
ಮೈಸೂರು: ‘10 ವರ್ಷದಲ್ಲಿ ಸಂಸ್ಕೃತಕ್ಕೆ ಕೇಂದ್ರ ಸರ್ಕಾರವು ನೀಡಿರುವ ಅನುದಾನ ₹ 2,532 ಕೋಟಿ ಆಗಿದ್ದರೆ, ಕನ್ನಡಕ್ಕೆ ₹ 34 ಕೋಟಿಯಷ್ಟೇ. ಇದು ಪ್ರಜಾಪ್ರಭುತ್ವವೇ, ಕನ್ನಡಕ್ಕೇಕೆ ಈ ಅನ್ಯಾಯ?’ ಎಂದು ವಿಮರ್ಶಕ ರಹಮತ್ ತರೀಕೆರೆ ಕೇಳಿದರು.
ಇಲ್ಲಿನ ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನದಲ್ಲಿ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ವು ಸೋಮವಾರ ಆಯೋಜಿಸಿದ್ದ 52 ವಾರಗಳ ‘ಶಾಸ್ತ್ರೀಯ ಕನ್ನಡ ನಿತ್ಯೋತ್ಸವ ಅಂತರ್ಜಾಲ ಉಪನ್ಯಾಸ ಸರಣಿಯ’ ಸಮಾರೋಪದಲ್ಲಿ ಮುಖ್ಯ ಭಾಷಣ ಮಾಡಿದರು.
‘ಉರ್ದುಗೆ ₹ 837 ಕೋಟಿ, ಹಿಂದಿಗೆ ₹ 426 ಕೋಟಿ, ತಮಿಳು ₹ 113 ಕೋಟಿ ನೀಡಲಾಗಿದೆ. ಕನ್ನಡ ಭಾರತದ ಭಾಗ ಅಲ್ಲವೋ ಎಂಬ ಪ್ರಶ್ನೆಯನ್ನು ಒಕ್ಕೂಟ ಸರ್ಕಾರಕ್ಕೆ ಕೇಳಬೇಕಿದೆ’ ಎಂದರು.
‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ಕೊಡಬೇಕಿದೆ. ರಾಜ್ಯಾಂಗವೇ ಕೊಟ್ಟಿರುವ ಹಕ್ಕಿದು. ಸ್ವಾಯತ್ತ ನಿರ್ದೇಶಕರನ್ನು ಹೊಂದಿದರೆ ಕನ್ನಡ ಮತ್ತಷ್ಟು ಅಭಿವೃದ್ಧಿ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.
ಬಹುತ್ವದ ಉಳಿವು ಅಗತ್ಯ:
‘ಬಹುತ್ವದಲ್ಲಿಯೇ ಭಾರತದ ಅಸ್ತಿತ್ವವಿದೆ ಎಂಬುದು ಆಳುವವರಿಗೆ ಅರ್ಥವಾಗಬೇಕಿದೆ. ನಮ್ಮ ಕೆಲಸಗಳಲ್ಲೂ ಬಹುತ್ವ, ಪ್ರಾದೇಶಿಕ ಅಸ್ಮಿತೆ, ಸಂಸ್ಕೃತಿಯನ್ನು ಒಳಗೊಳ್ಳಬೇಕಿದೆ’ ಎಂದು ರಹಮತ್ ಪ್ರತಿಪಾದಿಸಿದರು.
