
ಎಚ್.ಡಿ.ಕೋಟೆ: ಆನಗಟ್ಟಿಯಿಂದ ರಾಮೇನಹಳ್ಳಿಯ ಸಂಪರ್ಕ ರಸ್ತೆ ಡಾಂಬರೀಕರಣ ಕಾಮಗಾರಿಗೆ ₹ 4ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಬೀಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿಯಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮತ್ತು 143 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
‘ನಾನು ಶಾಸಕನಾದ ಮೇಲೆ ರಾಮೇನಹಳ್ಳಿಗೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು, ₹33 ಲಕ್ಷ ವೆಚ್ಚದಲ್ಲಿ ಮೂರು ಶಾಲಾ ಕೊಠಡಿಗಳ ನಿರ್ಮಾಣಗೊಂಡಿದ್ದು, ಗ್ರಾಮಕ್ಕೆ ಜೆಜೆಎಂನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭವನಗಳ ನಿರ್ಮಾಣಕ್ಕೆ ಉಳಿಕೆ ಹಣ ಮಂಜೂರು ಮಾಡಲಾಗಿತ್ತು, ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಹಣ ಮಂಜೂರು ಮಾಡಲಾಗುವುದು’ ಎಂದರು.
‘ಬೀಚನಹಳ್ಳಿಯ ಕಬಿನಿ ಜಲಾಶಯದಿಂದ ಮುಳುಗಡೆಯಾಗಿ ಪುನರ್ವಸತಿ ಗ್ರಾಮವಾಗಿ ರಾಮೇನಹಳ್ಳಿ ಸ್ಥಾಪನೆಯಾದ ಬಳಿಕ ಇಲ್ಲಿ ನೆಲೆಸಿದ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಗ್ರಾಮಸ್ಥರಿಂದ ಬಂದ ಮನವಿಗಳನ್ನು ಆಯಾ ಇಲಾಖೆಗೆ ಪರಿಹರಿಸುವಂತೆ ವರ್ಗಾಯಿಸಲಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗಳು ಬಗೆಹರಿಯದಿದ್ದರೆ, ಆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ನಾಗನಾಯಕ, ಉಪಾಧ್ಯಕ್ಷ ಬಸವರಾಜನಾಯಕ, ಸದಸ್ಯರಾದ ಭಾಸ್ಕರ್, ಸುಬ್ರಮಣಿ, ಸೀತಾ ಬಸವಣ್ಣ, ನಂದಿನಿ ರಮೇಶ್, ಗೌರಮ್ಮ ಗೋವಿಂದರಾಜು, ಆರ್.ವಿ.ಉಮೇಶ್, ಮಂಜುಳಾ ಚಿಕ್ಕನಾಯಕ, ಪಾಪೇಗೌಡ, ಮಹದೇವಮ್ಮ ಗೋಪಾಲಶೆಟ್ಟಿ, ಎನ್.ಸಿ. ಪ್ರಕಾಶ್, ಶಿವಮ್ಮ ಶಿವನಂಜು, ಲಕ್ಷ್ಮೀ ರಮೇಶ್, ಎಂ.ಎಸ್. ರವಿ, ಎಂ.ಎಸ್. ಲೋಕೇಶ್, ತಹಶೀಲ್ದಾರ್ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಇಒ ಧರಣೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ. ಪ್ರಸಾದ್, ಬಿಇಒ ರಾಜು, ಅಬಕಾರಿ ಶಿವರಾಜು, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿ ರಮೇಶ್, ಪರಿಶಿಷ್ಟ ವರ್ಗಗಳ ಇಲಾಖೆಯ ಮಹೇಶ್, ಹಿಂದುಳಿದ ವರ್ಗಗಳ ಇಲಾಖೆಯ ಶಶಿಕಲಾ, ನೀರಾವರಿ ಇಲಾಖೆಯ ಎಇಇಗಳಾದ ಗಣೇಶ್, ನಟಶೇಖರಮೂರ್ತಿ, ಕಾರ್ಮಿಕ ನಿರೀಕ್ಷಕಿ ಪಿ. ಹರ್ಷಿತಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಾದೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ, ಪಿಡಿಒ ಚನ್ನಪ್ಪ, ಸಿಡಿಪಿಒ ದೀಪಾ, ರೇಣುಕಾ, ಹೇಮಂತ್, ಸಿದ್ದರಾಮು, ಮಣಿ, ಮಂಜುಶೆಟ್ಟಿ, ಗೋಪಾಲ್, ಪರಶಿವ, ವಿ.ಎ.ಯೋಗೇಶ್, ಗ್ರಾಮದ ಮುಖಂಡರಾದ ಜವರನಾಯಕ, ಬಸವರಾಜಶೆಟ್ಟಿ, ಜಕ್ಕಳ್ಳಿ ಮಹೇಶ್, ನವೀನ್ ಇದ್ದರು.
Cut-off box - ‘ಗ್ರಾಮಸ್ಥರಿಂದ ಮನವಿಗಳ ಸುರಿಮಳೆ’ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು. ‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಆನಗಟ್ಟಿಯಿಂದ ರಾಮೇನಹಳ್ಳಿಯವರೆಗೆ ಡಾಂಬರೀಕರಣದ ಅವಶ್ಯಕತೆ ಇದ್ದು ವಾಲ್ಮೀಕಿ ಭವನ ಅರ್ಧದಷ್ಟು ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿಗೆ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು. ಗ್ರಾಮದ ಸಮೀಪದಲ್ಲಿ ರಾಮೇನಹಳ್ಳಿ ಹಾಡಿಗೆ ಸಿಮೆಂಟ್ ರಸ್ತೆ ಹಾಗೂ ರಂಗಮಂದಿರ ಅವಶ್ಯಕತೆ ಇದೆ. ಶಾಲೆಯಲ್ಲಿ ಮಕ್ಕಳು ಕುಳಿತು ಊಟ ಮಾಡಲು ಸ್ಥಳವಕಾಶದ ಕೊರತೆ ಇದ್ದು ಊಟದ ಕೊಠಡಿಯನ್ನು ನಿರ್ಮಿಸಿಕೊಡಬೇಕು ಅಂಬೇಡ್ಕರ್ ಭವನಕ್ಕೆ ಕಾಂಪೌಂಡ್ ನಿರ್ಮಾಣ ಗ್ರಾಮದ ಸರ್ವೇ ನಂ 162ರಲ್ಲಿ 200 ಎಕರೆ ದುರಸ್ತಿಯಾಗಿಲ್ಲ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಳೆ ಹೊಸೂರು ಬೀಚನಹಳ್ಳಿ ಗಣೇಶನಗುಡಿ ನೇರಳೆ ಸುಣ್ಣಕಲ್ಲುಮುಂಟಿ ಮತ್ತು ಮಾಗುಡಿಲು ಗ್ರಾಮಗಳಲ್ಲಿಯೂ ಜನಸ್ಪಂದನ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.