ADVERTISEMENT

ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಎಂ.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:10 IST
Last Updated 26 ಸೆಪ್ಟೆಂಬರ್ 2024, 16:10 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದಂತೆ ಮುಡಾ ಹಗರಣದಲ್ಲಿ ತನಿಖೆ ಎದುರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಪಾರದರ್ಶಕ ತನಿಖೆಗೆ ಸಹಕರಿಸಬೇಕು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ರವಿಕುಮಾರ್ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿದರೆ ಲೋಕಾಯುಕ್ತದ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹಿಂದೆ ಅರ್ಕಾವತಿ ಡಿ–ನೋಟಿಫಿಕೇಷನ್ ಪ್ರಕರಣದಲ್ಲೂ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದರು. ಅಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿ ಲೋಕಾಯುಕ್ತದ ಶಕ್ತಿಯನ್ನೇ ದುರ್ಬಳಗೊಳಿಸಿದ್ದರು’ ಎಂದು ಆರೋಪಿಸಿದರು.

‘ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಮುಖ್ಯಮಂತ್ರಿ ವರ್ತಿಸಬಾರದು. ತನಿಖೆ ಪೂರ್ಣಗೊಂಡು ನಿರ್ದೋಷಿಯಾದಾಗ ಮತ್ತೆ ಅಧಿಕಾರ ನಡೆಸಲಿ. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರೂ ಭ್ರಷ್ಟಾಚಾರ ನಡೆಸಿದವರೇ ಆಗಿದ್ದು, ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ. ನಮ್ಮ ಪಕ್ಷದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ನಾಗೇಂದ್ರ, ಜಿಲ್ಲಾ ಕಾರ್ಯದರ್ಶಿಗಳಾದ ಸುಂಕಪ್ಪ, ಆನಂದ್, ರವಿ, ರಾಜೇಂದ್ರ, ಕೆ.ಆರ್.ನಗರ ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಮಹದೇವಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.