ಮೈಸೂರು: ಕೋಟಿ ವೆಚ್ಚದಲ್ಲಿ ‘ವಾಯುವಿಹಾರಿ ಸ್ನೇಹಿ’ಯಾಗಿ ಅಭಿವೃದ್ಧಿ ಕಂಡಿರುವ ಹೆಬ್ಬಾಳ ಕೆರೆ ಸೇರುತ್ತಿರುವ ಒಳಚರಂಡಿ ನೀರೇ ಸವಾಲು. ಬಾನಾಡಿಗಳಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ.
ಕೆರೆಯ ಉತ್ತರ ಭಾಗದಲ್ಲಿ ಎಕರೆಗಟ್ಟಲೆ ವಿಸ್ತಾರವಾಗಿ ಪ್ಲಾಸ್ಟಿಕ್ ತ್ಯಾಜ್ಯ ಹರಡಿದ್ದು, ಅವುಗಳ ಮೇಲೆಯೇ ಬಣ್ಣದ ಕೊಕ್ಕರೆ, ಕರಿ ಮತ್ತು ಬಿಳಿ ತಲೆಯ ಕೆಂಬರಲು ಸೇರಿದಂತೆ ಬಾನಾಡಿಗಳು ಹುಳ– ಹುಪ್ಪಟೆ, ಮೀನು ತಿನ್ನುತ್ತಿವೆ. ಅವುಗಳ ಬಿಳಿ ಬಣ್ಣವು ಕರಿಬೂದಿ ಮೆತ್ತಿದಂತೆ ಕಾಣುತ್ತದೆ.
ಕಾವೇರಿ ಕಣಿವೆಯತ್ತ ಹರಿಯುವ ಹಿರಿದಾದ ಹಳ್ಳಕ್ಕೆ ಹಲವು ಶತಮಾನದ ಹಿಂದೆ ತಡೆಯೊಡ್ಡಿ ಕೆರೆಯನ್ನು ಕಟ್ಟಲಾಗಿದ್ದು, ಐತಿಹಾಸಿಕ ಕೆರೆ ಪುನರುಜ್ಜೀವನಕ್ಕೆ ‘ಇನ್ಪೊಸಿಸ್ ಪ್ರತಿಷ್ಠಾನ’ವು 2016ರಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ನಂತರ ಎರಡು ವರ್ಷದಲ್ಲಿ ₹ 98 ಕೋಟಿ ವೆಚ್ಚದಲ್ಲಿ ಪ್ರತಿಷ್ಠಾನವು ಅಭಿವೃದ್ಧಿ ಪಡಿಸಿತ್ತು.
ಏನೇನು ಅಭಿವೃದ್ಧಿ: ಹೂಳು ತೆಗೆದು, ಏರಿಯನ್ನು ಬಿಗಿಗೊಳಿಸಲಾಗಿದ್ದು, ಬಾನಾಡಿಗಳಿಗೆ ನಡುಗಡ್ಡೆ ನಿರ್ಮಿಸಲಾಗಿದೆ. ರಾಜಕಾಲುವೆ ಹಾಗೂ ಕೆರೆ ಕೋಡಿಗೆ ಅಡ್ಡ ಸೇತುವೆಗಳು, ಸೋಪಾನಕಟ್ಟೆ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ರಾಜಕಾಲುವೆಯಲ್ಲಿ ಪ್ರವೇಶಿಸಿದಂತೆ ತಂತಿಯ ತಡೆ ಹಾಕಲಾಗಿದ್ದು, ಉದ್ಯಾನ ನಿರ್ಮಾಣ ಮಾಡಲಾಗಿದೆ. 8 ಸಾವಿರ ಗಿಡಗಳನ್ನು ನೆಡಸಲಾಗಿದೆ. ವಾಯುವಿಹಾರಿಗಳಿಗೆ ಎಲ್ಲ ಸೌಕರ್ಯ ಇಲ್ಲಿ ಸಿಗುತ್ತದೆ. ಆದರೆ, ಕೆರೆಯ ನೀರಿನ ಮೇಲೆ ಹಾಯ್ದು ಬರುವ ದುರ್ವಾಸನೆಯ ಗಾಳಿ ಅಸಹನೀಯ.
8 ಎಂಎಲ್‌ಡಿ ಕೊಳಚೆ ನೀರು ಸಂಸ್ಕರಣ ಘಟಕವೂ ಇದ್ದರೂ, ಪ್ರಯೋಜನವಾಗಿಲ್ಲ. ವಿಸ್ತಾರವಾದ ವಿಜಯನಗರ, ಮಂಚೇಗೌಡನಕೊಪ್ಪಲು ಸೇರಿದಂತೆ ವಿವಿಧ ಬಡಾವಣೆಗಳ ನೀರು ನೇರವಾಗಿ ರಾಜಕಾಲುವೆ ಮೂಲಕ ಹರಿದು ಬರುತ್ತಿದೆ. ಕೋಡಿ ಭಾಗದಲ್ಲಿ ಕೊಳಚೆ ನೀರೇ ಹರಿದು ಕಾವೇರಿ ಒಡಲು ಸೇರುತ್ತಿದೆ.
