ADVERTISEMENT

ಸಮಾಜದ ತಲ್ಲಣಕ್ಕೆ ರಾಗ ಸ್ಪಂದಿಸಲಿ: ಟಿ.ಎಂ.ಕೃಷ್ಣ

ರಾಜೀವ ತಾರಾನಾಥ ಅವರಿಗೆ ಪ್ರೀತಿಯ ನಮನ ಕಾರ್ಯಕ್ರಮದಲ್ಲಿ ಟಿ.ಎಂ.ಕೃಷ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:16 IST
Last Updated 11 ಆಗಸ್ಟ್ 2024, 16:16 IST
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜೀವ ತಾರಾನಾಥ ಅವರ ಭಾವಚಿತ್ರಕ್ಕೆ ವಿಜಯಾ ಅವರು ಪುಷ್ಪಾರ್ಚನೆ ಮಾಡಿದರು. ಪಂಡಿತ್ ನಯನ್ ಘೋಷ್, ಜಯಂತ್ ಕಾಯ್ಕಿಣಿ, ಧರಣಿದೇವಿ ಮಾಲಗತ್ತಿ, ಕೃಷ್ಣಾ ಮನವಳ್ಳಿ, ಟಿ.ಎಂ. ಕೃಷ್ಣ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ
ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜೀವ ತಾರಾನಾಥ ಅವರ ಭಾವಚಿತ್ರಕ್ಕೆ ವಿಜಯಾ ಅವರು ಪುಷ್ಪಾರ್ಚನೆ ಮಾಡಿದರು. ಪಂಡಿತ್ ನಯನ್ ಘೋಷ್, ಜಯಂತ್ ಕಾಯ್ಕಿಣಿ, ಧರಣಿದೇವಿ ಮಾಲಗತ್ತಿ, ಕೃಷ್ಣಾ ಮನವಳ್ಳಿ, ಟಿ.ಎಂ. ಕೃಷ್ಣ ಪಾಲ್ಗೊಂಡರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಸಮಾಜದ ತಲ್ಲಣಗಳಿಗೆ ಸಂಗೀತ, ರಾಗ ಸ್ಪಂದಿಸಬೇಕು’ ಎಂದು ಕರ್ನಾಟಕ ಸಂಗೀತ ಕಲಾವಿದ ಟಿ.ಎಂ.ಕೃಷ್ಣ ಆಶಿಸಿದರು.

‘ಪಂಡಿತ್ ರಾಜೀವ್‌ ತಾರಾನಾಥ್‌ ಮೆಮೋರಿಯಲ್ ಟ್ರಸ್ಟ್‌’ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಭಾನುವಾರ ನಡೆದ ಪಂಡಿತ್‌ ರಾಜೀವ ತಾರಾನಾಥ ಅವರಿಗೆ ಪ್ರೀತಿಯ ನಮನ ಕಾರ್ಯಕ್ರಮದಲ್ಲಿ ‘ಎರಡು ಭಿನ್ನ ಧಾರೆಗಳು’ ಎಂಬ ವಿಷಯ ಕುರಿತು ಮಾತನಾಡಿದರು.

‘ಇಲ್ಲಿ ಯಾರೋ ಖರೀದಿಗೆ ನಿಂತಿದ್ದಾರೆ. ಸಂಗೀತಗಾರರು ಏನನ್ನೋ ಮಾರಬೇಕು ಎಂಬಂತೆ ಬದುಕಲು ಸಾಧ್ಯವೇ. ಹೊರಗಿನ ತಲ್ಲಣಗಳು ನಮ್ಮ ರಾಗ, ಘರಾನಾದಲ್ಲಿ ಬದಲಾವಣೆ ತರುವುದಿಲ್ಲ ಎಂದರೆ, ನಾವು ಯಾವ ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದೇವೆ’ ಎಂದು ಪ್ರಶ್ನಿಸಿದರು.

