾರ್ಯಾದೇಶ ನೀಡಲಾಗಿದೆ. 100 ಸಬ್ ಸ್ಟೇಷನ್‌ಗಳಿಂದ 566.3 ಮೆಗಾ ವ್ಯಾಟ್ ಉತ್ಪಾದನೆಗೆ ಪಿಪಿಎ ಕಾರ್ಯಗತ ಮಾಡಲಾಗಿದೆ. ಅದರಲ್ಲಿ ಎಲ್ಲ ವಿಭಾಗಕ್ಕೂ ಮೂರು ತಿಂಗಳಲ್ಲಿ ಕನಿಷ್ಠ 5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ನೀಡಲಾಗಿದೆ’ ಎಂದು ತಿಳಿಸಿದರು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ ಶರಣಮ್ಮ ಎಸ್.ಜಂಗಿನ, ಆಡಳಿತ ಮತ್ತು ಮಾನವ ಸಂಪನ್ಮೂಲ ಶಾಖೆ ಪ್ರಧಾನ ವ್ಯವಸ್ಥಾಪಕ ಬಿ.ಆರ್.ರೂಪಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.