ADVERTISEMENT

ಮೈಸೂರಿನ ಲ್ಯಾನ್ಸ್‌ಡೌನ್‌, ದೇವರಾಜ ಮಾರುಕಟ್ಟೆ ಸಂರಕ್ಷಣೆ: ಸಹಿ ಸಂಗ್ರಹ ಅಭಿಯಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 9:45 IST
Last Updated 20 ಜುಲೈ 2021, 9:45 IST
‘ಸೇವ್‌ ಹೆರಿಟೇಜ್ ಅಭಿಯಾನ’ದ ವತಿಯಿಂದ ಲ್ಯಾನ್ಸ್‌ಡೌನ್‌ ಕಟ್ಟಡದ ಮುಂಭಾಗ ಮಂಗಳವಾರ ಹಮ್ಮಿಕೊಂಡಿದ್ದ ‘ಸಹಿ ಸಂಗ್ರಹ’ ಅಭಿಯಾನಕ್ಕೆ ಪ್ರೊ.ಎನ್‌.ಎಸ್‌.ರಂಗರಾಜು ಚಾಲನೆ ನೀಡಿದರು. ಕೆ.ಎಂ.ನಿಶಾಂತ್‌, ಎಂ.ಎನ್ ಧನುಷ್, ಸುದರ್ಶನ್ ಇದ್ದರು
‘ಸೇವ್‌ ಹೆರಿಟೇಜ್ ಅಭಿಯಾನ’ದ ವತಿಯಿಂದ ಲ್ಯಾನ್ಸ್‌ಡೌನ್‌ ಕಟ್ಟಡದ ಮುಂಭಾಗ ಮಂಗಳವಾರ ಹಮ್ಮಿಕೊಂಡಿದ್ದ ‘ಸಹಿ ಸಂಗ್ರಹ’ ಅಭಿಯಾನಕ್ಕೆ ಪ್ರೊ.ಎನ್‌.ಎಸ್‌.ರಂಗರಾಜು ಚಾಲನೆ ನೀಡಿದರು. ಕೆ.ಎಂ.ನಿಶಾಂತ್‌, ಎಂ.ಎನ್ ಧನುಷ್, ಸುದರ್ಶನ್ ಇದ್ದರು   

ಮೈಸೂರು: ಪಾರಂಪರಿಕ ಕಟ್ಟಡಗಳಾದ ‘ಲ್ಯಾನ್ಸ್‌ಡೌನ್‌ ಕಟ್ಟಡ’ ಹಾಗೂ ‘ದೇವರಾಜ ಮಾರುಕಟ್ಟೆ’ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕು ಎಂಬ ಆಶಯದೊಂದಿಗೆ ‘ಸೇವ್‌ ಹೆರಿಟೇಜ್ ಅಭಿಯಾನ’ದ ವತಿಯಿಂದ ಲ್ಯಾನ್ಸ್‌ಡೌನ್‌ ಕಟ್ಟಡದ ಮುಂಭಾಗ ಮಂಗಳವಾರ ಹಮ್ಮಿಕೊಂಡಿದ್ದ ‘ಸಹಿ ಸಂಗ್ರಹ’ ಅಭಿಯಾನಕ್ಕೆ ಮೈಸೂರು ನಗರ ಪಾರಂಪರಿಕ ಸಮಿತಿ ಸದಸ್ಯ ಪ್ರೊ.ಎನ್‌.ಎಸ್‌.ರಂಗರಾಜು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಲ್ಯಾನ್ಸ್‌ಡೌನ್‌ ಹಾಗೂ ದೇವರಾಜ ಮಾರುಕಟ್ಟೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವುದಾಗಿ ನಗರಾಭಿವೃದ್ಧಿ ಸಚಿವರು ಹೇಳಿಕೆ ಕೊಟ್ಟಿರುವುದು ದುರಂತ. ದೇವರಾಜ ಮಾರುಕಟ್ಟೆ ಕಟ್ಟಡವನ್ನು ಕೆಡವದಂತೆ ಅಲ್ಲಿನ ಅಂಗಡಿ ಮಾಲೀಕರು ಕೋರ್ಟ್‌ ಮೊರೆ ಹೋಗಿದ್ದಾರೆ. ಜತೆಗೆ ಸಾರ್ವಜನಿಕ ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಎರಡೂ ಪ್ರಕರಣಗಳು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಪೀಠದ ಎದುರು ಇವೆ. ಹೀಗಾಗಿ, ನಗರಾಭಿವೃದ್ಧಿ ಸಚಿವರು ಇಂತಹ ಹೇಳಿಕೆ ಕೊಡುವ ಮುನ್ನ ಈ ಬಗ್ಗೆ ಮಾಹಿತಿ ಪಡೆಯಬೇಕಿತ್ತು’ ಎಂದರು.

‘2004ರಲ್ಲಿ ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ಮೈಸೂರನ್ನು ಪಾರಂಪರಿಕ ನಗರವೆಂದು ಘೋಷಿಸಲಾಯಿತು. ಪರಂಪರೆ ಇಲಾಖೆಯನ್ನು ಸ್ಥಾಪಿಸಿ, ಅದನ್ನು ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿತ್ತು. ವಿಜಯ್‌ ಭಾಸ್ಕರ್‌ ಅವರನ್ನು ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಅವರು ಮೈಸೂರಿನಲ್ಲಿ ಹುದ್ದೆ ವಹಿಸಿಕೊಂಡ ಬಳಿಕ ಪಾರಂಪರಿಕ ನಡಿಗೆಯನ್ನು ಆರಂಭಿಸಿದ್ದರು. ಆಯುಕ್ತರು ಪಾರಂಪರಿಕ ಕಟ್ಟಡ ಸಮಿತಿಯನ್ನು ರಚಿಸಿ, ಪಾರಂಪರಿಕ ಕಟ್ಟಡಗಳನ್ನು ಗುರುತಿಸಲು ಅವಕಾಶ ಮಾಡಿಕೊಟ್ಟರು’ ಎಂದು ಮಾಹಿತಿ ನೀಡಿದರು.

