ಸಾಂದರ್ಭಿಕ ಚಿತ್ರ
ಮೈಸೂರು: ಜೀವಂತವಿದ್ದ ವ್ಯಕ್ತಿಯನ್ನು, ನಿಧನ ಹೊಂದಿದ್ದಾರೆಂದು ದಾಖಲೆಗಳಲ್ಲಿ ಉಲ್ಲೇಖಿಸಿ, ಜಮೀನಿನ ಯಜಮಾನನಿಗೆ ಸಂಬಂಧವೇ ಇಲ್ಲದವರ ಹೆಸರಿಗೆ ಪೌತಿ ಖಾತೆ ಮಾಡಿ ವಂಚಿಸುತ್ತಿರುವ ಪ್ರಕರಣ ಕಂಡುಬಂದಿದೆ.
ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. ‘ಹೊರವಲಯದ ಕೆಲವು ಕಡೆ ಬಡವರು ಹಾಗೂ ಅವಿದ್ಯಾವಂತರ ಜಮೀನನ್ನು ಯಜಮಾನನಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ, ನಂತರ ಖರೀದಿದಾರರಿಗೆ ಮಾರುತ್ತಿದ್ದಾರೆ’ ಎಂಬ ದೂರು ಕೇಳಿಬಂದಿದೆ.
ತಾಲ್ಲೂಕಿನ ಇಲವಾಲ ಹೋಬಳಿಯ ಹುಯಿಲಾಳು ಗ್ರಾಮಕ್ಕೆ ಸೇರಿದ ಸರ್ವೆ ನಂ. 43:14 ‘ಎ’ನಲ್ಲಿ ಚೆಲುವಯ್ಯ ಅವರಿಗೆ ಸೇರಿದ 2.03 ಎಕರೆ ಜಮೀನಿದೆ. ಇಲ್ಲಿ ಅವರ ಕುಟುಂಬವು ಮಾವಿನ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದೆ. ಈಚೆಗೆ ಸಾಲದ ವಿಚಾರವಾಗಿ ಬ್ಯಾಂಕ್‌ಗೆ ತೆರಳಿದ್ದಾಗ ಅವರ ಜಮೀನಿನ ಕ್ರಯಪತ್ರವು ವಿಜಯನಗರದ ನಿವಾಸಿ ಪ್ರೀತಿ ಅವರ ಹೆಸರಿಗೆ ಬದಲಾಗಿರುವುದು ತಿಳಿಯುತ್ತದೆ.
ಪರಿಶೀಲಿಸಿದಾಗ:
ಚೆಲುವಯ್ಯ ಗ್ರಾಮ ಪಂಚಾಯಿತಿ ಹಾಗೂ ಮೈಸೂರು ಪಶ್ಚಿಮ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ತೆರಳಿ ದಾಖಲೆ ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯವಾಗುತ್ತದೆ. ಏಕೆಂದರೆ, ದಾಖಲೆ ಪ್ರಕಾರ ಚೆಲುವಯ್ಯ ಸತ್ತು ಹೋಗಿದ್ದರು. ಹುಯಿಲಾಳು ಗ್ರಾಮದ ಗೌರಮ್ಮ, ವರನಂದಮ್ಮ, ತೊಳಸೀರಮ್ಮ, ಕಲ್ಯಾಣಮ್ಮ, ಸ್ವಾಮಯ್ಯ, ಲಕ್ಷ್ಮಮ್ಮ ಎಂಬವರ ಹೆಸರಿಗೆ ಪೌತಿ ಖಾತೆ ಮಾಡಲಾಗಿತ್ತು. ಅದನ್ನು ಅವರು ₹1.25 ಕೋಟಿಗೆ ಪ್ರೀತಿ ಅವರಿಗೆ ಮಾರಿದ್ದಾಗಿ ದಾಖಲೆಯಲ್ಲಿ ಉಲ್ಲೇಖಿಸಲಾಗಿತ್ತು.
