ADVERTISEMENT

ಕನ್ನಡ ಉದ್ಯೋಗದ ಜೊತೆಗೆ ಜ್ಞಾನದ ಭಾಷೆಯಾಗಲಿ

ಸರಗೂರು ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ವೈ.ಡಿ.ರಾಜಣ್ಣ

ಎಸ್.ಆರ್.ನಾಗರಾಮ
Published 18 ಜನವರಿ 2025, 7:02 IST
Last Updated 18 ಜನವರಿ 2025, 7:02 IST
ಸರಗೂರಿನಲ್ಲಿ ಶುಕ್ರವಾರ ನಡೆದ ತಾಲ್ಲೂಕಿನ ಪ್ರಥಮ‌ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕವಿಯತ್ರಿ ಡಾ.ಪೂರ್ಣಿಮಾ ನೆರವೇರಿಸಿದರು. ಶಾಸಕ ಅನಿಲ್ ಚಿಕ್ಕಮಾದು, ಮಡ್ಡೀಕೆರೆ ಗೋಪಾಲ್, ವೈ.ಡಿ.ರಾಜಣ್ಣ, ಎಂ. ಕೆಂಡಗಣ್ಣಸ್ವಾಮಿ ಪಾಲ್ಗೊಂಡಿದ್ದರು
ಸರಗೂರಿನಲ್ಲಿ ಶುಕ್ರವಾರ ನಡೆದ ತಾಲ್ಲೂಕಿನ ಪ್ರಥಮ‌ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕವಿಯತ್ರಿ ಡಾ.ಪೂರ್ಣಿಮಾ ನೆರವೇರಿಸಿದರು. ಶಾಸಕ ಅನಿಲ್ ಚಿಕ್ಕಮಾದು, ಮಡ್ಡೀಕೆರೆ ಗೋಪಾಲ್, ವೈ.ಡಿ.ರಾಜಣ್ಣ, ಎಂ. ಕೆಂಡಗಣ್ಣಸ್ವಾಮಿ ಪಾಲ್ಗೊಂಡಿದ್ದರು   

ಸರಗೂರು: ‘ಶಿಕ್ಷಣದಿಂದ ಸಿಗುವ ಜ್ಞಾನದ ಮಾಧ್ಯಮ ಕನ್ನಡವಾದಾಗ ಮಾತ್ರ ನಮ್ಮ ಹೃದಯದ ಭಾಷೆ ಅರಳಬಲ್ಲದು, ವಿಕಾಸಗೊಳ್ಳಬಲ್ಲದು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ ಡಾ.ವೈ.ಡಿ.ರಾಜಣ್ಣ ಬಣ್ಣಿಸಿದರು.

ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ಹೃದಯದ ಭಾಷೆ. ಶಿಕ್ಷಣ ಬದುಕನ್ನು ಸಜ್ಜುಗೊಳಿಸಲಿದ್ದು, ಶಿಕ್ಷಣದ ಮೂಲಕ ಸಿಗುವ ಜ್ಞಾನ ಹಾಗೂ ವ್ಯಕ್ತಿತ್ವ ಬದುಕು ಕಟ್ಟಿಕೊಳ್ಳಲು ಭದ್ರ ಬುನಾದಿಯಾಗಿದೆ. ಕನ್ನಡ ಬದುಕು, ಜ್ಞಾನದ ಭಾಷೆಯಾಗಬೇಕು. ಜತೆಗೆ ಉದ್ಯೋಗದ ಭಾಷೆಯೂ ಆಗಬೇಕು. ಭಾಷೆ ಶಿಕ್ಷಣ, ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ ಅದರಾಚೆಗೆ ಕನ್ನಡತನವನ್ನು ಬೆಳೆಸುವ ಸಾಧನವಾಗಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