‘ಅತಿಯಾದ ಕೇಂದ್ರೀಕೃತ ವ್ಯವಸ್ಥೆಯು ಬಹುತ್ವ ಭಾರತದ ಸಾಂಸ್ಕೃತಿಕ ಪ್ರಜಾಪ್ರಭುತ್ವಕ್ಕೆ ದೊಡ್ಡ ಸಮಸ್ಯೆಯನ್ನು ಉಂಟು ಮಾಡಲಿದೆ. ಏಕಭಾಷೆ, ಏಕ ಸಂಸ್ಕೃತಿ, ಏಕ ಪಕ್ಷ, ಏಕ ಧರ್ಮ ಮೊದಲಾದ ಸರ್ವಾಧಿಕಾರಿ ಪದಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದು, ಹೀಗಾದರೆ ಭಾರತವು ಕುಸಿದು ಹೋಗುತ್ತದೆ. ಎಲ್ಲರನ್ನೂ ಮಾಡುವ ಏಕೀಕೃತ ವ್ಯವಸ್ಥೆ ಇದಲ್ಲ. ಇದರಲ್ಲಿ ವಿಭಜಕ ಮನಸ್ಥಿತಿಯಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಕುವೆಂಪು ಅವರು 24ನೇ ವಯಸ್ಸಿನಲ್ಲಿಯೇ ನಾಡಗೀತೆಯನ್ನು ಬರೆದಾಗ ಕನ್ನಡ ಮಾತೆಯನ್ನು ಭಾರತ ಮಾತೆಯ ತನುಜಾತೆ ಎಂದರು. ಮಗಳ ಸ್ವಾತಂತ್ರ್ಯವನ್ನು ತಾಯಿ ಕಿತ್ತುಕೊಳ್ಳುವಂತಿಲ್ಲ ಎಂದಿದ್ದರು. ಸಂವಿಧಾನದ ಒಕ್ಕೂಟ ತತ್ವವನ್ನು 20 ವರ್ಷದ ಹಿಂದೆಯೇ ಹೇಳಿದ್ದರು. ಪ್ರಾದೇಶಿಕ ಭಾಷೆಗಳ ಅಸ್ತಿತ್ವದಲ್ಲಿಯೇ ದೇಶದ ಏಕತೆಯೂ ನೆಲೆಗೊಂಡಿದೆ. ಆಂಧ್ರಪ್ರದೇಶ, ಒಡಿಶಾ ಹಾಗೂ ಕರ್ನಾಟಕ ರಾಜ್ಯಗಳ ಜನರು ಒಂದೇ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಹಾಗೂ ರಾಜ್ಯದ ಏಕೀಕರಣಕ್ಕೆ ಹೋರಾಡಿದ್ದರು’ ಎಂದು ಉದಾಹರಿಸಿದರು.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಉಪನಿರ್ದೇಶಕ ಪ್ರೊ.ಧರ್ಮೇಶ್ ಫರ್ನಾಂಡೀಸ್, ಸಂಯೋಜಕ ಪ್ರೊ.ಎಲ್.ಆರ್.ಪ್ರೇಮಕುಮಾರ್, ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಸಂಶೋಧಕರಾದ ಪ್ರೊ.ಆರ್.ಚಲಪತಿ, ಮಾಲಿನಿ ಎನ್. ಅಭ್ಯಂಕರ್ ಪಾಲ್ಗೊಂಡಿದ್ದರು.
ಸಂಸ್ಕೃತಕ್ಕೆ ಕೇಂದ್ರದಿಂದ ಹೆಚ್ಚು ಅನುದಾನ | ಸಂವಿಧಾನದ ಒಕ್ಕೂಟ ತತ್ವ ಪಾಲಿಸಬೇಕು | ಬಹುತ್ವ ಪಾಲಿಸದಿದ್ದರೆ ದೇಶ ಕುಸಿಯಲಿದೆ
‘ಡಿಜಿಟಲೀಕರಣ ಆಗಲಿ’
‘ಎಲ್ಲ ಹಳಗನ್ನಡ ಸಾಹಿತ್ಯ ಡಿಜಿಟಲೀಕರಣಗೊಳ್ಳಬೇಕು. ಮುದ್ರಣದಿಂದ ಆನ್‌ಲೈನ್ ಕಡೆ ಹೋಗಬೇಕಿದೆ. ಏಕಶಿಸ್ತೀಯ ಅಧ್ಯಯನ ಕಡೆಯಿಂದ ಬಹುಶಿಸ್ತೀಯ ಅಧ್ಯಯನ ಆಗಬೇಕಿದೆ. ಕನ್ನಡವೇ ಬಹುಶಿಸ್ತೀಯ ನೆಲೆಯದ್ದು. ಉತ್ತರ ಕರ್ನಾಟಕದ ಬನಶಂಕರಿ ಜಾತ್ರೆಯನ್ನು ಧಾರ್ಮಿಕವಾಗಿ ಅಧ್ಯಯನ ಮಾಡಲಾಗದು ರಂಗಭೂಮಿ ರಾಜಕೀಯ ಸಾಮಾಜಿಕ ಸೇರಿದಂತೆ ಎಲ್ಲ ಆಯಾಮಗಳೂ ಇವೆ’ ಎಂದು ರಹಮತ್ ತರೀಕೆರೆ ಹೇಳಿದರು. ‘ಶಾಸ್ತ್ರೀಯ ಕನ್ನಡ ಕೇಂದ್ರದ ಅಧ್ಯಯನಗಳು ಗತಕಾಲದ ಕನ್ನಡಕ್ಕೆ ಸೀಮಿತವಾಗಿದೆ. ಬಿಎಂಶ್ರೀ ಕುವೆಂಪು ಅವರ ರಾಮಾಯಣ ದರ್ಶನಂ ಕಾಲದ ಕನ್ನಡದ ಅಧ್ಯಯನಗಳೂ ಆಗಬೇಕು. ಭಾಷಾ ಅಧ್ಯಯನವೆಂಬ ಗಡಿಗಳನ್ನು ಒಡೆಯಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.