
ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಶನಿವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಂಗ್ರಹವಾದ ತ್ಯಾಜ್ಯದೊಂದಿಗೆ ಸ್ವಯಂಸೇವಕರು
ಮೈಸೂರು: ಇಲ್ಲಿನ ಮಹಾನಗರಪಾಲಿಕೆಯಿಂದ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಅಂಗವಾಗಿ ಶನಿವಾರ ಕುಕ್ಕರಹಳ್ಳಿ ಕೆರೆಯಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಜೆಎಸ್‌ಎಸ್ ಮಹಾವಿದ್ಯಾಪೀಠ, ಎಂಐಟಿ, ಎಸ್‌ಜೆಸಿಇ ಹಾಗೂ ಯುವರಾಜ ಕಾಲೇಜಿನ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.
ಮೈಸೂರು ಗ್ರಾಹಕರ ಪರಿಷತ್ತು (ಎಂಜಿಪಿ), ಕ್ಲೀನ್ ಮೈಸೂರು ಫೌಂಡೇಷನ್, ರಘುಲಾಲ್ ಮೆಡಿಕಲ್ಸ್ ಸೇರಿದಂತೆ ಸಂಘ–ಸಂಸ್ಥೆಗಳ ಸದಸ್ಯರು ಕೆರೆಯ ಸ್ವಚ್ಛತಾ ಕಾರ್ಯದಲ್ಲಿ ಸಹಕರಿಸಿದರು.
ಕೆಪಿ ಕಾನ್ವೆಂಟ್, ಸೇಂಟ್ ಪಾಲ್ ಶಾಲೆ, ಲಿಟಲ್ ಇನ್ಫೆಂಟ್ ಶಾಲೆ, ಅಮೃತ ವಿದ್ಯಾಲಯ, ವಿದ್ಯಾವರ್ಧಕ ಮತ್ತು ಪ್ರಗತಿ ವಿದ್ಯಾಕೇಂದ್ರದ ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆ ಕುರಿತು ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರದರ್ಶಿಸಿದರು.
ಮಹಾನಗರಪಾಲಿಕೆಯ ಸ್ವಚ್ಛ ಭಾರತ ಮಿಷನ್ ನೋಡಲ್ ಅಧಿಕಾರಿ ಮೃತ್ಯುಂಜಯ ಕೆ.ಎಸ್., ಎಇಇ ಮೀನಾಕ್ಷಿ, ಪರಿಸರ ಎಂಜಿನಿಯರ್‌ಗಳು, ಆರೋಗ್ಯ ಇನ್‌ಸ್ಪೆಕ್ಟರ್‌ಗಳು, ಮೇಲ್ವಿಚಾರಕರು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.
ಅಭಿಯಾನದಲ್ಲಿ ಒಟ್ಟು 410 ಕೆ.ಜಿ. ತ್ಯಾಜ್ಯ ಸಂಗ್ರಹಿಸಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕೆಪಿ ಕಾನ್ವೆಂಟ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ವೀಣಾಕುಮಾರಿ ಪ್ರಥಮ, ಪ್ರಗತಿ ವಿದ್ಯಾಕೇಂದ್ರದ 7ನೇ ತರಗತಿಯ ಹರ್ಷಿತ್ ಜಿ. ಮತ್ತು ಅಮೃತ ವಿದ್ಯಾಲಯದ 4ನೇ ತರಗತಿಯ ಅನ್ವಿತಾ ತೃತೀಯ ಬಹುಮಾನವನ್ನು ಪಡೆದರು ಎಂದು ನಗರಪಾಲಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.