ಕೃಷಿ, ತೋಟಗಾರಿಕೆ ಕೇಂದ್ರಗಳು ಆರಂಭವಾಗಲಿ: ‘ಸರಗೂರು ತಾಲ್ಲೂಕು ಕೇಂದ್ರದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಎಂಜಿನಿಯರ್, ಕೃಷಿ, ತೋಟಗಾರಿಕೆಗೆ ಸಂಬಂಧಪಟ್ಟ ಡಿಪ್ಲೊಮಾ ಶಿಕ್ಷಣ ಕೇಂದ್ರಗಳನ್ನು ತಾಲ್ಲೂಕಿಗೆ ತಂದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ಹೊಂದಲು ಸಾಧ್ಯ. ಇದಲ್ಲದೆ ಪಟ್ಟಣದ ಪ್ರಮುಖ ರಸ್ತೆಗಳು, ವೃತ್ತಗಳಿಗೆ ಕನ್ನಡಕ್ಕಾಗಿ ದುಡಿದ ಮಹಾನೀಯರ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಸ್ಮರಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಕನ್ನಡ ಚಳವಳಿಗಾರರ ಸ್ಮರಣೆಯೂ ಮಹತ್ವದ ಸಂಗತಿ ಎನಿಸಿದೆ. ಗೂಗಲ್, ವೆಬ್‌ಸೈಟ್ ಹಾಗೂ ಆ್ಯಪ್‌ಗಳಲ್ಲಿ ಕನ್ನಡ ಇದ್ದರೂ ಭವಿಷ್ಯದ ದೃಷ್ಟಿಯಿಂದ ತಂತ್ರಜ್ಞಾನ ಕಲಿತ ಕನ್ನಡದ ವಿಜ್ಞಾನಿಗಳು, ಡಿಜಿಟಲ್ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಉಳಿಸುವ ಕೆಲಸ ಮಾಡಬೇಕಿದೆ. ಇತರೆ ಭಾಷೆಯಲ್ಲಿ ಬಿಡುಗಡೆಗೊಂಡ ಪುಸ್ತಕ ಅಥವಾ ಚಲನಚಿತ್ರವನ್ನು ಕನ್ನಡಕ್ಕೆ ತರುವ ಹಾಗೆ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಕನ್ನಡೀಕರಿಸುವ ವಿಜ್ಞಾನ ಲೇಖಕರಿಗೆ ಹೆಚ್ಚಿನ ಒತ್ತಾಸೆಯಾಗಿ ನಿಲ್ಲಬೇಕಿದೆ’ ಎಂದು ಹೇಳಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನವರು 18–30 ವರ್ಷದೊಳಗಿನವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಬೇಕು. ಆ ಮೂಲಕ ಯುವಕರೂ ಹೆಚ್ಚಾಗಿ ಸಮ್ಮೇಳನಗಳಲ್ಲಿ ಭಾಗವಹಿಸುವಂತೆ ಮಾಡಬೇಕು’ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ‘ಸರಗೂರು ತಾಲ್ಲೂಕು ಆದ ಬಳಿಕ ಮೊದಲ ಸಮ್ಮೇಳನ ದೊಡ್ಡದಾಗಿ ಹೊರಹೊಮ್ಮಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದು, ಇಡೀ ವಿಶ್ವದಲ್ಲೇ ಒಂದು ಭಾಷೆಗೆ ಹೆಚ್ಚು ಸದಸ್ಯರಿರುವುದು ದಾಖಲೆಯಾಗಿದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಸರಗೂರು ತಾಲ್ಲೂಕು ಅಧ್ಯಕ್ಷ ಎಂ. ಕೆಂಡಗಣ್ಣಸ್ವಾಮಿ, ಮಾಜಿ ಸಚಿವ ಎಂ.ಶಿವಣ್ಣ ಮಾತನಾಡಿದರು. ದಡದ‌ದಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಷಡಾಕ್ಷರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದ‌ ಮೊದಲು ರಾಜರ್ಷಿ ಕಲಾ ಬಳಗದ ನಾಡಗೀತೆ ಮತ್ತು ರೈತಗೀತೆ ಹಾಡಿದರು.