‘ಒಳ ಚರಂಡಿ ನೀರನ್ನು ಬೇರೆಡೆ ತಿರುಗಿಸಿ ಸಂಸ್ಕರಿಸುವ ಕೆಲಸ ಮಾಡಬೇಕು. ರಾಜಕಾಲುವೆಯಲ್ಲಿ ಮಳೆ ನೀರು ಮಾತ್ರ ಬರುವಂತೆ ಮಾಡಬೇಕು’ ಎನ್ನುತ್ತಾರೆ ವಿಜಯನಗರ ನಿವಾಸಿ ಹೇಮಂತ್.
51 ಎಕರೆ ವಿಸ್ತಾರ: ನಗರದ ದೊಡ್ಡ ಕೆರೆಗಳಲ್ಲಿ ಹೆಬ್ಬಾಳ ಕೆರೆಯೂ ಒಂದು. ವಿಸ್ತೀರ್ಣವು 51 ಎಕರೆ ಇದ್ದು, ಜಲಾವೃತ ಪ್ರದೇಶ 36 ಎಕರೆ ಆಗಿದೆ. ಹಸಿರು ಭಾಗವು 8 ಎಕರೆಯಿದ್ದು, ತ್ಯಾಜ್ಯ ಸಂಸ್ಕರಣೆಗೆ 2.1 ಎಕರೆ ಮೀಸಲಿಡಲಾಗಿದೆ. ಕೆರೆಯ ಏರಿ 2.1 ಕಿ.ಮೀ ಇದೆ.
ನೈಸರ್ಗಿಕವಾಗಿ ಬಿಡಬೇಕಿತ್ತು: ‘ಕೆರೆಯಂಚನ್ನೂ ಕಲ್ಲು– ಕಾಂಕ್ರೀಟ್‌ನಿಂದ ಮುಚ್ಚಿ, ರಸ್ತೆ ಮಾಡಲಾಗಿದೆ. ಕೆರೆ ಅಂಚಿನಲ್ಲಿರುವ ಮಣ್ಣಿನಲ್ಲಿ ಹಕ್ಕಿಗಳ ಆಹಾರವಾದ ಹುಳುಗಳಿರುತ್ತವೆ. ಶೇ 50ರಷ್ಟು ಜೀವ ಸಂಕುಲ ಇರುವ ಕೆರೆ ಅಂಚನ್ನು ನೈಸರ್ಗಿಕವಾಗಿಯೇ ಬಿಡಬೇಕಿತ್ತು. ಅಲ್ಲದೇ, ಕೆರೆಯಲ್ಲಿ ನೀರು ಯಾವಾಗಲೂ ಇರುವಂತೆ ನೋಡಿಕೊಳ್ಳಬಾರದು. ನೀರಿನ ಏರಿಳಿತ ಇದ್ದರೆ ಹುಳು, ಹಕ್ಕಿಗಳು ಇರುತ್ತವೆ’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ಹೇಳಿದರು.
‘ಇನ್ಫೊಸಿಸ್ ಪ್ರತಿಷ್ಠಾನ’ದಿಂದ ಪುನರುಜ್ಜೀವನ ಕೆರೆಯ ಉತ್ತರ ಭಾಗ ಪ್ಲಾಸ್ಟಿಕ್ ಹೂಳಿನ ಮೈದಾನ ಒಳಚರಂಡಿ ನೀರು ಸೇರದಂತೆ ಆಗಬೇಕಿದೆ ಕ್ರಮ
ಪ್ಲಾಸ್ಟಿಕ್ ತ್ಯಾಜ್ಯ ಹಾವಳಿ
ಹೆಬ್ಬಾಳದ ಕೆರೆ ಒಡಲಿಗೆ ಬರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವೇ ಸವಾಲಾಗಿದೆ. ಹೂಟಗಳ್ಳಿ ನಗರಸಭೆಯವರು ತಿಂಗಳಿಗೆ ಎರಡು ವಾರ ಕೆಲಸ ಮಾಡುತ್ತಿದ್ದಾರೆ. ತೆಪ್ಪದಲ್ಲಿ ಸಾಗಿ ಬಾಟಲಿಗಳ ನೀರು ಖಾಲಿ ಮಾಡುವುದು ದಡಕ್ಕೆ ಸಾಗಿಸುವುದು ಕಷ್ಟವಾಗಿದೆ. ಮಳೆ ಬಂದಾಗ ಹಾಗೂ ಕೆರೆಯ ಮಟ್ಟ ಏರಿದ್ದರೆ ಬಾಟಲಿಗಳು ಕೆರೆಯ ಒಳಗೇ ಹೋಗುತ್ತಿವೆ. ‘ಮೈಕ್ರೋ ಪ್ಲಾಸ್ಟಿಕ್’ಗಳು ಕಡಿಮೆ ಆಳವಿರುವ ಕೆರೆಯ ಉತ್ತರ ಭಾಗದಲ್ಲಿ ತೇಲುತ್ತಿದ್ದು ಸುಮಾರು 8 ಎಕರೆಯಷ್ಟು ಪ್ಲಾಸ್ಟಿಕ್ ಮಿಶ್ರಿತ ಹೂಳಿನ ಮೈದಾನವೇ ನಿರ್ಮಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.