ADVERTISEMENT

ತಿ.ನರಸೀಪುರ: ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿ- 3ತಿಂಗಳಲ್ಲಿ 4ಜನ ಸಾವು

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 6:54 IST
Last Updated 22 ಜನವರಿ 2023, 6:54 IST
ಜಯಂತ್
ಜಯಂತ್    

ತಿ.ನರಸೀಪುರ: ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಮನೆಗೆ ತೆರಳುತ್ತಿದ್ದ 11 ವರ್ಷದ ಬಾಲಕ ಜಯಂತ್ ಮೇಲೆ ಚಿರತೆ ದಾಳಿ ಮಾಡಿ ಎಳೆದೊಯ್ದು ಕೊಂದಿದೆ.

ಗ್ರಾಮದ ದಶಕಂಠ ಎಂಬುವರ ಪುತ್ರ ಜಯಂತ್ ಸಂಜೆ ಸಂಬಂಧಿಕರ ಮನೆಗೆ ತೆರಳಿ ವಾಪಸಾಗುವಾಗ, ರಸ್ತೆ ಬದಿಯಲ್ಲಿ ಅವಿತಿದ್ದ ಚಿರತೆ ಬಾಲಕನ್ನು ಎಳೆದೊಯ್ದಿದೆ. ಬಾಲಕ ಮನೆಗೆ ಬಾರದ್ದರಿಂದ ಪೋಷಕರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದರು. ರಸ್ತೆ ಬದಿ ಬಿಸ್ಕೆಟ್ ಪೊಟ್ಟಣ ಹಾಗೂ ರಕ್ತದ ಕಲೆಗಳು ಕಂಡು ಬಂದಿತ್ತು. ಬೆಳಿಗ್ಗೆ ಬಾಲಕನ ಶವ ಪತ್ತೆಯಾಗಿದೆ. ಒಂದು ಕೈ, ತಲೆ ಭಾಗ ಬಿಟ್ಟು ಉಳಿದ ದೇಹದ ಭಾಗ ದೊರೆತಿದೆ ಎಂದು ಗ್ರಾಮಸ್ಥರು ‌ತಿಳಿಸಿದರು.

ಚಿರತೆ ದಾಳಿಯಿಂದ ತಾಲ್ಲೂಕಿನಲ್ಲಿ ಆಗಿರುವ ನಾಲ್ಕನೇ ಬಲಿ ಇದಾಗಿದೆ.

ADVERTISEMENT

ಚಿರತೆ ದಾಳಿ: ಸಾರ್ವಜನಿಕರ ಆಕ್ರೋಶ

ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಚಿರತೆ ದಾಳಿ ನಡೆಯುತ್ತಿದೆ. ಬಾಲಕ ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.

ಕಳೆದ ನವಂಬರ್‌ನಲ್ಲಿ ಎಂ.ಎಲ್. ಹುಂಡಿಯ ಮಂಜುನಾಥ್ ಎಂಬ ಯುವಕ, ಅದಾದ ಒಂದು ವಾರದ ಅಂತರದಲ್ಲಿ‌ ಎಸ್. ಕೆಬ್ಬೆಹುಂಡಿಯ ಮೇಘನಾ ಎಂಬ ಯುವತಿ, ಶುಕ್ರವಾರ ಕನ್ನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬುವರು ಚಿರತೆ ದಾಳಿಗೆ ತುತ್ತಾಗಿದ್ದರು. ಶನಿವಾರ ಹೊರಳಹಳ್ಳಿ ಗ್ರಾಮದಲ್ಲಿ 11 ವರ್ಷದ ಬಾಲಕ ಜಯಂತ್ ಚಿರತೆ ದಾಳಿಗೆ ತುತ್ತಾಗಿದ್ದಾನೆ. ನಿರಂತರವಾಗಿ ನಡೆಯುತ್ತಿರುವ ಈ ಘಟನೆಗಳಿಂದ ತಾಲೂಕಿನ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಸೇತುವೆ ಮೇಲೆ ಪ್ರತಿಭಟನೆ: ಹೊರಳಹಳ್ಳಿ ಗ್ರಾಮಸ್ಥರು, ತಾಲ್ಲೂಕು ಕುರುಬರ ಸಂಘದ ಮುಖಂಡರು, ರೈತರು ಪಟ್ಟಣದ ಕಪಿಲಾ ಸೇತುವೆಯಲ್ಲಿ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ನಿರಂತರವಾಗಿ ಈ ಚಿರತೆ ದಾಳಿ ಪ್ರಕರಣಗಳು ನಡೆಯುತ್ತಿದ್ದರೂ ಅರಣ್ಯ ಇಲಾಖೆ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿಲ್ಲ . ಇದರಿಂದಾಗಿ ಮತ್ತೆ ಮತ್ತೆ ಈ ಘಟನೆಗಳು ಮರುಕಳಿಸುತ್ತಿದೆ. ಜನರು ಆತಂಕದಲ್ಲೇ ಓಡಾಡುವಂತಾಗಿದೆ. ರೈತರು ತಮ್ಮ ಜಮೀನುಗಳಿಗೆ ತೆರಳಲು‌ ಭೀತಿ ಪಡುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಧೋರಣೆ ಹಾಗೂ ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.