ADVERTISEMENT

‘ರಾಜೀವ ವಿಭಿನ್ನ ವ್ಯಕ್ತಿತ್ವ ಹೊಂದಿದ್ದರು. ಅವರೂ ಯಾವುದೋ ಒಂದು ಗುಂಪಿಗೆ ಸೀಮಿತವಾಗಿರಲಿಲ್ಲ. ಅವರು ತಮ್ಮ ಕುಟುಂಬದ ಹಿನ್ನೆಲೆ ಮತ್ತು ಅನುಭವದ ಕಾರಣದಿಂದ ಶಾಸ್ತ್ರೀಯ ಪ್ರಪಂಚಕ್ಕೆ ಹೊಸತನ ತಂದಿದ್ದರು’ ಎಂದರು.

‘ವಿಮರ್ಶಾತ್ಮಕವಾಗಿ ಬದುಕುವ ಯಾರೇ ಆಗಿದ್ದರೂ ವ್ಯವಸ್ಥೆಗೆ ವಿರುದ್ಧವಾಗಿ ಈಜಬೇಕಾಗುತ್ತದೆ. ರಾಜೀವರಂತೆ ತಮ್ಮ ವೃತ್ತಿಯನ್ನು ಅದ್ಭುತವಾಗಿ ಪ್ರೀತಿಸುವವರು. ಆಂತರ್ಯದಿಂದ ಕೆಲಸ ಮಾಡುವವರೂ ಮಾತ್ರ ಈ ವ್ಯವಸ್ಥೆ ನೀಡುವ ಹೊರೆಯನ್ನು ಹೊರಬಲ್ಲರು’ ಎಂದು ಹೇಳಿದರು.

ಬಯಲು ಮತ್ತು ಆಲಯಗಳು ಒಂದಾಗಿರುವ ನಮ್ಮನ್ನು ಜಾಗೃತಗೊಳಿಸುವ ಅಪರೂಪದ ಮೇಧಾವಿ ರಾಜೀವ ತಾರಾನಾಥ.
ಜಯಂತ ಕಾಯ್ಕಿಣಿ, ಸಾಹಿತಿ

‘ರಾಜೀವ ಅವರ ಚಿಂತನೆ, ಬದುಕಿದ ರೀತಿ ನಮಗೆ ರಾಗ, ಘರಾನಾಗೆ ಸತ್ಯವಾಗಿರುವಂತೆ ಹೇಳುತ್ತಿದೆ. ಉತ್ತಮವಾಗಿ ಪದಗಳನ್ನು, ರಾಗವನ್ನು ಹೇಳುವುದಲ್ಲ. ಅದನ್ನು ಅರಗಿಸಿಕೊಂಡು ಅದರಲ್ಲಿಯೇ ಬದುಕಬೇಕು. ಯಾವುದು ನಮ್ಮನ್ನು ವಿಭಜಿಸಲು ಕಾದಿದೆಯೋ ಅದರಿಂದಲೂ ಮುರಿಯದೇ ಉಳಿಯಬೇಕು. ರಾಜೀವ ತಾರಾನಾಥ ಮತ್ತು ಅವರ ಚಿಂತನೆ ಎರಡೂ ಭಿನ್ನವಾಗಿದ್ದು, ಅವರ ಚಿಂತನೆಯನ್ನು ಜೀವಿಸುವವರು ಅವರನ್ನು ಕಾಣುತ್ತಾರೆ’ ಎಂದು ತಿಳಿಸಿದರು.

ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ‘ರಾಜೀವ ತಮ್ಮ ತಂದೆ, ಗುರುಗಳ ಬಗ್ಗೆ ಮಾತನಾಡುತ್ತಾ ಸಮುದ್ರದ ಕಲ್ಪನೆಯನ್ನು ಯಾವಾಗಲೂ ತರುತ್ತಿದ್ದರು. ನಾವು ಅವರ ಮುಂದೆ ಬೊಗಸೆ ಎನ್ನುತ್ತಿದ್ದರು. ಆ ಮಾತಿನಂತೆಯೇ ಅವರೂ ನನಗೆ ಸಮುದ್ರದಂತೆ ಭಾಸವಾಗುತ್ತಿದ್ದಾರೆ’ ಎಂದರು.‌