ಇಷ್ಟೂ ಜನರು ಯಾರೆಂದು ತಿಳಿಯದ ಚೆಲುವಯ್ಯ ಪೊಲೀಸ್ ಠಾಣೆ, ಸರ್ಕಾರಿ ಅಧಿಕಾರಿಗಳ ಕಚೇರಿ ಅಳೆದರೂ ಪ್ರಯೋಜನವಾಗಿಲ್ಲ. ಯಾರೂ ದೂರು ಸ್ವೀಕರಿಸಲಿಲ್ಲ. ವಕೀಲರ ಮೂಲಕ ಎ.ಸಿ ಕೋರ್ಟ್‌ಗೆ ದೂರು ಸಲ್ಲಿಸಿದಾಗ, ಪೌತಿ ಖಾತೆ ಮಾಡಿಸಿಕೊಂಡವರನ್ನು ಕರೆಸಲಾಯಿತು.
ತೊಂದರೆ ಆಗುತ್ತದೆಂದು:
ಅಲ್ಲಿ ಮಹಿಳೆಯರು ತಪ್ಪೊಪ್ಪಿಕೊಂಡರು, ಚೆಲುವಯ್ಯ ಹೆಸರಿಗೆ ಖಾತೆ ಮಾಡಲಾಯಿತು. ಆದರೆ, ಸಮಸ್ಯೆ ಅಲ್ಲಿಗೆ ನಿಲ್ಲಲಿಲ್ಲ. ಪ್ರೀತಿ ಅವರ ಹೆಸರಿಗೆ ಜಾಗ ನೋಂದಣಿ ಆಗಿರುವುದರಿಂದ, ಅವರು ಅದನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಬ್ಯಾಂಕ್ ಸಾಲಕ್ಕೆ ಹಾಗೂ ಇತರ ಸೌಲಭ್ಯ ದೊರೆಯಲು ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಯಲ್ಲಿದ್ದ ಪ್ರೀತಿ ಅವರ ವಿಳಾಸ ಹುಡುಕಿ ಹೊರಟ ಚೆಲುವಯ್ಯ ನಿರಾಸೆ ಅನುಭವಿಸಿದ್ದು, ಅಲ್ಲಿ ಆ ಹೆಸರಿನವರು ಇರಲಿಲ್ಲ. ‘ಇಲವಾಲ ಠಾಣೆಗೆ ಅನೇಕ ಬಾರಿ ಓಡಾಡಿದರೂ ಪ್ರಯೋಜನವಾಗಿಲ್ಲ. ದಾಖಲೆ ಸೃಷ್ಟಿಸಿದವರನ್ನು ಕರೆಸಿ, ನೋಂದಣಿ ಹಿಂಪಡೆಸಬೇಕಿದೆ’ ಎಂದು ಚೆಲುವಯ್ಯ ಅಳವತ್ತುಕೊಂಡಿದ್ದಾರೆ. ಸುತ್ತಲಿನ ಹಳ್ಳಿಯಲ್ಲಿ ಇದೇ ಸಮಸ್ಯೆಯುಳ್ಳ ಜಮೀನುಗಳಿವೆ. ಆದರೆ, ಜೀವ ಭಯದಿಂದ ಅವರ‍್ಯಾರು ಮುಂದೆ ಬರುತ್ತಿಲ್ಲ.
‘ಬದುಕಿದ್ದ ವ್ಯಕ್ತಿಯ ಹೆಸರಿನಲ್ಲೇ ಪೌತಿ ಖಾತೆ ಮಾಡಿದರೂ ಅಧಿಕಾರಿಗಳ ವಿರುದ್ಧ ಕ್ರಮವಾಗಿಲ್ಲ. ದಾಖಲೆ ಮಾಡಿಸಿಕೊಂಡ ಮಹಿಳೆಯರು ಹಾಗೂ ಅವರಿಂದ ಜಾಗ ಖರೀದಿಸಿದವರು ಸುಳ್ಳು ವಿಳಾಸ ನೀಡಿದ್ದಾರೆ. ಅವಿದ್ಯಾವಂತರನ್ನು ಗುರಿಯಾಗಿಸಿ ನಡೆಸುತ್ತಿರುವ ಈ ರೀತಿಯ ದಂಧೆಗಳು ಕೊನೆಯಾಗಬೇಕು. ಸರ್ಕಾರ ಇದರ ಬಗ್ಗೆ ಕ್ರಮ ವಹಿಸಬೇಕು’ ಎಂದು ವಕೀಲ ಮಂಜುನಾಥ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.