ADVERTISEMENT

ಮೈಸೂರು | ಭೂಪರಿಹಾರ: ತ್ವರಿತ ಕ್ರಮಕ್ಕೆ ಸೂಚನೆ

ಎಸ್‌ಸಿ/ಎಸ್‌ಟಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:43 IST
Last Updated 21 ನವೆಂಬರ್ 2025, 5:43 IST
ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿ.ಪಂ. ಸಿಇಒ ಯುಕೇಶ್‌ ಕುಮಾರ್, ವಿಧಾನ ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಹಾಗೂ ಅಧಿಕಾರಿಗಳು ಪಾಲ್ಗೊಂಡರು
ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿ.ಪಂ. ಸಿಇಒ ಯುಕೇಶ್‌ ಕುಮಾರ್, ವಿಧಾನ ಪರಿಷತ್‌ ಸದಸ್ಯ ಸಿ.ಎನ್. ಮಂಜೇಗೌಡ ಹಾಗೂ ಅಧಿಕಾರಿಗಳು ಪಾಲ್ಗೊಂಡರು   

ಮೈಸೂರು: ‘ಎಲೆ ತೋಟದಲ್ಲಿ ಜಮೀನು ಕಳೆದುಕೊಂಡವರಿಗೆ ಭೂ ಪರಿಹಾರ ಸಂಬಂಧ ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಚಿಕ್ಕಕಾಟೂರು ಗ್ರಾಮದ ಸ.ನಂ 60ರಲ್ಲಿ ಜಮೀನನ್ನು ಡಿಸೆಂಬರ್ ಅಂತ್ಯದೊಳಗೆ ಅಳತೆ ಕಾರ್ಯನಿರ್ವಹಿಸಿ ನಕ್ಷೆಯೊಂದಿಗೆ ವಿವರವಾದ ವರದಿ ನೀಡಿ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಬಾಬು ಜಗಜೀವನ್ ರಾಂ ಭವನದಲ್ಲಿ ಗುರುವಾರ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ನಡೆದ ಬಹಳಷ್ಟು ಸಭೆಗಳಲ್ಲಿ ಎಲೆ ತೋಟದ ಜಮೀನು ಕಳೆದುಕೊಂಡವರ ಬಗ್ಗೆ ಚರ್ಚೆಯಾಗುತ್ತಿದ್ದು, ಅಧಿಕಾರಿಗಳು ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದರು.

‘ಪೊಲೀಸ್ ಇಲಾಖೆಯಲ್ಲಿ ನಡೆಯುವ ಪರಿಶಿಷ್ಟ ಜಾತಿ ಪಂಗಡದ ಕುಂದು ಕೊರತೆ ಸಭೆಗಳಿಗೆ ಜಿಲ್ಲಾ ಪರಿಶಿಷ್ಟ/ ಪಂಗಡದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ 6 ಸದಸ್ಯರನ್ನು ಕಡ್ಡಾಯವಾಗಿ ಆಹ್ವಾನಿಸಬೇಕು’ ಎಂದರು.

‘ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಆಶ್ರಮ ಶಾಲೆಗಳಿಗೆ ದಿಢೀರ್ ಭೇಟಿ ಪರಿಶೀಲನೆ ನಡೆಸಬೇಕು. ಇ ಹಾಜರಾತಿ ಅಳವಡಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ’ ಎಂದು ತಿಳಿಸಿದರು.

ಎಸ್‌ಸಿಎಸ್‌ಪಿ/ ಟಿಎಸ್‌ಪಿ ಅನುದಾನದಲ್ಲಿ ನಿರ್ಮಿಸಿರುವ ಸಮುದಾಯ ಭವನಗಳಿಗೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸಮುದಾಯ ಭವನಗಳ ನಿರ್ವಹಣಾ ಸಮಿತಿಯನ್ನು ರಚಿಸಿ ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ತಿಳಿಸಿದರು.

ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿನ ಅಂಬೇಡ್ಕರ್ ಭವನ ನಿರ್ಮಾಣ ಯೋಜನೆಗೆ ಸರ್ಕಾರ ₹1 ಕೋಟಿ ಅನುದಾನ ನಿಗದಿಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ‘2021-22ನೇ ಸಾಲಿನಲ್ಲಿ ಟಿಎಸ್‌ಪಿ ಫಲಾನುಭವಿಯೊಬ್ಬರ ಜಮೀನಿನ ಕೊಳವೆಬಾವಿ ಕೊರೆಯಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂಬುದು ವಿಪರ್ಯಾಸ. ಈ ವಿಷಯವನ್ನು ರಾಜ್ಯಮಟ್ಟದ ಸಮಿತಿಯ ಗಮನಕ್ಕೆ ತಂದು ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಜಾಗೃತ ಮತ್ತು ಉಸ್ತುವರಿ ಸಮಿತಿ ಸದಸ್ಯರಾದ ಚಿಕ್ಕಜವರಯ್ಯ, ಎಸ್.ಟಿ.ರವಿಕುಮಾರ್, ವೇಣುಗೋಪಲ್, ಪಾರ್ವತಮ್ಮ, ಮಹದೇವ್, ಬಸವರಾಜು ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆಗಳಲ್ಲೇ ಅರ್ಜಿ ಸಲ್ಲಿಸಲು ಸೂಚನೆ ಮೈಸೂರು: ‘ಪೌರಕಾರ್ಮಿಕರು ವಸತಿ ಯೋಜನೆಗಳಿಗೆ ಮೊದಲು ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿ ಅಲ್ಲಿ ತೊಂದರೆ ಇದ್ದಲ್ಲಿ ಮಾತ್ರ ಸಮಿತಿಗೆ ಅರ್ಜಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು. ಬಾಬು ಜಗಜೀವನ್ ರಾಂ ಭವನದಲ್ಲಿ ಗುರುವಾರ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೌರ ಕಾರ್ಮಿಕರಿಗೆ ಹೊರಗುತ್ತಿಗೆ ಆಧಾರದ ಮೇಲೆ ವೇತನ ಪಾವತಿಸಿದ ನಂತರ ಅವರಿಗೆ ಇಎಸ್ಐ ಹಾಗೂ ಪಿಎಫ್ ಪಾವತಿಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು. ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿಗೆ ಜಿಲ್ಲೆಯಾದ್ಯಂತ ನಗರ ವ್ಯಾಪ್ತಿಯಲ್ಲಿ 20 ವಸತಿ ಹಾಗೂ ಗ್ರಾಮಾಂತರ ವ್ಯಪ್ತಿಯಲ್ಲಿ 1016 ವಸತಿಗಳನ್ನು ನಿರ್ಮಾಣ ಮಾಡಿಕೊಡಲು ಗುರಿ ನಿಗದಿಯಾಗಿದ್ದು ಈ ಕುರಿತಂತೆ ತಾಲ್ಲೂಕುವಾರು ಪ್ರಗತಿಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು. ಜಿ.ಪಂ ಸಿಇಒ ಯುಕೇಶ್‌ಕುಮಾರ್ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಸಮಿತಿ ಸದಸ್ಯರಾದ ಡಿ.ಆರ್.ರಾಜು ನಂಜಪ್ಪ ಮಂಜುನಾಥ್ ವಸಂತಕುಮಾರಿ ದೀಪಾ ಚಲುವರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.