ADVERTISEMENT

‘2004ರಿಂದ ನಾನು ಪಾರಂಪರಿಕ ತಜ್ಞರ ಸಮಿತಿಯಲ್ಲಿ ಸದಸ್ಯನಾಗಿದ್ದೇನೆ. ನಾವು ಮೈಸೂರಿನಲ್ಲಿ 234 ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ನೀಡಿದ್ದೆವು. ಸರ್ಕಾರವು 198 ಕಟ್ಟಡಗಳನ್ನು ಮಾತ್ರ ಪಾರಂಪರಿಕ ಕಟ್ಟಡಗಳೆಂದು ಘೋಷಿಸಿತು. ಈ ಕಟ್ಟಡಗಳನ್ನು ಎ, ಬಿ, ಸಿ, ಡಿ, ಇ ಎಂಬ ಗ್ರೇಡ್‌ ಪ್ರಕಾರ ವಿಂಗಡಿಸಲಾಗಿದೆ. ಲ್ಯಾನ್ಸ್‌ಡೌನ್‌ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳು ಎ ಗ್ರೇಡ್‌ಗೆ ಸೇರುತ್ತವೆ’ ಎಂದರು.

‘ಪರಂಪರೆ ಇಲಾಖೆಯ ತಜ್ಞರ ಸಮಿತಿ ಹಾಗೂ ಮುಡಾ ಮತ್ತು ನಗರಾಭಿವೃದ್ಧಿ ಇಲಾಖೆಯ ತಜ್ಞರ ಸಮಿತಿ ಇದ್ದು, ಇವೆರಡನ್ನೂ ಸೇರಿಸಿ ಒಂದು ಸಮಿತಿ ರಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಈವರೆಗೂ ಆ ಸಮಿತಿಯ ರಚನೆ ಆಗಿಲ್ಲ. ಈ ಸಮಿತಿಯ ಅನುಮತಿ ಇಲ್ಲದೆ ಯಾವುದೇ ಕಟ್ಟಡಗಳನ್ನು ಒಡೆಯುವಂತಿಲ್ಲ, ಮಾರ್ಪಾಡು ಮಾಡುವಂತಿಲ್ಲ. ಈ ಸಮಿತಿ ಚಾಮರಾಜನಗರದಲ್ಲಿ ಕಾರ್ಯಾರಂಭ ಮಾಡಿದೆ’ ಎಂದು ವಿವರಿಸಿದರು.

ನೆಲಸಮಗೊಳಿಸುವ ಹುನ್ನಾರ: ‘ಲ್ಯಾನ್ಸ್‌ಡೌನ್‌ ಹಾಗೂ ದೇವರಾಜ ಮಾರುಕಟ್ಟೆಯ ಕಟ್ಟಡಗಳು ಸುರಕ್ಷಿತವಾಗಿವೆ. ಗೋಡೆ ದುರ್ಬಲಗೊಂಡಿರುವ ಕಡೆಗಳಲ್ಲಿ ದುರಸ್ತಿ ಕಾರ್ಯ ಮಾಡಿದರೆ ಇನ್ನೂ 50 ವರ್ಷಗಳವರೆಗೆ ಈ ಕಟ್ಟಡಗಳು ಸುಸ್ಥಿತಿಯಲ್ಲಿ ಇರುತ್ತವೆ. ಆದರೆ, ಕಾಣದ ಕೈಗಳು ಇವುಗಳನ್ನು ನೆಲಸಮಗೊಳಿಸಲು ಹುನ್ನಾರ ನಡೆಸುತ್ತಿವೆ’ ಎಂದು ದೂರಿದರು.

ಅಭಿಯಾನದ ಎಂ.ಎನ್ ಧನುಷ್, ಸುದರ್ಶನ್, ಪುನೀತ್, ಅಜಯ್, ಆನಂದ್, ಹರ್ಷ ಹಾಜರಿದ್ದರು.

10 ದಿನಗಳ ಸಹಿ ಸಂಗ್ರಹ ಅಭಿಯಾನ
ಲ್ಯಾನ್ಸ್‌ಡೌನ್‌ ಹಾಗೂ ದೇವರಾಜ ಮಾರುಕಟ್ಟೆಯ ಕಟ್ಟಡಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿ 10 ದಿನಗಳ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳಾದ ಅರಮನೆ ಆವರಣ, ಪುರಭವನ, ದೇವರಾಜ ಮಾರುಕಟ್ಟೆ, ಜಗನ್ಮೋಹನ ಅರಮನೆ, ಜಯಲಕ್ಷ್ಮಿ ವಿಲಾಸ ಅರಮನೆಗಳ ಎದುರು ಸಹಿ ಸಂಗ್ರಹ ನಡೆಯಲಿದೆ. ಜನಾಭಿಪ್ರಾಯ ಹಾಗೂ ಸಹಿ ಸಂಗ್ರಹವನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು ಎಂದು ‘ಸೇವ್‌ ಹೆರಿಟೇಜ್ ಅಭಿಯಾನ’ದ ಸಂಚಾಲಕ ಕೆ.ಎಂ.ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.