
ಹುಣಸೂರು: ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಗುರುವಾರ ಮಧ್ಯರಾತ್ರಿ ಕೂಲಿ ಕಾರ್ಮಿಕ ಅಬ್ದುಲ್ ಖಾದರ್ (42) ಕೊಲೆಯಾಗಿದೆ.
ವಿಶ್ವೇಶ್ವರಯ್ಯ ವೃತ್ತದಲ್ಲಿನ ಆಟೊ ನಿಲ್ದಾಣದಕ್ಕೆ ಹೊಂದಿಕೊಂಡಿರುವ ಗಣೇಶ ಗುಡಿ ಬೀದಿಯ ಚರಂಡಿಯಲ್ಲಿ ಶವ ಪತ್ತೆಯಾಗಿದ್ದು, ನಗರ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಮೃತ ಅಬ್ದುಲ್ ಖಾದರ್ ಸಂತೆ ಮಾಳಕ್ಕೆ ಹೊಂದಿಕೊಂಡಿರುವ ನಿಜಾಮ್ ಮೊಹಲ್ಲಾ ಕಾಲೊನಿ ನಿವಾಸಿಯಾಗಿದ್ದು, ಈತ ಸಂತೆಮಾಳ ಮತ್ತು ಸುತ್ತಮುತ್ತ ಕೂಲಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದ. ಈತನಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ’ ಎಂದು ಸಂತೋಷ್ ಕಶ್ಯಪ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್ ಮತ್ತು ಎಸ್.ಎಫ್.ಎಲ್ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳ ಬಗ್ಗೆ ಇಲಾಖೆಗೆ ಮಾಹಿತಿ ಲಭ್ಯವಿದ್ದು, ಶಬ್ಬೀರ್ ನಗರದ ನಿವಾಸಿ ಬಶೀರ್ ಅಬ್ದುಲ್ ಮತ್ತು ವಿ.ಪಿ. ಬೋರೆ ನಿವಾಸಿ ಇನಾಯತುಲ್ಲಾ ಬಂಧನಕ್ಕೆ ಡಿವೈಎಸ್ಪಿ ರವಿ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಾರ್ಯಾಚರಣೆ ಆರಂಭವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.