ತಹಶೀಲ್ದಾರ್ ಮೋಹನ ಕುಮಾರಿ, ಇಒ ಪ್ರೇಮಕುಮಾರ್, ಬಿಇಒ ಕಾಂತರಾಜು, ಕೇಂದ್ರ ಸೆನ್ಸಾರ್‌ ಮಂಡಳಿ ಮಾಜಿ ಸದಸ್ಯ ಎಸ್.ವಿ. ವೆಂಕಟೇಶ್, ಸಿ.ಕೆ. ಗಿರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ, ಭಾಗ್ಯಲಕ್ಷ್ಮೀ, ವೆಂಕಟಸ್ವಾಮಿ, ಗ್ರಾಮೀಣ ಮಹೇಶ್, ದೇವಲಾಪುರ ಸಿದ್ದರಾಜು, ಶಿವಣ್ಣ, ಮಲ್ಲೇಶ್, ಟೋಕನ್ ನಾಗರಾಜು, ಈರೇಗೌಡ, ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ಶಿವಕುಮಾರ್, ಸದಸ್ಯೆ ಹೇಮಾವತಿ, ಚೈತ್ರಾ, ಸಣ್ಣ ತಾಯಮ್ಮ, ಚಂದ್ರಕಲಾ, ನೂರಾಳಸ್ವಾಮಿ, ಚೈತ್ರಾ, ಉಮಾ, ಶ್ರೀನಿವಾಸ್, ದಿವ್ಯಾ, ಚೆಲುವ ಕೃಷ್ಣ, ವಿನಾಯಕ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಮೋಹನ್ ಕುಮಾರ್,ಕಂದೇಗಾಲ ಶಿವರಾಜು, ಶಿವಶಂಕರ್, ಮನುಗನಹಳ್ಳಿ ಮಂಜುನಾಥ್, ಸಣ್ಣಸ್ವಾಮಿ, ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಚಂದ್ರಶೇಖರ್, ಟಿ.ರವಿಕುಮಾರ್, ಸಕಲೇಶ್, ಎಚ್.ಎನ್. ಸುಧೀರ್, ಹನಿ, ಮಮತಾ ವೆಂಕಟೇಶ್, ಬೆಟ್ಟಸ್ವಾಮಿ, ಎಸ್.ಪಿ.ಪ್ರಸಾದ್ ಜೈನ್, ಲಂಕೆ ರಮೇಶ್, ಚಲುವರಾಜು, ಚಿನ್ನಯ್ಯ, ಎಂ.ಎನ್.ಭೀಮರಾಜು, ಗುಣಪಾಲ್ ಹಾಜರಿದ್ದರು.

‘ಸುಂದರ ಭಾಷೆ ನಮ್ಮದು’

ಸರಗೂರು: ‘ಕನ್ನಡವನ್ನು ಕೆಲವರು ಕಬ್ಬಿಣದ ಕಡಲೆ ಎನ್ನುತ್ತಾರೆ, ಆದರೆ ಸುಂದರ ಭಾಷೆ ನಮ್ಮದು. ಪೇಟ (ಕಿರೀಟ) ಇರುವುದು ಕನ್ನಡಕ್ಕೆ ಮಾತ್ರ. ಏಕೆಂದರೆ ಕನ್ನಡದಲ್ಲಿ ಏನು ಮಾತನಾಡುತ್ತೀವೋ ಅದನ್ನು ಬರೆಯುತ್ತೇವೆ. ಬರೆಯುವುದನ್ನು ಮಾತನಾಡುತ್ತೇವೆ’ ಎಂದು ಚಲನಚಿತ್ರ ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದರು.

ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸರಗೂರು ನಮ್ಮ ಮಾವನವರ ಊರು. ನಮಗೂ ಇಲ್ಲಿನ ನಂಟಿದೆ. ಇಲ್ಲಿ ಪ್ರತಿಭಾವಂತ ಮಕ್ಕಳಿರುವುದು ಹೆಮ್ಮೆ’ ಎಂದರು.

ಚಲನಚಿತ್ರ ನಿರ್ದೇಶಕ ಕಾರ್ತಿಕ್ ಸರಗೂರು ‘ತಾಲ್ಲೂಕು ದರ್ಶನ ವಿಷಯದ ಕುರಿತು ಸಾಹಿತ್ಯಿಕ, ಸಾಂಸ್ಕೃತಿಕ ನೆಲೆ’ ಕುರಿತು ವಿಚಾರ ಮಂಡಿಸಿದರು. ‘ಕನ್ನಡ ಶಾಲೆಗಳು-ಇತ್ತೀಚಿನ ಬೆಳವಣಿಗೆ’ ಕುರಿತು ಎಚ್.ಬಿ.ಬೆಟ್ಟಸ್ವಾಮಿ ವಿಚಾರ ಮಂಡಿಸಿದರು. ವಿವಿಧ ಸಮುದಾಯಗಳ ತಾಲ್ಲೂಕು ಅಧ್ಯಕ್ಷರಾದ ಶಿವಣ್ಣ, ವೀರಭದ್ರಪ್ಪ, ಎಂ.ಎನ್. ಭೀಮರಾಜ್, ಧರಣೇಶ್, ದಸಂಸದ ಇಟ್ನಾ ರಾಜಣ್ಣ, ನಿಂಗರಾಜು ಹೆಗ್ಗನೂರು ಹಾಜರಿದ್ದರು.

