ಮೈಸೂರು: ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸದಸ್ಯರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕಾರ್ಮಿಕರ ಭವನದ ಎದುರು ಪ್ರತಿಭಟಿಸಿದರು.
‘ಹೈಕೋರ್ಟ್ ತೀರ್ಪಿನಂತೆ 2021–22 ಮತ್ತು 2022–23ರ ಶೈಕ್ಷಣಿಕ ಸಹಾಯಧನಕ್ಕಾಗಿ ಬಾಕಿ ಇರುವ ಅರ್ಜಿಗಳಿಗೆ 2021ರ ನೋಟಿಫಿಕೇಷನ್ ಹಾಗೂ ಹೈಕೋರ್ಟ್ ಆದೇಶದಂತೆ ಸಹಾಯಧನ ಪಾವತಿಸಬೇಕು. ಕಾರ್ಮಿಕರು ಬಳಸಲು ಯೋಗ್ಯವಲ್ಲದ ಟೂಲ್ ಕಿಟ್, ಇತರೆ ಖರೀದಿ ವ್ಯವಹಾರವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
‘ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ₹258.79 ಕೋಟಿ ಅವ್ಯವಹಾರ ಆಗಿದೆ ಎಂದು ಸಿಎಜಿ ವರದಿ ನೀಡಿದೆ. ಇದರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ವೈದ್ಯಕೀಯ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿರುವವರಿಗಾಗಿ ಕೂಡಲೇ ಧನಸಹಾಯ ನೀಡಬೇಕು. ಕೆಲಸದ ಸ್ಥಳದಲ್ಲಿ ನಿರ್ಮಾಣ ಕೆಲಸಗಾರರಿಗೆ ಸುರಕ್ಷತೆ ಮತ್ತು ಶುದ್ಧ ಕುಡಿಯುವ ನೀರು ಮುಂತಾದ ಮೂಲಸೌಕರ್ಯ ಕಲ್ಪಿಸಬೇಕು. ದಿನಬಳಕೆ ವಸ್ತು ಹಾಗೂ ಆರೋಗ್ಯ ವೆಚ್ಚ ದುಬಾರಿಯಾಗಿರುವುದರಿಂದ ಮಾಸಿಕ ಪಿಂಚಣಿ ₹5 ಸಾವಿರಕ್ಕೆ ಏರಿಸಬೇಕು’ ಎಂದು ಆಗ್ರಹಿಸಿದರು.
‘ಸಂಚಾರಿ ಆರೋಗ್ಯ ಘಟಕದ ಮೂಲಕ ನಕಲಿ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸುವುದನ್ನು ನಿಲ್ಲಿಸಬೇಕು. ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು. ಸ್ಲಂ ಬೋರ್ಡ್‌ಗೆ ನೀಡಿರುವ ₹54 ಕೋಟಿ ಮಂಡಳಿ ಹಣ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.
ಸಂಘಟನೆ ಅಧ್ಯಕ್ಷ ಎಚ್.ಎಂ.ಬಸವಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಬಿ.ನವೀನ್ ಕುಮಾರ್, ಪದಾಧಿಕಾರಿಗಳಾದ ಜಿ.ಎಸ್.ಗೋವಿಂದೇ ಗೌಡ, ಎಂ.ಮಲ್ಲೇಶ್, ಕೆ.ವಿ.ಅರುಣ್, ಕೆ.ಸಿ.ಕೃಷ್ಣ, ಎಲ್.ಮಹದೇವಸ್ವಾಮಿ, ರಾಮಚಂದ್ರ, ಶಶಿಕಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.