ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಬುಧವಾರ ಭೇಟಿ ನೀಡಿ ಹರಾಜು ಕುರಿತು ಮಾಹಿತಿ ಪಡೆದರು
ಹುಣಸೂರು: ‘ತಂಬಾಕು ಹರಾಜು ಮಾರುಕಟ್ಟೆ ಈ ಭಾಗದ ರೈತರಿಗೆ ವರದಾನವಾಗಿದ್ದು, ಅನಧಿಕೃತ ಮತ್ತು ಕಾರ್ಡ್ ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಪತ್ರ ಬರೆಸಿ ಒತ್ತಡ ಹಾಕುತ್ತೇನೆ’ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ, ಬೆಳೆಗಾರರಿಂದ ಮಾಹಿತಿ ಸಂಗ್ರಹಿಸಿ ಮಾತನಾಡಿದರು.
‘ತಂಬಾಕು ಬೆಳೆಗಾರರಿಗೆ ಈ ಸಾಲಿನಲ್ಲಿ ಉತ್ತಮ ದರ ಸಿಗುತ್ತಿದೆ. ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಪಕ್ಷ ಹೆಚ್ಚಿನ ಆದ್ಯತೆ ನೀಡಿದೆ’ ಎಂದರು.
‘ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಅಧಿಕಾರದ ಅವಧಿಯಲ್ಲಿ ತಂಬಾಕು ಬೆಳೆಗಾರರ ಪರವಾಗಿ ಹಲವು ವಿಷಯಗಳಿಗೆ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ಅವರ ಆಹ್ವಾನದ ಮೇರೆಗೆ ಇಂದು ರೈತರ ಸಮಸ್ಯೆ ಆಲಿಸಿದ್ದೇನೆ’ ಎಂದರು.
ತಂಬಾಕು ಹರಾಜು ಮಾರುಕಟ್ಟೆ ಅಧೀಕ್ಷಕ ಸಿ.ಆರ್.ಮೀನಾ, ಸಿದ್ದರಾಜು, ಪ್ರಭಾಕರ್, ಕಾಫ್ ಸಮಿತಿ ಸದಸ್ಯೆ ಕೆ.ಎನ್. ಕಲ್ಪನಾ ಬೊಮ್ಮೇಗೌಡ, ಕಾಂಗ್ರೆಸ್ ತಾಲ್ಲೂಕು ಕಾರ್ಯಾಧ್ಯಕ್ಷ ದೇವರಾಜ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ರಾಘು, ಕುಮಾರ್, ಚಿನ್ನವೀರಯ್ಯ, ದರ್ಶನ್, ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣೇಗೌಡ, ಬೊಮ್ಮೇಗೌಡ, ಸೋಮು, ಶೃಂಗಾರ್, ಮಧು, ವಿನಯ್, ಅರುಣ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.