ಪಂಡಿತ್‌ ನಯನ್‌ ಘೋಷ್‌ ‘ಸರೋದ್‌ ಸಿತಾರ್‌ ತಬಲಾ’ ವಿಷಯ ಕುರಿತು ಮಾತನಾಡಿದರು. ಅಂಶನ್‌ ಕುಮಾರ್‌ ಅವರ ರಾಜೀವ ಕುರಿತ ‘ಎ ಲೈಫ್‌ ಇನ್ ಮ್ಯೂಸಿಕ್‌’ ಜೀವನ ಚಿತ್ರ ಪ್ರಸಾರಗೊಂಡಿತು. ಜನಾರ್ದನ್‌ (ಜನ್ನಿ) ಅವರಿಂದ ‘ಕುರಿ’ ನಾಟಕದ ಗೀತೆಗಳ ಗಾಯನ ಗಮನಸೆಳೆಯಿತು. ಸಿತಾರ್‌, ತಬಲಾ ವಾದನ ನಡೆದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಇದ್ದರು.

ಸರೋದ್‌ನ ತಂತಿಗಳು ತುಂಡಾದವು...

‘ದೆಹಲಿಯಲ್ಲಿನ ಸರೋದ್‌ ವಾದನ ಕಾರ್ಯಕ್ರಮವೊಂದರಲ್ಲಿ ಕೊನೆಯ ಹಂತದಲ್ಲಿ ಸರೋದ್‌ನ ತಂತಿಗಳು ತುಂಡಾಗಿದ್ದವು. ಆಗ ರಾಜೀವ ಬಿಕ್ಕಳಿಸಿ ಅತ್ತಿದ್ದರು. ಅವರಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ; ಅದು ಬಾಬರಿ ಮಸೀದಿ ಧ್ವಂಸವಾದ ಕ್ಷಣವಾಗಿತ್ತು‌’ ಎಂದು ಪತ್ರಕರ್ತೆ ವಿಜಯಾ ತಿಳಿಸಿದರು. ‘ಜೀವದ ಗೆಳೆಯ ಹೀಗಿದ್ದರೂ’ ಎಂದು ಮಾತನಾಡುತ್ತಾ ‘ರಾಜೀವ ಅವರು ವರ್ತಮಾನದ ಗಲಭೆ ಕ್ಷೋಭೆಗಳಿಗೆ ತಲ್ಲಣಿಸುತ್ತಿದ್ದರು. ಗುಜರಾತ್ ಹತ್ಯಾಕಾಂಡ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ‘ಲೋಕದಲ್ಲಿ ಯಾರು ಯಾರನ್ನೂ ಹಿಂಸಿಸಬಾರದು. ಯಾವತ್ತೂ ನೋವಿಗೆ ಹಿಂಸೆಗೆ ಜಾಗ ಕೊಡಬಾರದು’ ಎಂದು ಹೇಳಿದ್ದರು. ಮುಸ್ಲಿಮರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು‌‌. ತಳ ಸಮುದಾಯವರೂ ಅವರ ಮನೆಯಲ್ಲಿದ್ದರು. ಎಲ್ಲರನ್ನು ಸಮನಾಗಿ ನೋಡುವ ವ್ಯಕ್ತಿತ್ವದ ಪ್ರತಿಭಾವಂತನಿಗೆ ಸಿಗಬೇಕಾದ ಗೌರವಗಳು ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಅವರು ಸಂಗೀತದಲ್ಲಿ ಎಷ್ಟು ಸಮರ್ಥರೋ ಸಾಹಿತ್ಯದಲ್ಲಿಯೂ ಅಷ್ಟೇ ಸಮರ್ಥರು. ಯಾವಾಗಲೂ ಕಟ್ಟುವ ಕೆಲಸವನ್ನು ಮಾಡಲು ಬಯಸುತ್ತಿದ್ದರು‌. ಅಭಿನಯ ತರಂಗ ಶಾಲೆ ಪ್ರಾರಂಭಕ್ಕೆ ಕಾರಣರಾಗಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.