‘ಸರಗೂರು, ಎಚ್.ಡಿ.ಕೋಟೆ ಪ್ರಾಚೀನ ಪ್ರದೇಶಗಳು’

ಸರಗೂರು: ಸರಗೂರು ಮತ್ತು ಎಚ್.ಡಿ.ಕೋಟೆ ಪ್ರದೇಶಗಳು ಕರ್ನಾಟಕದ ಅತಿ ಪ್ರಾಚೀನ ಪ್ರದೇಶಗಳಾಗಿ ಗುರುತಿಸಿಕೊಂಡಿದ್ದು, ಇದರಿಂದಾಗಿ ಈ ಪ್ರದೇಶಗಳಿಗೆ ಹೆಚ್ಚಿನ ಗೌರವ ನೀಡಬೇಕಿದೆ ಎಂದು ಕವಯತ್ರಿ .ಟಿ.ಸಿ. ಪೂರ್ಣಿಮಾ ಮಾತನಾಡಿದರು.

ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಎಚ್.ಡಿ. ಕೋಟೆ ಮತ್ತು ಸರಗೂರು ಹಿಂದೆ ‘ಪೊನ್ನಾಡು’, ‘ಪೊನ್ನಾಡ’ ಎಂದು ಕರೆಯಲಾಗುತ್ತಿತ್ತು, ಆದರೆ ನಮ್ಮ ಕನ್ನಡದಲ್ಲಿ ‘ಪೊನ್ನಾಡು’ ಬಗ್ಗೆ ಪೂರಕ ಮಾಹಿತಿಗಳಿಲ್ಲ. ತಮಿಳು ಮತ್ತು ತೆಲುಗಿನಲ್ಲಿ ಈ ಪ್ರದೇಶಗಳ ಮಹತ್ವ ದಾಖಲಿಸಿದ್ದು, ಕನ್ನಡಕ್ಕೆ ತರ್ಜುಮೆಯಾಗಬೇಕಿದೆ, ಅಲ್ಲದೇ ಹೆಚ್ಚಿನ ಸಂಶೋಧನೆಗಳ ಆಗಬೇಕಿದೆ’ ಎಂದರು. ‘ಈ ಪ್ರದೇಶಗಳಲ್ಲಿ ಮಹದೇಶ್ವರರು ಚಲಿಸಿದ ಐತಿಹಾಸಿಕ ಸ್ಥಳಗಳಿವೆ, ಕಪಿಲೆ, ನುಗು, ತಾರಕ ನದಿಗಳು ಹರಿಯುವ ಪ್ರಮುಖ ಸ್ಥಳಗಳ ಇರುವುದು ಇಲ್ಲಿನ ಸಂಸ್ಕೃತಿ, ಸಂಪತ್ತನ್ನು ಹೆಚ್ಚಿಸುತ್ತದೆ' ಎಂದರು.

ಸರಗೂರು: ಸರಗೂರಿನ ಸ್ಥಳದ ಮಹಿಮೆಯನ್ನು ಕೇಳಿದ ಬಳಿಕ ಅಡಗೂರಿನ ಬದಲು ನಾನು ಸರಗೂರಿನಲ್ಲಿ‌ ಹುಟ್ಟಬೇಕಿತ್ತು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಹೇಳಿದರು.

ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಮಾತನಾಡಿ, ‘ಸರಗೂರಿನ ಬಗ್ಗೆ ಸವಿವರ ಇತಿಹಾಸಗಳನ್ನು ಅಧ್ಯಯನ ಮಾಡಿ ಅದರ ಬಗ್ಗೆ ಪುಸ್ತಕ ಹೊರತರಬೇಕು’ ಎಂದರು. ಸರದಂತೆ ಸರಗೂರನ್ನು ಕಪಿಲೆ ಸುತ್ತುವರಿದಿರುವ ಇತಿಹಾಸವಿದೆ. ಅಲ್ಲದೇ ಸರಗೂರಿನಲ್ಲಿ ಹುಟ್ಟಿದ ನಟ ಸುಬ್ಬಯ್ಯನಾಯ್ಡು ಹೆಸರಿನಲ್ಲಿ ರಂಗಮಂದಿರ ಆಗಬೇಕಿದ್ದು. ನನ್ನ ಅನುದಾನದಲ್ಲಿ ₹ 5ಲಕ್ಷ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಲೇಖಕ ಎಂ.ಎನ್. ರವಿಶಂಕರ್ ಮಾತನಾಡಿ 'ಅತಿಯಾದ ಅಭಿವೃದ್ಧಿಯಿಂದಾಗಿ ನಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಾ ಸಾಗಿದ್ದೇವೆ, ಬೆಳವಣಿಗೆಯಾದಂತೆ ಸಾಗುತ್ತು ಸಂಸ್ಕೃತಿ ಅಭಿವೃದ್ಧಿಯಾದಾಗ ಮಾತ್ತ ನಮ್ಮತನ ಉಳಿಯಲಿದೆ’ ಎಂದರು.

ಮೈಸೂರಿನ ಬಿಜಿಎಸ್ ಬಿಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ‘ಕನ್ನಡ ಶಾಲೆಗಳು-ಇತ್ತೀಚಿನ ಬೆಳವಣಿಗೆ’ ಕುರಿತು ವಿಚಾರ ಮಂಡನೆಯಲ್ಲಿ ಮಾತನಾಡಿ, ’ಪರ ಭಾಷೆಯನ್ನು ಕಲಿತರೂ ನಮ್ಮ ಭಾಷೆಯಲ್ಲಿಯೇ ವ್ಯವಹರಿಸಬೇಕು, ಇತ್ತೀಚಿನ ದಿನಗಳಲ್ಲಿ ವಿಶ್ವವ್ಯಾಪಿ ಕನ್ನಡ ಬೆಳೆಯುತ್ತಿದೆ, ಆದರೆ ನಮ್ಮ ರಾಜ್ಯದಲ್ಲಿಯೇ ಕೆಲವೆಡೆ ಕನ್ನಡದ ಬಗ್ಗೆ ತಾತ್ಸಾರ ಮನೋಭಾವಕ್ಕೆ ಬಲಿಯಾಗುತ್ತಿದೆ’ ಎಂದು ವಿಷಾದಿಸಿದರು.

ಎಚ್.ಡಿ.ಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ್, ಶಾಸಕ ಶ್ರೀವತ್ಸ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿ, ಸಿ.ಕೆ.ಗಿರೀಶ್, ಪದ್ಮಶ್ರೀ ಪುರಸ್ಕೃತ ಸೋಮಣ್ಣ, ಮಹಮ್ಮದ್ ಅಂಜುಂ ಪಾಷ, ಚಲುವರಾಜು, ಶಿವಶಂಕರ್, ಸಿದ್ದರಾಜು, ರವಿಕುಮಾರ್, ಸಿ.ಕೆ. ಗಿರೀಶ್, ಪರೀಕ್ಷಿತರಾಜೇ ಅರಸ್, ಚಲುವರಾಜು, ಇದಾಯತ್, ಶಿವಶಂಕರ, ನಾಗರಾಜು, ಬೆಟ್ಟಸ್ವಾಮಿ, ಮನುಗನಹಳ್ಳಿ ಮಂಜು ಇದ್ದರು.

ಕನ್ನಡವನ್ನು ಕಾಪಾಡುವ ದೃಷ್ಟಿಯಿಂದ ನಾಲ್ವಡಿಯವರು ಕಸಾಪ ಸ್ಥಾಪನೆ ಮಾಡಿದ್ದು, ನಮ್ಮ ನಾಡು, ಕಲೆ, ಸಂಸ್ಕೃತಿಯನ್ನು ಪ್ರಚಾರಕ್ಕೆ ತಂದು ಅದನ್ನು ಕಾಪಾಡುವುದು ನಮ್ಮ ಜವಾಬ್ದಾರಿ.
ಸುನಿಲ್ ಬೋಸ್, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.