ADVERTISEMENT

‘ಲಾಕ್‌ಡೌನ್‌ ಕಠಿಣವಿರಲಿ; ಜನರ ಜೀವ ಉಳಿಯಲಿ’

ಜನರ ಜೀವ ಎಲ್ಲದಕ್ಕಿಂತಲೂ ದೊಡ್ಡದು; ಎಲ್ಲರೂ ಆರೋಗ್ಯದಿಂದಿದ್ದರಷ್ಟೇ ಬದುಕು ನಮ್ಮದು

ಡಿ.ಬಿ, ನಾಗರಾಜ
Published 10 ಮೇ 2021, 3:59 IST
Last Updated 10 ಮೇ 2021, 3:59 IST
ಮೈಸೂರಿನಲ್ಲಿ ಮಾವಿನ ಹಣ್ಣಿನ ಮಾರಾಟ
ಮೈಸೂರಿನಲ್ಲಿ ಮಾವಿನ ಹಣ್ಣಿನ ಮಾರಾಟ   

ಮೈಸೂರು: ‘ಮಾವಿನ ಹಂಗಾಮು ಈಗಷ್ಟೇ ಆರಂಭವಾಗಿದೆ. ಎರಡನೇ ಹಂತದ ಲಾಕ್‌ಡೌನ್‌ ಸಹ ಶುರುವಾಗಿದೆ. ಆದರೆ ಈ ಬಾರಿಯದ್ದು ಮಾತ್ರ ಹಿಂದಿನಂತಿರೋದು ಬೇಡ. ಒಂದಿಷ್ಟು ಕಠಿಣವಾಗಿರಲಿ...’

‘ಲಾಕ್‌ಡೌನ್‌ ಕಠಿಣವಾಗಿ ಜಾರಿಯಾದರೆ; ನಾವು ಗುತ್ತಿಗೆ ಪಡೆದ ಮಾವಿನ ಮರದಲ್ಲೇ ಕಾಯಿ ಉಳಿಯುತ್ತವೆ. ಕೊಯ್ಲು ಮಾಡಿ ಹಣ್ಣು ಮಾರಾಟ ಮಾಡೋದು ದೂರದ ಮಾತು. ಇದರಿಂದ ಸಹಜವಾಗಿಯೇ ಈ ವರ್ಷವೂ ಸಹ ಹಿಂದಿನ ವರ್ಷದಂತೆಯೇ ನಮಗೆ ನಷ್ಟವುಂಟಾಗಲಿದೆ’ ಎಂದು ಮಾವಿನ ಹಣ್ಣು ಮಾರಾಟಗಾರರಾದ ಶ್ರೀನಿವಾಸ್‌ ಹಾಗೂ ರಮೇಶ್‌ ಬೇಸರ ವ್ಯಕ್ತಪಡಿಸಿದರು.

ಇದರ ಜೊತೆಗೆ ಪ್ರಸ್ತುತ ಅತ್ಯಗತ್ಯವಿರುವ ಅನಿವಾರ್ಯ ಕ್ರಮದ ಬಗ್ಗೆಯೂ ಇವರಿಬ್ಬರೂ ಹೇಳಿದರು.

ADVERTISEMENT

‘ಈ ವರ್ಷವೂ ನಮ್ಮ ಕೈ ಸುಟ್ಟುಕೊಳ್ಳಲು ಈಗಾಗಲೇ ಮಾನಸಿಕವಾಗಿ ಸಿದ್ಧರಾಗಿದ್ದೇವೆ. ಆದರೆ, ಜನರ ಚಿತೆ ಸುಡೋದು ಮೊದಲು ನಿಲ್ಲಲಿ ಎಂಬುದೇ ನಮ್ಮಾಶಯ. ನಮಗಾಗುವ ಕಷ್ಟ–ನಷ್ಟಕ್ಕಿಂತ ಜನರ ಜೀವ ದೊಡ್ಡದು. ಎಲ್ಲರೂ ಆರೋಗ್ಯ ದಿಂದಿದ್ದರಷ್ಟೇ ನಮ್ಮ ಬದುಕು ನಡೆಯೋದು. ಆಗಲೇ ಅದಕ್ಕೊಂದು ಸಾರ್ಥಕಭಾವ ದೊರಕೋದು. ಸೂತಕದ ಬೀದಿಯಲ್ಲಿ ಹಣ್ಣು ಮಾರೋಕೆ ಮನಸ್ಸಾಗಲ್ಲ’ ಎಂದು ಶ್ರೀನಿವಾಸ್‌ ಹೇಳಿದ್ದಕ್ಕೆ, ರಮೇಶ್‌ ಧ್ವನಿಗೂಡಿಸಿದರು.

‘ನೆರೆಯ ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಗ್ರಾಮವೊಂದರಲ್ಲಿ 125 ಮರಗಳಿರುವ ಮಾವಿನ ತೋಪೊಂದನ್ನು ₹ 1.80 ಲಕ್ಷಕ್ಕೆ ಬೆಳೆಗಾರರಿಂದ ಗುತ್ತಿಗೆ ಪಡೆದಿದ್ದೇನೆ. ಈಗಾಗಲೇ ಪೂರ್ತಿ ಹಣ ಕೊಟ್ಟಿರುವೆ. 50 ಮರದಲ್ಲಿ 2 ಟನ್‌ ಹಣ್ಣು ಕೊಯ್ದುಕೊಂಡು ಬಂದು ಮಾರಾಟ ಮಾಡುತ್ತಿದ್ದೇನೆ’ ಎಂದು ಕ್ಯಾತಮಾರ ನಹಳ್ಳಿಯ ರಮೇಶ್‌ ತಿಳಿಸಿದರು.

‘ಹೊಸ ಲಾಕ್‌ಡೌನ್‌ನಲ್ಲಿ ಅಂತರ ಜಿಲ್ಲಾ ಸಂಚಾರಕ್ಕೆ ನಿಷೇಧವಿದೆ. ಆದ್ದರಿಂದ ತೋಪಿಗೆ ಹೋಗಿ ಹಣ್ಣು ತರೋದು ದೂರದ ಮಾತು. ಇದ್ದ ಹಣ್ಣನ್ನೇ ಮಾರಿ ಮುಗಿಸುವೆ. ಕೈಗೆ ಸಿಕ್ಕಷ್ಟು ಕಾಸು ಸಿಗಲಿ. ನಷ್ಟಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಸಾಲ ಮಾಡಿರುವೆ. ಜೀವ ಉಳಿಸಿಕೊಳ್ಳೋಣ ಮೊದಲು. ನಂತರ ಉಳಿದದ್ದು’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ಲಾಕ್‌ಡೌನ್‌ ನಂತರ ಅವಕಾಶ ಸಿಕ್ಕರೆ ಮದ್ದೂರಿಗೆ ಹೋಗಿ ಮರದಲ್ಲೇ ಎಷ್ಟು ಉಳಿದಿರುತ್ತದೆ ಅಷ್ಟು ಹಣ್ಣನ್ನು ಕೊಯ್ಲು ಮಾಡಿಕೊಂಡು ಬರಬೇಕು ಎಂದುಕೊಂಡಿರುವೆ. ಈಗಲೇ ಏನನ್ನೂ ನಿರ್ಧರಿಸಲಾಗಲ್ಲ. ಭಗವಂತನೇ ದಾರಿ ತೋರಿಸಬೇಕು’ ಎಂದು ರಮೇಶ್‌ ಆಗಸದತ್ತ ತಮ್ಮ ನೋಟ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.