ADVERTISEMENT

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಘೋಷಣೆ; ಚುನಾವಣೆಯಲ್ಲಿ ಗೆಲ್ಲಿಸಲು ಮನವಿ

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಘೋಷಣೆ; ಚುನಾವಣೆಯಲ್ಲಿ ಗೆಲ್ಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:44 IST
Last Updated 1 ಫೆಬ್ರುವರಿ 2023, 5:44 IST
ಪಿರಿಯಾಪಟ್ಟಣ ತಾಲ್ಲೂಕಿನ ಮಲ್ಲಿನಾಥಪುರದ ಬಳಿ ನಡೆದ ಕಾರ್ಯಕ್ರಮವನ್ನು ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಕೆ.ಮಹದೇವ್, ಪಿ.ಎಂ.ಪ್ರಸನ್ನ, ಅಣ್ಣಯ್ಯ ಶೆಟ್ಟಿ, ಎಚ್.ಡಿ.ರಾಜೇಂದ್ರ ಇದ್ದಾರೆ
ಪಿರಿಯಾಪಟ್ಟಣ ತಾಲ್ಲೂಕಿನ ಮಲ್ಲಿನಾಥಪುರದ ಬಳಿ ನಡೆದ ಕಾರ್ಯಕ್ರಮವನ್ನು ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಕೆ.ಮಹದೇವ್, ಪಿ.ಎಂ.ಪ್ರಸನ್ನ, ಅಣ್ಣಯ್ಯ ಶೆಟ್ಟಿ, ಎಚ್.ಡಿ.ರಾಜೇಂದ್ರ ಇದ್ದಾರೆ   

ಪಿರಿಯಾಪಟ್ಟಣ: ‘ನನ್ನನ್ನು ಮತ್ತು ಕೆ.ಮಹದೇವ್‌ ಅವರನ್ನು ಇದೊಂದು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿ. ಮುಂದಿನ ಚುನಾವಣೆಯಲ್ಲಿ ನಾವೇ ರಾಜಕೀಯದಿಂದ ಹೊರ ಉಳಿಯು ತ್ತೇವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ತಾಲ್ಲೂಕಿನ ಮಲ್ಲಿನಾಥಪುರದ ಬಳಿ ಮಂಗಳವಾರ ಆಯೋಜಿಸಿದ್ದ ಚಿಟ್ಟೇನಹಳ್ಳಿ, ಪೂನಾಡಹಳ್ಳಿ, ಹುಣಸವಾಡಿ ಮತ್ತು ನವಿಲೂರು ಗ್ರಾ.ಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ‌‌

‌‘ಎಚ್‌.ಡಿ. ದೇವೇಗೌಡರು ನಿಧನರಾದ ಬಳಿಕ ಲಕ್ಷಾಂತರ ಸಂಖ್ಯೆಯಲ್ಲಿ ಹೋಗಿ ಹೂವಿನ ಹಾರ ಹಾಕಿದರೆ ಪ್ರಯೋಜನವಿಲ್ಲ. ಅವರು ಬದುಕಿರುವಾಗಲೇ ಎಚ್‌.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು. ಅದನ್ನು ನೋಡಿ ಹೆಚ್ಚು ಸಂತಸ ಪಡುತ್ತಾರೆ. ಹೀಗಾಗಿ, ಕುಮಾರಸ್ವಾಮಿ ಅವರ ಕೈಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಕೋರಿದರು.

ADVERTISEMENT

ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ‘ನಮ್ಮಪ್ಪನಿಗೆ ಈ ಬಾರಿ ಅವಕಾಶ ನೀಡದಿದ್ದಲ್ಲಿ ದೇವರಾಣೆಗೂ ನಾನು ರಾಜಕೀಯದಿಂದ ವಿಮುಖ ರಾಗುತ್ತೇನೆ’ ಎಂದರು.

‘ಶಾಸಕ ಕೆ.ಮಹದೇವ್ ವಿರುದ್ಧ ಕೆಲವರು ವಾಟ್ಸ್‌ಆ್ಯಪ್‌, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುವ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಕೆ.ಮಹದೇವ್ ಮಾತನಾಡಿ, ‘ಅಭಿವೃದ್ಧಿಯನ್ನೇ ಕಾಣದೆ ಹಾಳು ಕೊಂಪೆಯಂತಿದ್ದ ಪಿರಿಯಾಪಟ್ಟಣ ತಾಲ್ಲೂಕನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದ್ದೇನೆ’ ಎಂದರು.

ಸಭೆಗೂ ಮೊದಲು ತಾಲ್ಲೂಕಿನ ಚಿಟ್ಟೆನಹಳ್ಳಿ ಗ್ರಾಮದಿಂದ ಬೆಳತೂರು, ನಂದಿನಾಥಪುರ, ಹುಣಸವಾಡಿ, ಕುಂದನಹಳ್ಳಿ ಸರ್ಕಲ್ ಮಾರ್ಗವಾಗಿ ಮಲ್ಲಿನಾಥಪುರ ಗ್ರಾಮದವರೆಗೆ ನೂರಾರು ಜೆಡಿಎಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.

ಸಭೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರೀತಿ ಅರಸ್, ಮೈಮುಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ, ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಪುರಸಭೆ ಅಧ್ಯಕ್ಷ ಕೆ.ಮಹೇಶ್, ಟಿಎಪಿಸಿಎಂಎಸ್ ನಿರ್ದೇಶಕಿ ಸುನಿತಾ ಮಂಜುನಾಥ್, ತಾ.ಪಂ ಮಾಜಿ ಸದಸ್ಯರಾದ ಎಸ್.ರಾಮು, ಎ.ಟಿ.ರಂಗಸ್ವಾಮಿ, ಮಲ್ಲಿಕಾರ್ಜುನ, ರಘುನಾಥ್, ಅಣ್ಣೇಗೌಡ, ಚಂದ್ರಶೇಖರ್, ಹೇಮಂತ್ ಕುಮಾರ್, ಗೋವಿಂದೇ ಗೌಡ, ಜಲೇಂದ್ರ, ವೆಂಕಟೇಶ್, ತಿಮ್ಮನಾಯ್ಕ, ದಿನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.